×
Ad

ಗದಗ | ಮದುವೆಯಾಗು ಅಂದಿದ್ದಕ್ಕೆ ಯುವತಿಯ ಹತ್ಯೆ: ಆರೋಪಿಯ ಬಂಧನ

Update: 2025-06-20 16:54 IST

ಗದಗ: ಮದುವೆಯಾಗು ಅಂದಿದ್ದಕ್ಕೆ ಪ್ರೇಯಸಿಯನ್ನು ಕೊಲೆ ಮಾಡಿ ಹೂತುಹಾಕಿ ಆರು ತಿಂಗಳ ನಂತರ ಪ್ರಕರಣ ಬಯಲಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಕೊಲೆಯಾದ ಯುವತಿ ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಮಧುಶ್ರಿ ಅಂಗಡಿ ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಯುವಕ ಅದೇ ಗ್ರಾಮದ ಸತೀಶ್ ಹಿರೇಮಠ, ಪೊಲೀಸರ ತನಿಖೆಯಿಂದ 6 ತಿಂಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ ಮಾಡುತ್ತಿದ್ದ ಆರೋಪಿ ಸತೀಶ್ ನನ್ನು ಪೊಲೀಸರು బంಧಿಸಿದ್ದಾರೆ.

ಸತೀಶ್ ಹಾಗೂ ಯುವತಿ 6 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಯುವತಿಯ ಕುಟುಂಬಸ್ಥರಿಗೆ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿ ಆಕೆಯನ್ನು ಗದಗದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟಿರುತ್ತಾರೆ. ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗಿತ್ತು. 2024 ಡಿ.16ರ ರಾತ್ರಿ ಯುವತಿ ಗದಗ ನಗರದ ಅವರ ಸಂಬಂಧಿಕರ ಮನೆಯಿಂದ ಹೊರ ಹೋಗಿದ್ದಳು. ಸಂಬಂಧಿಕರು ಎಲ್ಲ ಕಡೆ ಹುಡುಕಾಟ ನಡೆಸಿ, 2025ರ ಜನವರಿ 12 ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆ ಪ್ರಕರಣವನ್ನು ದಾಖಲು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2024 ಡಿ.16ರಂದು ಸತೀಶ್ ಹಿರೇಮಠ ಯುವತಿಯನ್ನು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ತೋಟದ ಮನೆಗೆ ಕರೆತಂದಿರುತ್ತಾನೆ. ಆಗ ಯುವತಿ ಮದುವೆಯಾಗು ಎಂದು ಹಠ ಹಿಡಿಯುತ್ತಾಳೆ. ಆಗ ಇಬ್ಬರ ನಡುವೆ ಜಗಳವಾಗಿದ್ದು, ಯುವತಿಯನ್ನು ಆಕೆಯ ವೇಲ್ ನಿಂದ ಕುತ್ತಿಗೆಗೆ ಬಿಗಿದು, ಸತೀಶ್ ಕೊಲೆ ಮಾಡಿ ನಂತರ ಪಕ್ಕದ ಹಳ್ಳದಲ್ಲಿ ಮೃತದೇಹವನ್ನು ಹೂತು ಹಾಕಿ, ಏನೂ ನಡೆದೇ ಇಲ್ಲ ಎನ್ನುವ ಹಾಗೆ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಗಾಗ ಬಂದು ಎಲುಬುಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡುತ್ತಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಸ್ವಿಚ್ ಆಫ್ ಆದ ಮೊಬೈಲ್ ಗೆ ಕಂಪೆನಿಯ ಒಂದು ಮೆಸೇಜ್ ಬಂದಿರುತ್ತದೆ. ಆರೋಪಿ ಸತೀಶ್ ಹೇಳಿರುವ ಲೊಕೇಶನ್ ಹಾಗೂ ಮೊಬೈಲ್‌ಗೆ ಬಂದಿರುವ ಮೆಸೇಜ್ ಲೊಕೇಶನ್ ಬೇರೆಯಾಗಿರುತ್ತದೆ. ಹೀಗಾಗಿ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು, ಮೃತದೇಹವನ್ನು ಹೂತು ಹಾಕಿದ ಜಾಗವನ್ನು ತೋರಿಸಿದ್ದಾನೆ. ಹೀಗಾಗಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News