×
Ad

"ಸಂಘರ್ಷದ ಲಾಭ ಪಡೆಯಲು ಬರುವ ವಂಚಕರಿಗೆ ದುಬೈ ನಿವಾಸಿಗಳು ಬಾಗಿಲು ತೆರೆಯಬೇಡಿ"

'ವಾರ್ತಾ ಭಾರತಿ' ಚಾನಲ್ ಚರ್ಚೆಯಲ್ಲಿ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಮನವಿ

Update: 2026-03-03 23:25 IST

ವಕ್ವಾಡಿ ಪ್ರವೀಣ್ ಶೆಟ್ಟಿ

ದುಬೈ: ದುಬೈಯಲ್ಲಿ ಸಂಘರ್ಷದ ಲಾಭ ಪಡೆದು ಟ್ಯುನಿಷಿಯನ್- ಮೊರೊಕ್ಕೊದ ತಂಡವೊಂದು ಒಳ್ಳೆಯ ಡ್ರೆಸ್ ಹಾಕಿಕೊಂಡು ಲ್ಯಾಪ್ ಟಾಪ್ ಹಿಡಿದುಕೊಂಡು ಮನೆಮನೆಗೆ ಬರುತ್ತಿದ್ದು, ನಾವು ಮಿನಿಸ್ಟ್ರಿ ಆಫ್ ಇಂಟೀರಿಯರ್ ನಿಂದ ಬಂದಿದ್ದೇವೆ, ಯುದ್ಧದ ಬಗ್ಗೆ ಮಾಹಿತಿ, ಅಭಿಪ್ರಾಯ ಪಡೆಯಲು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ದಯವಿಟ್ಟು ಜಾಗೃತೆ ವಹಿಸಿ, ಯಾರೂ ಕೂಡ ಬಾಗಿಲು ತೆರೆಯಬೇಡಿ ಎಂದು ದುಬೈ ಪೊಲೀಸ್ ನಿಂದ ಎಚ್ಚರಿಕೆಯ ಮೆಸೇಜ್ ಬಂದಿದೆ ಎಂದು ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ, ಹೋಟೆಲ್ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

'ವಾರ್ತಾ ಭಾರತಿ' ಚಾನೆಲ್ ನಡೆಸಿದ 'Iran- Israel, America ಸಂಘರ್ಷ | ಗಲ್ಫ್ ದೇಶಗಳಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆ ?' ಎಂಬ ಚರ್ಚಾ ವಿಷಯದಲ್ಲಿ ಮಾತನಾಡುತ್ತಿದ್ದ ಅವರು, ಅನಿವಾಸಿ ಭಾರತೀಯರಿಗೆ ಯಾವುದೇ ರೀತಿಯ ಸಮಸ್ಯೆ, ಸಂಕಷ್ಟ ಎದುರಾದಾಗ ಮೊದಲು ಅನಿವಾಸಿಗಳ ಪರವಾಗಿ ನಿಂತು ಸುದ್ದಿ ಪ್ರಕಟಿಸುವುದು ವಾರ್ತಾ ಭಾರತಿ. ಯುದ್ಧದ ಆತಂಕದ ಮಧ್ಯೆಯೂ ನಮಗೆ ಸದಾ ಬೆಂಬಲ ನೀಡುತ್ತಿರುವುದಕ್ಕೆ ಪತ್ರಿಕೆ, ಚಾನೆಲ್ ಗೆ ಕೃತಜ್ಞತೆ ಸಲ್ಲಿಸಿದರು.

ದುಬೈಯಲ್ಲಿ ಏನೇ ಆದರೂ ಇಲ್ಲಿನ ಸರಕಾರ, ವ್ಯವಸ್ಥೆ ಸದಾ ಜನರೊಂದಿಗಿರುತ್ತದೆ. ಯಾರು ಕೂಡ ಸಂಘರ್ಷದ ಹಿನ್ನೆಲೆಯಲ್ಲಿ ಭಯ ಪಡುವ ಅಗತ್ಯವಿಲ್ಲ. ಇಲ್ಲಿನ ಸರ್ಕಾರ ಜನರನ್ನು ನಿರಂತರವಾಗಿ ಸಲಹೆ, ಸೂಚನೆಗಳ ಮಾಹಿತಿ ನೀಡಿ ಎಚ್ಚರಿಸುತ್ತಿದೆ ಎಂದರು.

ದುಬೈಗೆ ಪ್ರವಾಸಕ್ಕೆ ಬಂದು ಸಿಲುಕಿಹಾಕಿಕೊಂಡವರಿಗೆ ಮಾತ್ರ ಸಮಸ್ಯೆ ಎದುರಾಗಿದ್ದು, ಯುಎಇಯಲ್ಲಿ ನೆಲೆಸಿರುವ ಕನ್ನಡಿಗರಿಗಾಗಲಿ, ಭಾರತೀಯರಿಗಾಗಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ದುಬೈಗೆ ಪ್ರವಾಸಕ್ಕೆಂದು ಬಂದವರಿಗೆ ಮೊದಲ ಆದ್ಯತೆ ಮೇಲೆ ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗುತ್ತಿದೆ. ಫ್ಲೈ ದುಬೈ, ಎಮಿರೇಟ್ಸ್, ಐತಿಹಾದ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಯುಎಇಯಲ್ಲಿರುವ ಪ್ರವಾಸಿಗರಿಗೆ, ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವವರಿಗೆ ಆದ್ಯತೆ ಮೇಲೆ ವಿಮಾನ ಪ್ರಯಾಣ ವ್ಯವಸ್ಥೆ ಮಾಡಿ, ಕಳುಹಿಸಲಾಗುತ್ತಿದೆ.

ಇರಾನ್ ನವರಿಗೆ ಯುಎಇ ಮೇಲೆ ಯಾವುದೇ ರೀತಿಯ ದ್ವೇಷವಿಲ್ಲ. ಇಲ್ಲಿ ಹೆಚ್ಚು ಮಂದಿ ಇರಾನಿಯನ್ನರು ಕುಟುಂಬ ಸಮೇತರಾಗಿ ನೆಲೆಸಿದ್ದಾರೆ. ದೊಡ್ಡ ದೊಡ್ಡ ಮಟ್ಟದ ಉದ್ಯಮಿಗಳಿದ್ದಾರೆ. ಆದರೆ ಅಮೇರಿಕದ ಸೇನಾ ನೆಲಗಟ್ಟಿನ ಮೇಲಷ್ಟೇ ಇರಾನ್ ಕ್ಷಿಪಣಿ, ಡ್ರೋನ್ ದಾಳಿ ಮಾಡುತ್ತಿದೆ. ಅದನ್ನು ಯುಎಇ ಸರಕಾರ ಆಕಾಶದಲ್ಲಿಯೇ ಹೊಡೆದುರುಳಿಸುತ್ತಿದೆ. ಈ ವರಗೆ ಯಾವುದೇ ರೀತಿಯ ಸಾವು, ನೋವು ಆಗದ ರೀತಿಯಲ್ಲಿ ಸುರಕ್ಷಿತವಾಗಿ ನಮ್ಮನ್ನು ಇಲ್ಲಿನ ಸರಕಾರ ನೋಡಿಕೊಳ್ಳುತ್ತಿದೆ.

ಸಂಘರ್ಷದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಹೆಚ್ಚುತ್ತಿದೆ. ನಮ್ಮ ಹೋಟೆಲಿನಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇದ್ದಾರೆ. ಅವರಿಗೆ ಮೂರು ಹೊತ್ತಿನ ಊಟ-ತಿಂಡಿ ಕೊಡಬೇಕು. ತರಕಾರಿ, ಹಣ್ಣು ಹಂಪಲುಗಳ ಕೊರತೆ ಎದ್ದು ಕಾಣುತ್ತಿದೆ ಎಂದ ಪ್ರವೀಣ್ ಶೆಟ್ಟಿ, ದುಬೈ ಗಲ್ಫಿನ ಪ್ರವಾಸಿ ಕೇಂದ್ರವಾಗಿರುವುದರಿಂದ ಸಂಘರ್ಷದ ವೇಳೆ ಸುದ್ದಿಯಲ್ಲಿದೆ. ಇಲ್ಲಿ ಯಾವುದೇ ರೀತಿಯ ಅನಾಹುತ, ಪ್ರಾಣಹಾನಿಯಾಗಲಿ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News