ಸಿದ್ಧ ಟಿಪ್ಪಣಿ ಮೀರಿದ ಸತ್ಯ!

ಸಾಹಿತ್ಯಕ ಸಂಸ್ಕೃತಿಯ ಸತ್ವ ಇರುವುದೇ ಎಲ್ಲ ಅಭಿಪ್ರಾಯ ಭೇದ, ಭಿನ್ನಮತಗಳ ನಡುವೆಯೂ ಅಷ್ಟಿಷ್ಟು ಸತ್ಯ ಹೇಳುವ ದನಿಗಳು ಉಳಿದೇ ಇರುತ್ತವೆ ಎಂಬುದರಲ್ಲಿ; ಇಲ್ಲಿ ಸೂಕ್ಷ್ಮ ಜೀವಿಗಳಾದ ಕೆಲವರಾದರೂ ನಿಷ್ಠುರ ಸಾಹಿತ್ಯ ತೀರ್ಮಾನಗಳನ್ನು ತಳೆಯದಿದ್ದರೆ ಇಡೀ ಸಂಸ್ಕೃತಿಯೇ ಭೋಳೆ ಸಂಸ್ಕೃತಿಯಾಗುತ್ತದೆ!

Update: 2024-03-30 05:19 GMT

ಎದುರಿಗೆ ಕೂತಿದ್ದ ಗೆಳೆಯ-ವಿಮರ್ಶಕ ದಂಡಪ್ಪನವರು ವಿಸ್ಮಯದಿಂದ ಹುಬ್ಬೇರಿಸಿದರು. ಆ ವಿಸ್ಮಯವನ್ನು ಅವರು ಮತ್ತೆ ಮತ್ತೆ ನೆನಪಿಸಿಕೊಂಡಿದ್ದರಿಂದ ಅದು ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಆ ಕಾಲದಲ್ಲಿ ದಂಡಪ್ಪ ಆಗಾಗ ವಿಮರ್ಶಾ ಬರಹಗಳನ್ನು ಬರೆಯುತ್ತಿದ್ದರು. ಅವತ್ತು ಅವರು ಸಂಪಾದಿಸಿದ ಸಿದ್ಧಲಿಂಗಯ್ಯನವರ ಕೃತಿಗಳ ವಾಚಿಕೆ ಬಿಡುಗಡೆಯಾಗಿತ್ತು. ಆಗ ಅವರು ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಆಗಿದ್ದರು; ಈಗಿನಂತೆ ಪೂರ್ಣ ಪ್ರಮಾಣದ ಸಾಹಿತ್ಯ ವಿಮರ್ಶಕರಾಗಿರಲಿಲ್ಲ.

ಅವರ ಆ ಗಳಿಗೆಯ ವಿಸ್ಮಯಕ್ಕೆ ಅವತ್ತಿನ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ನನ್ನ ಬಾಯಿಂದ ಅಕಸ್ಮಾತ್ ಹೊರ ಬಂದ ತಕ್ಷಣದ ಪ್ರತಿಕ್ರಿಯೆ ಕಾರಣವಾಗಿತ್ತು.

ಈ ಅನುಭವ ನಿಮಗೂ ಆಗಿರಬಹುದು. ನೀವು ತಯಾರು ಮಾಡಿಕೊಂಡ ಭಾಷಣದ ಟಿಪ್ಪಣಿಗಳು ಎಲ್ಲೋ ಚೆಲ್ಲಾಪಿಲ್ಲಿಯಾಗಿ, ಆ ಕ್ಷಣದ ಸತ್ಯವೊಂದು ಹುಟ್ಟುವ ಅಥವಾ ನೀವು ಯೋಚಿಸಿರದ ಸತ್ಯವೊಂದು ಹೊಳೆಯುವ ಅನುಭವದ ಗಳಿಗೆ ಅದು. ಈ ಹಿನ್ನೆಲೆಯಲ್ಲಿಯೇ ಮಾತು, ಬರಹ, ಬಡಗಿಯ ಕೆಲಸ, ಮೆಕ್ಯಾನಿಕ್ ಕೈ ಚಳಕ... ಎಲ್ಲವೂ ಕ್ರಿಯೇಟಿವ್ ಎಂದು ನನಗೆ ಮತ್ತೆ ಮತ್ತೆ ಅನ್ನಿಸುತ್ತಿರುತ್ತದೆ. ಯಾವುದು ನಮ್ಮೊಳಗೆ ಕೇಡನ್ನು ಉದ್ದೀಪಿಸದೆ, ನಮ್ಮ ನಿಜವಾದ ಸತ್ವ, ಪಾಸಿಟಿವ್ ಶಕ್ತಿಯನ್ನು ಹೊರ ತರುತ್ತದೋ ಅದು ಕ್ರಿಯೇಟಿವ್ ಆಗಿರಬಲ್ಲದು!

ಮೇಲೆ ಹೇಳಿದ ಒಂದು ಪುಟ್ಟ ವಿಸ್ಮಯದ ಸಂದರ್ಭದ ಹಿನ್ನೆಲೆ ಇದು: ಅವತ್ತು ಸಿದ್ಧಲಿಂಗಯ್ಯ, ಕಿ.ರಂ. ನಾಗರಾಜ್ ಮೊದಲಾದವರನ್ನು ಕುರಿತ ಪುಸ್ತಕಗಳ ಬಿಡುಗಡೆಯಿತ್ತು. ವೇದಿಕೆಯ ಮೇಲೆ ಸಿದ್ಧಲಿಂಗಯ್ಯ, ಚಂದ್ರಶೇಖರ ಕಂಬಾರ, ಅನಂತಮೂರ್ತಿ, ವೆಂಕಟೇಶಮೂರ್ತಿ ಮೊದಲಾದವರಿದ್ದರು. ಅಲ್ಲಿ ನಾನೂ ಒಬ್ಬ ಅತಿಥಿ.

ಪುಸ್ತಕಗಳನ್ನು ಬಿಡುಗಡೆ ಮಾಡಿದ ಅನಂತಮೂರ್ತಿಯವರು ಮಾತುಮಾತಾಡುತ್ತಲೇ ಇದ್ದಕ್ಕಿದ್ದಂತೆ ಯಾವುದೋ ಉತ್ಸಾಹದಲ್ಲಿ ‘ಅಡಿಗರ ನಂತರದ ಮಹತ್ವದ ಕವಿ ವೆಂಕಟೇಶಮೂರ್ತಿ’ ಎಂದುಬಿಟ್ಟರು.

ಈ ಉಬ್ಬಿದ ಮಾತು ಕೇಳಿದ ತಕ್ಷಣ ಅವತ್ತು ಕಿ.ರಂ ನಾಗರಾಜರ ಮೇಲೆ ಮಾತಾಡಬೇಕಾಗಿದ್ದ ನನ್ನ ಟಿಪ್ಪಣಿಗಳು ಹಿನ್ನೆಲೆಗೆ ಸರಿದುಹೋದವು! ಅನಂತಮೂರ್ತಿಯವರ ಮಾತು ಗುಂಗೆ ಹುಳುವಿನಂತೆ ನನ್ನ ಕಿವಿಯಲ್ಲಿ ಗುಯ್‌ಗುಟ್ಟತೊಡಗಿತು; ನನ್ನ ಸರದಿ ಬಂದಾಗ ಕಿ.ರಂ. ಬಗ್ಗೆ ಮಾತಾಡುವುದು ಪಕ್ಕಕ್ಕೆ ಸರಿದು, ಅನಂತಮೂರ್ತಿಯವರನ್ನು ಉದ್ದೇಶಿಸಿದ ನನ್ನ ಪ್ರಶ್ನೆ ಹೊರ ಬಂದೇಬಿಟ್ಟಿತು:

‘ಸಾರ್! ನಿಮ್ಮ ಪಕ್ಕದಲ್ಲೇ ಚಂದ್ರಶೇಖರ ಕಂಬಾರರು ಕೂತಿದ್ದಾರೆ. ಅಲ್ಲೇ ಪಕ್ಕದಲ್ಲಿ ಕನ್ನಡ ಕಾವ್ಯದ ಹೊಸ ಮಾರ್ಗ ತೆರೆದ ಸಿದ್ಧಲಿಂಗಯ್ಯ ಕೂತಿದ್ದಾರೆ. ಈಗಾಗಲೇ ಶಿವಪ್ರಕಾಶ್ ಕನ್ನಡದ ಗಂಭೀರವಾದ ಕವಿಯಾಗಿದ್ದಾರೆ. ಹೀಗಿದ್ದಾಗ ನೀವು ಇದ್ದಕ್ಕಿದ್ದ ಹಾಗೆ ಅಡಿಗರ ನಂತರ ವೆಂಕಟೇಶಮೂರ್ತಿ ಎಂದು ಸ್ವೀಪಿಂಗ್ ಸ್ಟೇಟ್‌ಮೆಂಟ್ ಮಾಡಿದರೆ ಹೇಗೆ? ವೆಂಕಟೇಶಮೂರ್ತಿಯವರು ಮುಖ್ಯ ಕವಿ, ನನಗೂ ಇಷ್ಟವಾದ ಕವಿ. ಆ ಮಾತು ಬೇರೆ...’

ನನ್ನ ಮಾತು ಮುಗಿಯುವ ಮೊದಲೇ ಅನಂತಮೂರ್ತಿಯವರು ಕೂತಲ್ಲಿಂದಲೇ ಉತ್ತರ ಕೊಡಲೆತ್ನಿಸಿದರು. ‘ನೀನು ಅವ್ರನ್ನೂ ಇಷ್ಟ ಪಡ್ತೀಯ, ಇವ್ರನ್ನೂ ಇಷ್ಟ ಪಡ್ತೀಯ!’ ಎಂದು ತಮಾಷೆ ಮಾಡುತ್ತಾ ನಕ್ಕರು. ಮೆಲ್ಲಗೆ ಅದೊಂದು ಪುಟ್ಟ ಸಾಹಿತ್ಯಕ ಜುಗಲ್‌ಬಂದಿಯೇ ಆಗತೊಡಗಿತು!

‘ಸಾರ್! ವೆಂಕಟೇಶಮೂರ್ತಿಯವರ ಕಾವ್ಯದ ಬಗ್ಗೆ ನನಗೂ ಮೆಚ್ಚುಗೆ ಇದೆ. ಆದರೆ ಪುಸ್ತಕ ಬಿಡುಗಡೆಯ ಭರದಲ್ಲಿ ಮುಖ್ಯವಾದ ಸಾಹಿತ್ಯಕ ತೀರ್ಮಾನಗಳು ಹೀಗೆ ಪೂರಾ ಕಿತ್ತು ಹರಿದುಕೊಂಡು ಹೋದರೆ ಹೇಗೆ?’ ಎಂದು ಹೇಳಲೆತ್ನಿಸಿದೆ...

ಅನಂತಮೂರ್ತಿ ನಮ್ಮ ಬಹುಮುಖ್ಯ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರಾಗಿದ್ದವರು. ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು ಒಳ್ಳೆಯ ಕಾದಂಬರಿ, ಕತೆ ಬರೆಯುತ್ತಲೇ ಸಾಹಿತ್ಯ ಕೃತಿಗಳಿಗೆ ಪ್ರಖರವಾದ ಒಳನೋಟ ಕೊಡಬಲ್ಲವರಾಗಿದ್ದರು. ಅವರು ಸಾರ್ವಜನಿಕ ಸಭೆಗಳಲ್ಲಿ ಹುಸಿ ಗಣ್ಯತೆಗೆ ಬೆಲೆ ಕೊಡದೆ ನೇರವಾಗಿ ಮಾತಾಡುತ್ತಿದ್ದ ಸಂದರ್ಭಗಳಿದ್ದವು; ಪುಸ್ತಕ ಬಿಡುಗಡೆಯ ಔಪಚಾರಿಕ ಸಭೆಗಳಲ್ಲಿ ಕೂಡ ಅವರು ಸ್ಪಷ್ಟವಾದ ವಿಮರ್ಶೆಯ ಹಾದಿ ಹಿಡಿದೇ ಮಾತಾಡುತ್ತಿದರು. ಹಿಂದೊಮ್ಮೆ ರಾಮಚಂದ್ರ ಶರ್ಮರ ‘ದೆಹಲಿಗೆ ಬಂದ ಹೊಸ ವರ್ಷ’ ಕವನ ಸಂಕಲನದ ಬಿಡುಗಡೆಯಲ್ಲಿ ಒಬ್ಬ ಕವಿಯ ಸಾಂಸ್ಕೃತಿಕ ಬೇರುಗಳು ಕಡಿದು ಹೋದಾಗ ಅವನ ಕಾವ್ಯಕ್ಕೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಅನಂತಮೂರ್ತಿ ಗಂಭೀರವಾಗಿ ಚರ್ಚಿಸಿದ್ದರು. ಅವತ್ತು ಸಭೆಯಲ್ಲಿದ್ದ ಕಿ.ರಂ. ನಾಗರಾಜ್ ಕೂಡ ಇದೇ ಧಾಟಿಯಲ್ಲಿ ಮಾತಾಡಿದ್ದರು. ಹೀಗೆ ಅನಂತಮೂರ್ತಿ, ಕಿ.ರಂ. ಮಾತಾಡಿದ ವಿಮರ್ಶಾತ್ಮಕ ರೀತಿಗೆ ಶರ್ಮರು ವ್ಯಗ್ರಗೊಂಡಿದ್ದನ್ನು ನನ್ನ ‘ಗಾಳಿ ಬೆಳಕು’ ಪುಸ್ತಕದ ‘ವಿಮರ್ಶೆಯೆಂಬ ಹೂ ಬಾಣ’ ಲೇಖನದಲ್ಲಿ ಬರೆದಿರುವೆ. ಅವತ್ತು ಕವಿ ಶರ್ಮರಿಗೆ ರೇಗಿ, ‘ಪುಸ್ತಕ ಬಿಡುಗಡೆ ಎಂದರೆ ಶಾಲಿನಲ್ಲಿ ಸುತ್ತಿ ಹೊಡೆಯುವುದು’ ಎಂದು ಹೇಳಿದ್ದನ್ನೂ ಅಲ್ಲಿ ದಾಖಲಿಸಿರುವೆ. ಅದನ್ನು ಮತ್ತೆ ಮತ್ತೆ ನೆನೆಯುವ ಗೆಳೆಯರ ನಗು ಕೂಡ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ! ಆ ಬಗ್ಗೆ ಇಷ್ಟು ಸಾಕು.

ಅವತ್ತು ಶರ್ಮರ ಕಾವ್ಯದ ಬಗ್ಗೆ ಅನಂತಮೂರ್ತಿ, ಕಿ.ರಂ. ನಾಗರಾಜ್ ಕೊಂಚ ಓವರ್‌ರಿಯಾಕ್ಟ್ ಮಾಡಿರಬಹುದೇ ಎಂದು ಮುಂದೆ ಯಾವಾಗಲೋ ಒಮ್ಮೆ ಅನ್ನಿಸಿದರೂ ಅವರ ವಿಮರ್ಶೆಯ ಖಚಿತತೆಯ ಬಗ್ಗೆ ಅವತ್ತು ಗೌರವವಂತೂ ಮೂಡಿತ್ತು; ಆ ಗೌರವ ಇವತ್ತಿಗೂ ಹಾಗೇ ಇದೆ. ಸಾರ್ವಜನಿಕ ಸಭೆಯಿರಲಿ, ಖಾಸಗಿ ಮಾತುಕತೆಯಿರಲಿ, ಸತ್ಯ ಮಾತಾಡುವವರ ಬಗ್ಗೆ ಅಥವಾ ಕೊನೇ ಪಕ್ಷ ಸತ್ಯಕ್ಕೆ ಹತ್ತಿರವಾಗಿ ಮಾತಾಡುವವರ ಬಗ್ಗೆ ಎಲ್ಲ ಸೂಕ್ಷ್ಮ ಜನರಲ್ಲೂ ಗೌರವ ಮೂಡುತ್ತಲೇ ಇರುತ್ತದೆ; ಹಾಗೆ ಗೌರವ ಮೂಡುತ್ತಲೇ ಇರಬೇಕು. ಇಲ್ಲದಿದ್ದರೆ ಇಡೀ ಸಂಸ್ಕೃತಿ ಭೋಳೆ ಸಂಸ್ಕೃತಿಯಾಗುತ್ತದೆ.

ಅದಿರಲಿ. ಅವತ್ತು ಶರ್ಮರ ಕವನ ಸಂಕಲನದ ಬಗ್ಗೆ ಅಷ್ಟೊಂದು ನಿಖರವಾದ ವಿಮರ್ಶೆಯ ಸೂತ್ರಗಳನ್ನು ಬಳಸಿದ್ದ ಕಿ.ರಂ. ನಾಗರಾಜರೇ ಮತ್ತೊಂದು ಪುಸ್ತಕ ಬಿಡುಗಡೆಯ ಸಭೆಯಲ್ಲಿ ಉತ್ಪ್ರೇಕ್ಷಾಲಂಕಾರ ಬಳಸತೊಡಗಿದರು; ಆಗ ಮತ್ತೊಮ್ಮೆ ನನ್ನ ಸಿದ್ಧ ಟಿಪ್ಪಣಿಗಳು ಹಿನ್ನೆಲೆಗೆ ಸರಿದ ಪ್ರಸಂಗ ಎದುರಾಯಿತು! ಅವತ್ತು ಕೆ.ಬಿ. ಸಿದ್ದಯ್ಯನವರ ‘ದಕ್ಲದೇವಿ ಕಥಾಕಾವ್ಯ’ ಖಂಡಕಾವ್ಯವನ್ನು ಇಷ್ಟಪಟ್ಟ ಕಿ.ರಂ. ನಾಗರಾಜ್ ಇದ್ದಕ್ಕಿದ್ದಂತೆ, ‘ಈ ಕಾವ್ಯವನ್ನು ವಿವರಿಸಲು ಕನ್ನಡ ವಿಮರ್ಶೆಯ ಮಾನದಂಡಗಳೇ ಬದಲಾಗಬೇಕು’ ಎಂದುಬಿಟ್ಟರು!

ಆ ಖಂಡಕಾವ್ಯದ ವೈಶಿಷ್ಟ್ಯ ಹಾಗೂ ಅದು ಕಾವ್ಯದ ಜಾಣ ಓದುಗರನ್ನು ಕೂಡ ತಲುಪಲು ಪ್ರಯಾಸ ಪಡುತ್ತಿದ್ದ ರೀತಿ ಎರಡನ್ನೂ ಗಮನಿಸಿದ್ದ ನನಗೆ ಈ ಪುಸ್ತಕ ಓದಲು ವಿಮರ್ಶೆಯ ಮಾನದಂಡಗಳು ಏಕೆ ಬದಲಾಗಬೇಕು ಎಂಬುದು ಮಾತ್ರ ಅರ್ಥವಾಗಲಿಲ್ಲ! ಬೇಂದ್ರೆ ಕಾವ್ಯ ಓದಲು ನಮ್ಮ ವಿಮರ್ಶೆಯ ಮಾನದಂಡವನ್ನು ಬದಲಿಸಿಕೊಂಡಿಲ್ಲ, ಅಡಿಗರ ಕಾವ್ಯವನ್ನಾಗಲೀ, ಕಂಬಾರರ ಕಾವ್ಯವನ್ನಾಗಲೀ, ಸಿದ್ಧಲಿಂಗಯ್ಯನವರ ಕಾವ್ಯವನ್ನಾಗಲೀ ಓದಲು ಅಥವಾ ಇನ್ನಾವುದೇ ಮುಖ್ಯ ಕವಿಗಳ ಕಾವ್ಯ ಬಂದಾಗಲಾಗಲೀ ನಮ್ಮ ವಿಮರ್ಶೆಯ ಮಾನದಂಡಗಳನ್ನು ಏಕಾಏಕಿ ಬದಲಿಸಿಕೊಂಡಿಲ್ಲ; ಈಗ ಯಾಕೆ ಇದ್ದಕ್ಕಿದ್ದಂತೆ ಮಾನದಂಡಗಳನ್ನು ಬದಲಿಸಬೇಕು? ಎಂಬ ಪ್ರಶ್ನೆ ನಿಜಕ್ಕೂ ಸ್ಪಾಂಟೇನಿಯಸ್ ಆಗಿ ನನ್ನ ಬಾಯಿಂದ ಬಂತು. ಕಿ.ರಂ. ನಾಗರಾಜರು ಒಮ್ಮೆ ಕತ್ತೆತ್ತಿ ನನ್ನತ್ತ ನೋಡಿ ಸಣ್ಣಗೆ ಸಿಡಿಮಿಡಿಗೊಂಡರು; ಆದರೆ ಆ ಪ್ರಶ್ನೆಯನ್ನು ಅವರು ಒಪ್ಪಿಕೊಂಡರೆಂದು ಮುಂದೆ ಗೊತ್ತಾಯಿತು.

ಈ ಎರಡೂ ಪ್ರಸಂಗಗಳ ನಂತರ ಅನಂತಮೂರ್ತಿಯವರ ಜೊತೆಯಾಗಲೀ, ಕಿ.ರಂ. ನಾಗರಾಜರ ಜೊತೆಯಾಗಲೀ ನಾನು ಆರಾಮಾಗೇ ಇದ್ದೆ; ಅವರೂ ನನ್ನೊಡನೆ ಆರಾಮಾಗಿದ್ದರು. ಕಿರಿಯವನಾದ ನನ್ನ ಪ್ರಶ್ನೆಯಲ್ಲಿ ಇದ್ದಿರಬಹುದಾದ ಒಂದು ಮಟ್ಟದ ಸತ್ಯವನ್ನು ಅವರ ಒಳಮನಸ್ಸು ಒಪ್ಪಿರಬಹುದು.

ಎಷ್ಟೋ ಸಲ ಹೀಗೆ ನಮ್ಮ ಸಿದ್ಧ ಟಿಪ್ಪಣಿ ಮೀರಿ ಹೊಳೆಯುವಂಥ ಆ ಕ್ಷಣದ ಸತ್ಯಗಳು ಎಲ್ಲರಿಗೂ ಹೊಳೆದಿರುತ್ತವೆ. ಅವನ್ನು ಅನಗತ್ಯವಾಗಿ ಅದುಮಿಡದೆ, ನುಡಿಯಲು ಬಿಡುವುದು ನಮಗೂ ಒಳ್ಳೆಯದು; ಸಂಸ್ಕೃತಿಯ ಆರೋಗ್ಯಕ್ಕೂ ಒಳ್ಳೆಯದು. ನಮಗೆ ಓದಲು ಕೊಟ್ಟ ಪುಸ್ತಕ ಓದಿ ನಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಠೇಂಕಾರವೂ ನಮಗೆ ಇರಬೇಕಿಲ್ಲ; ಅಥವಾ ಪುಸ್ತಕಕ್ಕಾಗಲೀ, ಅದನ್ನು ಬರೆದ ಲೇಖಕ ಲೇಖಕಿಯರಿಗಾಗಲೀ ವಿಧೇಯರಾಗಿರಲೂ ಬೇಕಾಗಿಲ್ಲ; ಒಂದು ಪುಸ್ತಕದ ಮುನ್ನುಡಿಯಲ್ಲೋ, ಪುಸ್ತಕದ ಬಿಡುಗಡೆಯಲ್ಲೋ ಈ ಪುಸ್ತಕವನ್ನು ಲೋಕದ ಅತ್ಯುತ್ತಮ ಪುಸ್ತಕವೆಂದು ಸಾಬೀತು ಮಾಡುತ್ತೇನೆೆ ಎಂದು ಹೊರಡುವ ಕೆಲವರ ಹುಂಬ ಹುಮ್ಮಸ್ಸು ಕೂಡ ಸಿಲ್ಲಿಯಾಗಿರಬಲ್ಲದು! ಒಂದು ಪುಸ್ತಕವೇ ನಮಗೆ ನಿಜಕ್ಕೂ ಏನನ್ನು ನುಡಿಯುತ್ತದೋ ಅದನ್ನು ನೆಚ್ಚಿ ಮಾತಾಡುವವರು, ಬರೆಯುವವರು ಮಾತ್ರ ಒಂದು ಸಂಸ್ಕೃತಿಯನ್ನು ಪೊರೆಯುತ್ತಿರುತ್ತಾರೆ.

ಇಂಥ ಸರಳ, ಗಂಭೀರ ಸತ್ಯಗಳನ್ನು ನನಗೆ ಕಲಿಸಿಕೊಟ್ಟವರ ಪಟ್ಟಿ ದೊಡ್ಡದು. ಆ ಪಟ್ಟಿಯಲ್ಲಿ ಕನ್ನಡ, ಇಂಗ್ಲಿಷಿನ ದೊಡ್ಡ ಲೇಖಕ, ಲೇಖಕಿಯರಿದ್ದಾರೆ. ಈಚೆಗೆ ಪೂರ್ಣ ಪ್ರಮಾಣದಲ್ಲಿ ವಿಮರ್ಶೆ ಬರೆಯುವ, ನಿಜಕ್ಕೂ ಶ್ರಮ ವಹಿಸಿ ಬರೆಯುವ, ಮಾತಾಡುವ ಹೊಸ ತಲೆಮಾರಿನ ಇಬ್ಬರು ಅಧ್ಯಾಪಕ ಗೆಳೆಯರ ಜೊತೆಗೆ ಇದನ್ನೆಲ್ಲ ಹೇಳಿಕೊಳ್ಳಬೇಕೆನ್ನಿಸಿತು. ಆ ನೆಪದಲ್ಲಿ ಈ ಟಿಪ್ಪಣಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News