ಅಜ್ಮಾನ್ (ಯುಎಇ), ಅ. 17: ಒಂಟೆಗಳ ಆರೋಗ್ಯ, ಸಂತಾನೋತ್ಪತ್ತಿ, ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿನ ಪ್ರಗತಿ ಕುರಿತು ಚರ್ಚಿಸಲು ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಾಣಿಗಳ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ 12 ಸಾಧಕರನ್ನು ಸನ್ಮಾನಿಸಲಾಯಿತು.

ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಮತ್ತು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣವು ಶನಿವಾರ ತುಂಬೆ ಮೆಡಿಸಿಟಿ ಫಾರ್ ಅಡ್ವಾನ್ಸಸ್ ಇನ್ ಕ್ಯಾಮೆಲ್ ಸೈನ್ಸಸ್ ನಲ್ಲಿ ನಡೆಯಿತು. ದುಬೈ ಕ್ಯಾಮೆಲ್ ಆಸ್ಪತ್ರೆ ಮತ್ತು ದುಬೈ ಕ್ಯಾಮೆಲ್ ರಿಪ್ರೊಡಕ್ಷನ್ ಸೆಂಟರ್ ಸಹಯೋಗ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದವು. ಅಜ್ಮಾನ್ ನ ಆಡಳಿತಗಾರರ ನ್ಯಾಯಾಲಯದ ಅಧ್ಯಕ್ಷ ಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದೀನ್ ಉಪಸ್ಥಿತರಿದ್ದರು.

ಯುಎಇಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಒಂಟೆಗಳು ಮಹತ್ವದ ಸ್ಥಾನ ಪಡೆದಿವೆ. ಹಿಂದಿನ ಕಾಲದಲ್ಲಿ ವ್ಯಾಪಾರ ಮಾರ್ಗಗಳ ಪ್ರಮುಖ ಕೊಂಡಿಯಾಗಿದ್ದ ಅವು ಇಂದು ಒಂಟೆ ರೇಸಿಂಗ್, ಒಂಟೆ ಹಾಲು, ಪ್ರವಾಸೋದ್ಯಮ ಮತ್ತು ಆಹಾರ ಭದ್ರತೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಒಂಟೆಗಳ ಆರೋಗ್ಯ ರಕ್ಷಣೆ ಪಶು ವೈದ್ಯಕೀಯ ವಿಜ್ಞಾನಕ್ಕೆ ಮಾತ್ರವಲ್ಲದೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೂ ಸಂಬಂಧಿಸಿದೆ.

ವಿಚಾರ ಸಂಕಿರಣದಲ್ಲಿ ವೈದ್ಯರು, ಸಂಶೋಧಕರು, ಸಂತಾನೋತ್ಪತ್ತಿ ತಜ್ಞರು, ಶಸ್ತ್ರಚಿಕಿತ್ಸಕರು ಮತ್ತು ಪುನರ್ವಸತಿ ತಜ್ಞರು ಕ್ಷೇತ್ರ, ಪ್ರಯೋಗಾಲಯ ಹಾಗೂ ಫಾರ್ಮ್ ಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಿದರು. ವಿದ್ಯಾರ್ಥಿಗಳು ಹಾಗೂ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಪಶುವೈದ್ಯರಿಗೆ ಅನುಭವಿ ತಜ್ಞರಿಂದ ಕಲಿಯಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಿತು.

ಸರಕಾರಿ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು, ಒಂಟೆ ಮತ್ತು ಕುದುರೆ ಆಸ್ಪತ್ರೆಗಳು, ಉದ್ಯಮ, ಕಾನೂನು ಜಾರಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಶುವೈದ್ಯಕೀಯ ವಿಜ್ಞಾನ ಮತ್ತು ಪ್ರಾಣಿಗಳ ಆರೋಗ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ 12 ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಿರ್ಮಾಣ ಹಂತದಲ್ಲಿ ರುವ ಹೊಸ ತುಂಬೆ ಪಶುವೈದ್ಯಕೀಯ ಆಸ್ಪತ್ರೆಯ ಪರಿಚಯವನ್ನೂ ಅತಿಥಿಗಳಿಗೆ ಮಾಡಿಕೊಡಲಾಯಿತು. ಮಾನವರ ಆರೋಗ್ಯ ಕ್ಷೇತ್ರದಲ್ಲಿ ನೀಡುತ್ತಿರುವ ಸೇವೆಯನ್ನು ಪ್ರಾಣಿಗಳ ಆರೈಕೆಗೂ ವಿಸ್ತರಿಸುವ ಪ್ರಯತ್ನದ ಭಾಗವಾಗಿ ಈ ಆಸ್ಪತ್ರೆ ನಿರ್ಮಾಣವಾಗುತ್ತಿದೆ.

►ನವೆಂಬರ್ ನಲ್ಲಿ ಅನಿಮಲ್ ಪ್ರೊಫಿ ಸಮ್ಮೇಳನ

ನವೆಂಬರ್ 10 ಮತ್ತು 11ರಂದು ಕಂಪ್ಯಾನಿಯನ್ ಅನಿಮಲ್ ಪಶುವೈದ್ಯಕೀಯ ಔಷಧದ ಅಂತರರಾಷ್ಟ್ರೀಯ ಸಮ್ಮೇಳನವಾದ 'ಅನಿಮಲ್ ಪ್ರೊಫಿ' ನಡೆಯಲಿದೆ. ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಮತ್ತು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಜತೆಗೆ ನೀತಾ-ಫಾರ್ಮ್, GOZL UAE & ಒಮಾನ್ ಮತ್ತು Zooinform ಈ ಸಮ್ಮೇಳನದ ಆಯೋಜನೆಯಲ್ಲಿ ಸಹಕರಿಸಲಿವೆ.

ಇದರ ಜತೆಗೆ, ದುಬೈ ಈಕ್ವೈನ್ ಆಸ್ಪತ್ರೆಯ ಸಹಯೋಗದಲ್ಲಿ ಕುದುರೆಗಳ ಆರೈಕೆಗೆ ಸಂಬಂಧಿಸಿದ ಎರಡು ಪ್ರಾಯೋಗಿಕ ಕೌಶಲ ಪ್ರಮಾಣಪತ್ರ ಕೋರ್ಸ್ ಗಳನ್ನು ಪರಿಚಯಿಸಲಾಯಿತು. ಕುದುರೆಗಳ ತುರ್ತು ಪ್ರಥಮ ಚಿಕಿತ್ಸೆ ಮತ್ತು ಅವುಗಳ ಸ್ಥಿತಿಯನ್ನು ಸ್ಥಿರಗೊಳಿಸುವ ತರಬೇತಿಗೆ 'ಈಕ್ವಿ-ಏಡ್' ಹಾಗೂ ಕುದುರೆಗಳ ಗೊರಸು ಆರೈಕೆ ಮತ್ತು ಲಾಳ ಅಳವಡಿಸುವ ಪರಿಣತಿಗೆ ಸಂಬಂಧಿಸಿದ 'ಹೂಫ್-ಪ್ರೊ' ಈ ಕೋರ್ಸ್ ಗಳಾಗಿವೆ.

ಸುಮಾರು ಮೂರು ದಶಕಗಳಿಂದ ದೇಶದ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ವೃತ್ತಿಪರರಿಗೆ ತರಬೇತಿ ನೀಡುತ್ತಿರುವ ತುಂಬೆ ಸಮೂಹವು, ಈಗ ಪ್ರಾಣಿಗಳ ಆರೋಗ್ಯ ಕ್ಷೇತ್ರದಲ್ಲಿಯೂ ಪರಿಣತಿಯನ್ನು ಬೆಳೆಸುತ್ತಿದೆ. ಪ್ರದೇಶದ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಒಂಟೆಗಳಿಂದ ಹಿಡಿದು ಜನರ ಮನೆಗಳಲ್ಲಿ ಸಾಕುವ ಪ್ರಾಣಿಗಳವರೆಗೆ ಅವುಗಳ ಆರೋಗ್ಯ ಮತ್ತು ಆರೈಕೆಗೆ ಅಗತ್ಯವಾದ ಸೇವೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.

ಹೆಚ್ಚಿನ ಮಾಹಿತಿ ಮತ್ತು ಪ್ರವೇಶಕ್ಕಾಗಿ www.gmu.ac.ae ಸಂಪರ್ಕಿಸಬಹುದು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor