×
Ad

ಗಲ್ಫ್ ಮೆಡಿಕಲ್ ಯುನಿವರ್ಸಿಟಿ | ಮಧ್ಯಪ್ರಾಚ್ಯದ ಮೊದಲ CCAT ಏರೋಮೆಡಿಕಲ್ ಟ್ರಾನ್ಸ್‌ಪೋರ್ಟ್ ಕೋರ್ಸ್‌ಗೆ ಚಾಲನೆ

Update: 2025-12-12 08:13 IST

ಅಜ್ಮಾನ್(ಯುಎಇ), ಡಿ. 12: ಮಧ್ಯಪ್ರಾಚ್ಯದ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (GMU), ಮೊದಲ CCAT ಏರೋಮೆಡಿಕಲ್ ಟ್ರಾನ್ಸ್‌ಪೋರ್ಟ್ – ಫೌಂಡೇಶನ್ ಲೆವೆಲ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಡಿ.4ರಿಂದ 9ರವರೆಗೆ ನಡೆದ ಈ ಆರು ದಿನಗಳ ತರಬೇತಿಗೆ ಭಾರೀ ಪ್ರತಿಕ್ರಿಯೆ ದೊರಕಿದ್ದು, ಮುಂದಿನ ಬ್ಯಾಚ್ ಅನ್ನು ಜೂನ್‌ 2026ರಲ್ಲಿ ಪ್ರಾರಂಭಿಸಲಿದ್ದೇವೆ ಎಂದು ಗಲ್ಫ್ ಮೆಡಿಕಲ್ ಯುನಿವರ್ಸಿಟಿ ತಿಳಿಸಿದೆ.

ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡಿರುವ ಈ ಕೋರ್ಸ್ ವೈದ್ಯರು, ನರ್ಸ್‌ಗಳು, ಅರೆವೈದ್ಯರು ಹಾಗೂ ಏರ್ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸ್ಥಳಾಂತರ ಸೇವೆಗಳಲ್ಲಿ ತೊಡಗಿರುವ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. GMU ಯ ಅತ್ಯಾಧುನಿಕ ಕ್ಲಿನಿಕಲ್ ಸಿಮ್ಯುಲೇಶನ್ ಕೇಂದ್ರದಲ್ಲಿ ನೈಜ ವಿಮಾನ ಪರಿಸ್ಥಿತಿಗಳನ್ನೇ ಪ್ರತಿಬಿಂಬಿಸುವ ಕಾಕ್ ಪೀಟ್ ನಂತೆ ವಿನ್ಯಾಸ ಮಾಡಿರುವ ತರಬೇತಿ ಘಟಕಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಗಮನ ಸೆಳೆದವು.

ವೈದ್ಯಕೀಯ ಪ್ರವಾಸೋದ್ಯಮದ ಜಾಗತಿಕ ವಿಸ್ತರಣೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ತುರ್ತು ರೋಗಿಗಳ ಸ್ಥಳಾಂತರಗಳಿಗೆ ಹೆಚ್ಚುತ್ತಿರುವ ಅವಶ್ಯಕತೆ ಮತ್ತು ಏರ್‌ ಆಂಬ್ಯುಲೆನ್ಸ್ ಸೇವೆಗಳ ಮೇಲಿನ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಏರಿದ ಪರಿಣಾಮ, ಏರೋಮೆಡಿಕಲ್ ಸೇವೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಉದ್ಯಮ ವಲಯದ ವರದಿ ಪ್ರಕಾರ, ಈ ವಲಯವು ಈಗ ಎರಡಂಕಿಯ ದರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಉನ್ನತ ಮಟ್ಟದ, ಸಂರಚಿತ ಹಾಗೂ ಸಾಮರ್ಥ್ಯಾಧಾರಿತ ತರಬೇತಿ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಯುಕೆಯ CCAT ತಜ್ಞರ ಸಹಯೋಗದಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮವನ್ನು ಕೋರ್ಸ್ ನಿರ್ದೇಶಕ ಪ್ರೊ. ಡಾ. ಟೆರ್ರಿ ಮಾರ್ಟಿನ್ ನೇತೃತ್ವದಲ್ಲಿ ರೂಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರೊ. ಡಾ. ಟೆರ್ರಿ, “ಏರೋಮೆಡಿಕಲ್ ಸೇವೆ ಸಂಪೂರ್ಣ ವಿಭಿನ್ನ ಕಾರ್ಯಪರಿಣಾಮದ ಜಗತ್ತು. ಆಗಸದಲ್ಲಿ ರೋಗಿಯ ಆರೈಕೆ ಮಾಡಲು ನಿಖರ ಕೌಶಲ್ಯ ಮತ್ತು ತ್ವರಿತ ನಿರ್ಧಾರದ ಸಾಮರ್ಥ್ಯ ಬೇಕಾಗುತ್ತದೆ,” ಎಂದರು.

“ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಹಾಗೂ ವಿಶ್ವಾಸಾರ್ಹ ಚಿಕಿತ್ಸೆ ನೀಡಬಲ್ಲ ಆರೋಗ್ಯ ವೃತ್ತಿಪರರನ್ನು ತಯಾರಿಸುವುದು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಗುರಿ. ಏರೋಮೆಡಿಕಲ್ ಆರೈಕೆ ಹೆಚ್ಚಿನ ಜವಾಬ್ದಾರಿಯ ಕ್ಷೇತ್ರ; ಇದಕ್ಕೆ ಬೇಕಾದ ಪರಿಣತಿಯನ್ನು ಈ ಕೋರ್ಸ್ ಒದಗಿಸುತ್ತದೆ”, ಎಂದು GMU ಕುಲಪತಿ ಪ್ರೊ. ಡಾ. ಮಂದಾ ವೆಂಕಟ್ರಮಣ ಹೇಳಿದರು.

“ವಾಯು ವೈದ್ಯಕೀಯ ಸಾರಿಗೆ ಇಂದಿನ ಜಗತ್ತಿನಲ್ಲಿ ಅನಿವಾರ್ಯ. ಜಾಗತಿಕ ಆರೋಗ್ಯ ರಕ್ಷಣೆಯ ಬದಲಾದ ಅವಶ್ಯಕತೆಗಳನ್ನು ಗಮನಿಸಿದಾಗ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ತರಬೇತಿ ಕ್ರಮಗಳು ಭವಿಷ್ಯದಲ್ಲಿ ಬಹಳ ಮುಖ್ಯವಾದುದು. ಜಾಗತಿಕ ಅಗತ್ಯಗಳಿಗೆ ಅನುಗುಣವಾದ ಕೋರ್ಸ್ ಗಳಲ್ಲಿ ನಾವು ಹೂಡಿಕೆ ಮಾಡುತ್ತೇವೆ", ಎಂದು ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಹೇಳಿದರು.

ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಹಾಗೂ ಉತ್ತರ ಅಮೆರಿಕಾದಿಂದ ಭಾಗವಹಿಸಿದ ವಿವಿಧ ವೃತ್ತಿಪರರು CCAT–GMU ಸಂಯುಕ್ತ ಪ್ರಮಾಣಪತ್ರ ಪಡೆದಿದ್ದಾರೆ. ಮುಂದಿನ ವರ್ಷ ಜೂನ್‌ನಿಂದ ಸುಧಾರಿತ ಮಾಡ್ಯೂಲ್‌ಗಳು ಹಾಗೂ ಮುಂದುವರೆದ ಏರೋಮೆಡಿಕಲ್ ತರಬೇತಿಗಳನ್ನು ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಪ್ರಾರಂಭಿಸಲಿದೆ.

ಪ್ರಸಕ್ತ ಸೆಮಿಸ್ಟರ್ ಗೆ ಪ್ರವೇಶಾತಿ ಆರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ www.gmu.ac.ae ಗೆ ಭೇಟಿ ನೀಡಬಹುದು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News