ಕರಾವಳಿ, ಮಲೆನಾಡು ಜನರಿಗೆ ನ್ಯಾಯ ಸುಲಭವಾಗಿ ಸಿಗಲಿ ; ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಕೆ.ಪಿ.ಎ.ಶುಕೂರ್ ಆಗ್ರಹ
ದುಬೈ : ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ನ್ಯಾಯ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ದೊರೆಯುವಂತಾಗಲು ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ನ ಪೀಠ ಸ್ಥಾಪಿಸಬೇಕು ಎಂದು ಸಾಹೇಬಾನ್ ಆಗ್ರಹಿಸಿದೆ.
ದುಬೈನ ಹೋಟೆಲ್ ಖಾಲಿದಿಯಾ ಪ್ಯಾಲೇಸ್ ಡೈರಾದಲ್ಲಿ ಕರಾವಳಿ ಜಿಲ್ಲೆಗಳ ವೃತ್ತಿಪರರಾದ ಸಾಹೇಬಾನ್ (SAHEBAN) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕುರಿತು ಮನವಿ ಸಲ್ಲಿಸಲಾಯಿತು. ಹಿರಿಯ ವಕೀಲ ಕೆ.ಪಿ.ಎ.ಶುಕೂರ್, ವಕೀಲ ಮೊಹಮ್ಮದ್ ಶಾಮಿಲ್ ಶುಕೂರ್ ಮತ್ತಿತರರ ಉಪಸ್ಥಿತಿಯಲ್ಲಿ ಅಫ್ರೋಝ್ ಅಸ್ಸಾದಿ, ಅಲ್ತಾಫ್ ಅಹ್ಮದ್, ಅಲ್ತಾಫ್ ಖಲೀಫೆ, ಡಾ. ವಲೀದ್ ಎನ್.ಅಹ್ಮದ್, ಸಮೀರ್ ಜೀಪೀ, ಸಮೀವುಲ್ಲಾ ಹಬೀಬಿ, ಬಿ.ಎಂ. ಜಾಫರ್, ಆಸಿಫ್ ಹುಸೇನ್, ಮೊಹ್ಸಿನ್ ಶೇಖ್, ಸೈಯದ್ ಗಫೂರ್, ಸನ್ನಾನ್ ಸಿದ್ದಿಕ್, ಅಜ್ಮಲ್ ಅಹ್ಮದ್, ಸಿಎ ಶಬ್ಬೀರ್, ಸಿಎ ಹನೀಫ್ ಮತ್ತು ಮುಷ್ತಾಕ್ ಅಹ್ಮದ್ ಅವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಕೆ.ಪಿ.ಎ.ಶುಕೂರ್, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಮಹತ್ವವನ್ನು ಒತ್ತಿಹೇಳಿದರು. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಇಂತಹ ಪೀಠದಿಂದ ಆಗಬಹುದಾದ ಪ್ರಯೋಜನಗಳ ಕುರಿತು ಚರ್ಚಿಸಲಾಯಿತು.
ನ್ಯಾಯ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿ, ಎಲ್ಲರಿಗೂ ನ್ಯಾಯ ದೊರೆಯುವಂತೆ ಮಾಡುವ ಉದ್ದೇಶದಿಂದ ರಚಿಸಲಾದ ಕ್ರಿಯಾ ಸಮಿತಿಯ ಪ್ರಯತ್ನಗಳಿಗೆ ಕಾರ್ಯಕ್ರಮದಲ್ಲಿ ಬೆಂಬಲ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಐವಾನ್ ಡಿಸೋಜಾ, ಮೊನಪ್ಪ ಭಂಡಾರಿ ಹಾಗೂ ಸಮಿತಿಯ ಇತರ ಸದಸ್ಯರೊಂದಿಗೆ ಕೈಜೋಡಿಸಲು ನಿರ್ಧರಿಸಲಾಯಿತು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ನ್ಯಾಯ ಪಡೆಯಲು ಅನುಕೂಲವಾಗಲಿದೆ ಎಂದು ಕೆ.ಪಿ.ಎ. ಶುಕೂರ್ ಹೇಳಿದರು. ನ್ಯಾಯ ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು ಮತ್ತು ಜನರಿಗೆ ನ್ಯಾಯ ಪಡೆಯಲು ತೊಂದರೆಯಾಗಬಾರದು ಎಂಬುದು ಇದರ ಉದ್ದೇಶ ಎಂದು ಅವರು ತಿಳಿಸಿದರು.