ದೋಹಾ: ಜೀವ ಉಳಿಸುವ ಮಹತ್ವದ ಕಾರ್ಯಕ್ಕೆ ಕೈಜೋಡಿಸುವುದರ ಜೊತೆಗೆ ಆರೋಗ್ಯ ಜಾಗೃತಿಗೂ ಒತ್ತು ನೀಡುವ ಉದ್ದೇಶದಿಂದ ಬ್ಯಾರೀಸ್ ಖತರ್ ಮತ್ತು ಬಿಸಿಸಿಐ ಖತರ್ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರದಲ್ಲಿ 71 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಅ. 23ರಂದು ದೋಹಾದ ಅಮೆರಿಕನ್ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 103 ಮಂದಿ ನೋಂದಾಯಿಸಿಕೊಂಡಿದ್ದರು.

ಅತಿಥಿಗಳಾಗಿ ಭಾಗವಹಿಸಿದ ಡಾ. ಸಫ್ವಾನ್ ಅಹ್ಮದ್ ಮತ್ತು ಡಾ. ಹರೂನ್ ಅಹ್ಮದ್ ಸಲೇಹ್ ಆರೋಗ್ಯ ಜಾಗೃತಿ, ರೋಗಗಳ ತಡೆಗಟ್ಟುವಿಕೆ ಹಾಗೂ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿಯಮಿತ ವೈದ್ಯಕೀಯ ತಪಾಸಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಮತ್ತು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ KSQ ಮತ್ತು TKQನ ಮಾಜಿ ಅಧ್ಯಕ್ಷ ಡಾ. ರವಿ ಶೆಟ್ಟಿ, ICBF ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, KSQ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗೇಲು, SKWMA ಖತರ್ ಅಧ್ಯಕ್ಷ ಇಮ್ರಾನ್ ಅಹ್ಮದ್, HIF ಖತರ್‌ನ ಮಾಜಿ ಅಧ್ಯಕ್ಷ ನೌಫಲ್ ಫಾಹಿಮ್, ಬ್ಯಾರೀಸ್ ಖತರ್ ಅಧ್ಯಕ್ಷ ಸಂದೀಪ್, KMCA ಮತ್ತು KCF ಪ್ರತಿನಿಧಿ ಇಸ್ಮಾಯಿಲ್, ದಾಯ್ಜಿವರ್ಲ್ಡ್‌ನ ಅಲೆಕ್ಸ್ ಹಾಗೂ IFSC ಅಧ್ಯಕ್ಷ ಸಜೀದ್ ಅಹ್ಮದ್ ಸೇರಿದಂತೆ ಹಲವು ಸಮುದಾಯದ ಮುಖಂಡರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.


ಡಾ. ರವಿ ಶೆಟ್ಟಿ, ದೀಪಕ್ ಶೆಟ್ಟಿ, ಸುಬ್ರಹ್ಮಣ್ಯ ಹೆಬ್ಬಾಗೇಲು ಮತ್ತು ಇಮ್ರಾನ್ ಅಹ್ಮದ್ ಮಾತನಾಡಿ, ಸಾರ್ವಜನಿಕ ಆರೋಗ್ಯದ ರಕ್ಷಣೆ, ಸ್ವಯಂಪ್ರೇರಿತ ರಕ್ತದಾನ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ನಿರ್ಣಾಯಕವಾಗಿದೆ ಎಂದರು. ಆರೋಗ್ಯ ವೃತ್ತಿಪರರು, ಸ್ವಯಂಸೇವಕರು ಮತ್ತು ವಿವಿಧ ಸಂಘಟನೆಗಳನ್ನು ಒಂದೇ ವೇದಿಕೆಗೆ ತಂದ ಬ್ಯಾರೀಸ್ ಖತರ್ ಹಾಗೂ ಬಿಸಿಸಿಐ ಖತರ್‌ ನ ಪ್ರಯತ್ನವನ್ನು ಶ್ಲಾಘಿಸಿದರು.

ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು, ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಬೆಳೆಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು.

ಹಮದ್ ವೈದ್ಯಕೀಯ ನಿಗಮದ (HMC) ತಂಡ ರಕ್ತ ಸಂಗ್ರಹ ಕಾರ್ಯ ನಿರ್ವಹಿಸಿತು. ಅಮೆರಿಕನ್ ಆಸ್ಪತ್ರೆಯು ಆರೋಗ್ಯ ತಪಾಸಣೆಗೆ ಅಗತ್ಯ ಸೌಲಭ್ಯ ಮತ್ತು ಸ್ಥಳಾವಕಾಶ ಒದಗಿಸಿತು. ಶಿಬಿರಕ್ಕೆ ದೊರೆತ ಸ್ಪಂದನೆಯು ಜೀವ ಉಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲು ಹಾಗೂ ಸಮುದಾಯದ ಆರೋಗ್ಯದ ಅಗತ್ಯಗಳಿಗೆ ಕೊಡುಗೆ ನೀಡಲು ಜನರು ತೋರಿದ ಆಸಕ್ತಿಯನ್ನು ಪ್ರತಿಬಿಂಬಿಸಿದೆ ಎಂದು ಸಂಘಟಕರು ತಿಳಿಸಿದರು.

ಅಮೆರಿಕನ್ ಆಸ್ಪತ್ರೆಯ ಅಧ್ಯಕ್ಷರೂ ಬಿಸಿಸಿಐ ಖತರ್‌ ನ ಉಪಾಧ್ಯಕ್ಷರೂ ಆದ ಇಕ್ಬಾಲ್ ನಾವುಂದ ಅವರ ಬೆಂಬಲ ಮತ್ತು ಸಹಕಾರಕ್ಕೆ ಎರಡೂ ಸಂಸ್ಥೆಗಳು ಕೃತಜ್ಞತೆ ಸಲ್ಲಿಸಿದವು. ಆಸ್ಪತ್ರೆಯ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಫರ್ವಾಝ್ ಮತ್ತು ಬಿಸಿಸಿಐ ಖತರ್‌ ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನಸ್ ಅವರ ಕೊಡುಗೆಗೆ ಶ್ಲಾಘಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೂ ಧನ್ಯವಾದ ಸಲ್ಲಿಸಲಾಯಿತು.

ಡಾ. ಫೈಸಲ್ ಜಿ, ಗಲ್ಫ್‌ಪ್ಲಾಂಟ್‌ ನ ಮುಸ್ತಫಾ ಗುಂಡ್ಮಿ, ಆರಿಫ್, ಗ್ಲೋಬಲ್ ಸೋರ್ಸಸ್‌ ನ ನೌಫಲ್ ಮತ್ತು QITಯ ಇಮ್ರಾನ್ ಅವರ ಕೊಡುಗೆಯನ್ನು ಸಂಘಟಕರು ಸ್ಮರಿಸಿದರು. ಶಿಬಿರದ ಯಶಸ್ಸಿಗೆ ನೆರವಾದ ಎಲ್ಲ ಕ್ರಿಕೆಟಿಗರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಸ್ವಯಂಸೇವಕರಾದ ರೆಹಾನ್ ರಶೀದ್, ಶಫೀ ಶಮೀರ್, ಅರ್ಹಾನ್ ಅನ್ಶಾರ್, ಬಾಸಿತ್ ಅಯೂಬ್, ಇಬ್ರಾಹಿಂ ಅನಸ್ ಮತ್ತು ನೂಹ್ ಅನಸ್ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಲಾಯಿತು. ಕಾರ್ಯಕ್ರಮದ ಉದ್ದಕ್ಕೂ ನೆರವು ನೀಡಿದ ಅಝೀಝ್ ಮತ್ತು ಸಬಿಲ್ ಅವರನ್ನೂ ಸ್ಮರಿಸಲಾಯಾತು.

ಬಿಸಿಸಿಐ ಖತರ್‌ ನ ಕಾರ್ಯಕ್ರಮ ಮುಖ್ಯಸ್ಥ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಕ್ತರ್ ಅಯೂಬ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅತಿಥಿಗಳು, ಸಂಘಟಕರು, ವೈದ್ಯಕೀಯ ತಂಡಗಳು, ಸ್ವಯಂಸೇವಕರು, ಭಾಗವಹಿಸಿದವರು ಮತ್ತು ವಿವಿಧ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಪದಾಧಿಕಾರಿಗಳು, ಸ್ವಯಂಸೇವಕರಿಗೆ ಮೆಚ್ಚುಗೆ

ಶಿಬಿರದ ಯಶಸ್ವಿ ಆಯೋಜನೆಗೆ ಸಮಯ ನೀಡಿ, ಶ್ರಮವಹಿಸಿ ಬೆಂಬಲ ನೀಡಿದ ಎರಡೂ ಸಂಸ್ಥೆಗಳ ಪದಾಧಿಕಾರಿ ಗಳು ಹಾಗೂ ತಂಡದ ಸದಸ್ಯರನ್ನು ಅಭಿನಂದಿಸಲಾಯಿತು. ಬ್ಯಾರೀಸ್ ಖತರ್‌ ನ ಉಪಾಧ್ಯಕ್ಷರಾದ ಮುಸ್ತಫಾ ಗುಂಡ್ಮಿ ಮತ್ತು ಸುಹೈಬ್ ಅಹ್ಮದ್, ಖಜಾಂಚಿ ಮೊಹಮ್ಮದ್ ಫೈಸಲ್ ಶೇಖ್, ಕ್ರೀಡಾ ಕಾರ್ಯದರ್ಶಿ ಫೈಸಲ್ ಜಿ ಹಾಗೂ ಕ್ರೀಡಾ ಸಂಯೋಜಕ ಶಮೀರ್ ಮಹಿನ್ ಅಹ್ಮದ್ ಅವರನ್ನು ಅಭಿನಂದಿಸಲಾಯಿತು.

ಬಿಸಿಸಿಐ ಖತರ್‌ನ ಖಜಾಂಚಿ ಆರಿಫ್ ಅಬ್ದುಲ್, ಜಂಟಿ ಕಾರ್ಯದರ್ಶಿ ಇಮ್ರಾನ್ ಅರೀಝ್, ಕಾರ್ಯಕ್ರಮದ ಬೆಂಬಲ ತಂಡದ ನೌಫಲ್ ಮತ್ತು ನಾಸಿರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಇಲ್ಯಾಸ್ ಬ್ಯಾರಿ, ಕಾಸಿಮ್ ಉಡುಪಿ ಹಾಗೂ ಶಂಶೀರ್ ಅಹ್ಮದ್ ಅವರ ಕೊಡುಗೆಯನ್ನೂ ಶ್ಲಾಘಿಸಲಾಯಿತು. ‌

ಬ್ಯಾರೀಸ್ ಖತರ್‌ ನ ಜಂಟಿ ಕಾರ್ಯದರ್ಶಿ ಅನ್ಸಾರ್ ಯುಟಿ ಅವರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ಸುಗಮ ನಿರ್ವಹಣೆ ಮತ್ತು ಯಶಸ್ಸಿಗೆ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ತಂಡದ ಸದಸ್ಯರು ನೀಡಿದ ಸಾಮೂಹಿಕ ಕೊಡುಗೆಯನ್ನು ಸಂಘಟಕರು ಶ್ಲಾಘಿಸಿದರು.

ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರಕ್ಕೆ ನೆರವಾದ ಸ್ವಯಂಸೇವಕರು, HMC ತಂಡ, ಅಮೆರಿಕನ್ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ, ರಕ್ತದಾನಿಗಳು, ಬೆಂಬಲಿಗರು ಹಾಗೂ ತಮ್ಮ ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.

ಬ್ಯಾರೀಸ್ ಖತರ್‌ ನ ಪ್ರಧಾನ ಕಾರ್ಯದರ್ಶಿ ರಶೀದ್ ಅಬ್ದುಲ್ ಹಮೀದ್ ಕಕ್ಕಿಂಜೆ ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ವಹಿಸಿದ್ದರು. ಬ್ಯಾರೀಸ್ ಖತರ್ ಮತ್ತು ಬಿಸಿಸಿಐ ಖತರ್‌ ನ ಅಧ್ಯಕ್ಷ ಅಬ್ದುಲ್ಲಾ ಮೋನು ಮೊಯ್ದಿನ್ ಸ್ವಾಗತಿಸಿದರು.



 


 


 


 






 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor