×
Ad

Dubai | ಸಚಿವ ಪ್ರಹ್ಲಾದ್‌ ಜೋಶಿ ಅವರೊಂದಿಗೆ 'ಸಮುದಾಯ ಸಂವಾದ'; ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ, ಕೌನ್ಸುಲ್ ಜನರಲ್ ಎಚ್‌.ಇ.ಸತೀಶ್ ಕುಮಾರ್ ಸಿವನ್ ಭಾಗಿ

'ದುಬೈ ಕನ್ನಡ ಪಾಠ ಶಾಲೆ'ಯನ್ನು ಅಭಿನಂದಿಸಿದ ಕೇಂದ್ರ ಸಚಿವ

Update: 2026-01-16 15:05 IST

ದುಬೈ : ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಅವರೊಂದಿಗೆ 'ಸಮುದಾಯ ಸಂವಾದ' ಕಾರ್ಯಕ್ರಮವನ್ನು ಮಂಗಳವಾರ ದುಬೈನ ಇಂಡಿಯನ್ ಕಾನ್ಸುಲೇಟ್ ನಲ್ಲಿ ಆಯೋಜಿಸಲಾಗಿತ್ತು.

ದುಬೈ ಇಂಡಿಯನ್ ಕಾನ್ಸುಲೇಟ್ ಜನರಲ್, ಐಪಿಎಫ್(Indian People's Forum, UAE) ಹಾಗೂ ಕನ್ನಡ ಪಾಠಶಾಲೆ ದುಬೈ ಆಶ್ರಯದಲ್ಲಿ ನಡೆದ 'ಸಮುದಾಯ ಸಂವಾದ' ಕಾರ್ಯಕ್ರಮವನ್ನು ಸಚಿವ ಪ್ರಹ್ಲಾದ್‌ ಜೋಶಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ʼಕೇಂದ್ರ ಸರಕಾರ ಅನಿವಾಸಿ ಭಾರತೀಯರ ಹಿತ ರಕ್ಷಣೆಗೆ ಕಟಿಬದ್ಧವಾಗಿದೆ. ಮೋದಿ ಸರಕಾರ ಅನಿವಾಸಿ ಭಾರತೀಯರ ಬಗ್ಗೆ ವಿಶೇಷ ಕಾಳಜಿ ವಹಿಸಿದೆʼ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದುಬೈ ಕನ್ನಡ ಪಾಠ ಶಾಲೆಯು ಮಾತೃಭಾಷಾ ಪೋಷಣೆಗೆ ಒಂದು ಜಾಗತಿಕ ಮಾದರಿ ಎಂದು ಪ್ರಶಂಸಿದ್ದು, ಈ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿಯವರು ಭಾರತ ಸರಕಾರದ ಪರವಾಗಿ ಕನ್ನಡ ಪಾಠ ಶಾಲೆಯ ಸ್ಥಾಪಕ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರನ್ನು ಸನ್ಮಾನಿಸಿ, ಕಾರ್ಯಕಾರಿ ಸಮಿತಿಯನ್ನು, ಶಿಕ್ಷಕಿಯರು ಮತ್ತು ಸ್ವಯಂಸೇವಕರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

2014ರಲ್ಲಿ ಶಶಿಧರ್ ನಾಗರಾಜಪ್ಪ ಅವರ ನೇತೃತ್ವದಲ್ಲಿ ದುಬೈಯಲ್ಲಿ ಆರಂಭಗೊಂಡ ಕನ್ನಡ ಪಾಠಶಾಲೆಯು ಕನ್ನಡಿಗ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವಲ್ಲಿ ಅಪಾರ ಸೇವೆ ಸಲ್ಲಿಸುತ್ತಿದೆ. ಈ ಶಿಕ್ಷಣ ಸಂಪೂರ್ಣವಾಗಿ ಉಚಿತವಾಗಿದ್ದು, ಮಕ್ಕಳಿಂದ ಯಾವುದೇ ರೀತಿಯ ಶುಲ್ಕ ವಸೂಲಿ ಮಾಡದೆ, ಎಲ್ಲವೂ ಇಲ್ಲಿ ಉಚಿತವಾಗಿ ನೀಡಲಾಗುತ್ತೆ. ಅದರಲ್ಲೂ ವಿಶೇಷವೆಂದರೆ, 20ಕ್ಕೂ ಹೆಚ್ಚು ಶಿಕ್ಷಕರು ಯಾವುದೇ ಪ್ರತಿಫಲವಿಲ್ಲದೆ ಸ್ವಯಂಸೇವಕರಾಗಿ ಪಾಠ ಮಾಡುತ್ತಿದ್ದು, ಇದು ಸಮಾಜಕ್ಕೂ ಕನ್ನಡ ಭಾಷೆಗೂ ನೀಡಿರುವ ಪ್ರೇರಣಾದಾಯಕ ಕೊಡುಗೆಯಾಗಿದೆ ಎಂದರು.

ಸಂವಾದ ಕಾರ್ಯಕ್ರಮದ ಉದ್ಘಾಟನೆಯ ವೇಳೆ ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ, ದುಬೈನ ಭಾರತದ ಕೌನ್ಸುಲ್ ಜನರಲ್ ಎಚ್‌.ಇ.ಸತೀಶ್ ಕುಮಾರ್ ಸಿವನ್, ಕೆಎನ್‌ಆರ್‌ಐ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು, ಐಪಿಎಫ್ ಅಧ್ಯಕ್ಷ ಜೀತೆಂದ್ರ ವೈದ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕದ ಕನ್ನಡ, ತುಳು, ಬ್ಯಾರಿ, ಕೊಂಕಣಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಪ್ರಹ್ಲಾದ್ ಜೋಶಿಯವರಿಂದ ಕನ್ನಡ ಪಾಠಶಾಲೆಗೆ ಪುರಸ್ಕಾರದ ಅಭಿನಂದನೆ ಸ್ವೀಕರಿಸಿದ ಶಾಲೆಯ ಸಂಚಾಲಕಿ ಮತ್ತು ಮುಖ್ಯ ಶಿಕ್ಷಕಿ ರೂಪ ಎಚ್.ಜಿ., ಉಪಾಧ್ಯಕ್ಷ ಸಿದ್ದಲಿಂಗೇಶ್, ಕಾರ್ಯದರ್ಶಿ ಸುನೀಲ್ ಕವಾಸ್ಕರ್, ಜಂಟಿ ಕಾರ್ಯದರ್ಶಿ ಶಶಿಧರ್ ಮುಂಡರಗಿ, ಖಜಾಂಚಿ ನಾಗರಾಜ್ ರಾವ್, ಗೌರವ ಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಮೋಹನ್ ನರಸಿಂಹಸಮೂರ್ತಿ, ಸಲಹೆಗಾರ ಎಂ.ಇ.ಮೂಳೂರು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Delete Edit
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News