Dubai | ತಾಯ್ನಾಡಿಗೆ ವಾಪಸಾದ 60 ಮಂದಿ ಹಿರಿಯ ಕನ್ನಡಿಗರು
ದುಬೈ ಕನ್ನಡಿಗರ ಕೂಟದಿಂದ ನೆರವು
ದುಬೈ: ಕನ್ನಡಿಗರ ಕೂಟ ದುಬೈ ಮತ್ತು ಕರ್ನಾಟಕ ಬ್ರಿಗೇಡ್ ತಂಡದ ಸಂಯುಕ್ತ ಪ್ರಯತ್ನದಿಂದ ಪ್ರವಾಸಕ್ಕೆಂದು ಬಂದು ದುಬೈಯಲ್ಲಿ ಸಿಕ್ಕಾಕಿಕೊಂಡಿದ್ದ 60 ವರ್ಷ ಮೇಲ್ಪಟ್ಟ 60 ಮಂದಿ ಹಿರಿಯ ಕನ್ನಡಿಗರನ್ನು ಅವರ ಸ್ವಗ್ರಾಮಗಳಿಗೆ ಸುರಕ್ಷಿತವಾಗಿ ಕಳುಹಿಸಲಾಗಿದ್ದು, ಅವರು ಗುರುವಾರ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್, ಈ ಮಾನವೀಯ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಸಂಪೂರ್ಣ ತಂಡಕ್ಕೆ ಮತ್ತು ಹಲವು ಕೊಡುಗೈ ಧಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ವಿಶೇಷವಾಗಿ ತಂಡದಲ್ಲಿ ಸಹಕರಿಸಿದ ಮಾಧವ್ ಕಿರಣ (ಉದ್ಯಮಿ), ಭಾರ್ಗವ್ ಶರ್ಮಾ (ಸ್ಥಳೀಯ ಬ್ಯಾಂಕ್ ನಿರ್ದೇಶಕ), ದೀಪಕ್ ಸೋಮಶೇಖರ್ (ಗಲ್ಫ್ ಕನ್ನಡ ಮೂವೀಸ್), ಚೇತನ್ ಸುಬ್ರಹ್ಮಣ್ಯ (ಇಂಪ್ರೆಸಿವ್ ರಿಯಲ್ ಎಸ್ಟೇಟ್), ಅಶ್ರಿತ್, ಬೆಂಗಳೂರು (ಟಿಫನೀಸ್ ಮಾಲೀಕ), ಮಂಜುಳಾ (ಸಾಫ್ಟ್ವೇರ್ ಉದ್ಯಮಿ) ಅವರ ಕೊಡುಗೆಯನ್ನು ಅವರು ಪ್ರಶಂಸಿಸಿದರು.
ಸಂಕಷ್ಟದ ವೇಳೆ ಜೊತೆಗಿದ್ದು, ಮಾರ್ಗದರ್ಶನ ನೀಡಿ ಧನ ಸಹಾಯ ಮಾಡಿದ ಖ್ಯಾತ ಅನಿವಾಸಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೋ ಅವರಿಗೆ ಧನ್ಯವಾದ ತಿಳಿಸಿದರು. ಅವರ ನಿರ್ದೇಶನದಂತೆ ನಿಯೋಜನೆಗೊಂಡ ಕನ್ನಡಿಗರ ಹೆಲ್ಪ್‌ಲೈನ್ ನಿಂದ ತುರ್ತು ಸಹಾಯ, ವಸತಿ, ಆಹಾರ, ವೈದ್ಯಕೀಯ ನೆರವು ಮತ್ತು ವಾಪಸಿ ವಿಮಾನಗಳ ಮಾಹಿತಿಗಾಗಿ AI ಚಾಟ್‌ಬಾಟ್ ವ್ಯವಸ್ಥೆ, ದುಬೈ ಉದ್ಯಮಿ ಹಿದಾಯತ್ ಅಡ್ಡೂರು ಅವರ ಸಹಕಾರದಿಂದ ತುರ್ತು ವ್ಯವಸ್ಥೆ ಕಲ್ಪಿಸಲು ಸಹಕಾರಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಅಮೇರಿಕ–ಇರಾನ್ ನಡುವಿನ ಯುದ್ಧ ಆರಂಭವಾದ ದಿನದಿಂದಲೇ ತಂಡವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ತಂಡದ ಸದಸ್ಯರು ನೀಡಿದ ಮಾಹಿತಿಯ ಪ್ರಕಾರ, ಇನ್ನೂ 150 ರಿಂದ 200 ಮಂದಿ ಕನ್ನಡಿಗರು ಯುಎಇ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ವಸತಿ, ಆಹಾರ ಮತ್ತು ಸುರಕ್ಷಿತ ವಾಪಸಿಗಾಗಿ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸ್ವಗ್ರಾಮ ತಲುಪಿದ ಹಿರಿಯರು ಕನ್ನಡಿಗರ ಕೂಟ ಮತ್ತು ಕರ್ನಾಟಕ ಬ್ರಿಗೇಡ್ ತಂಡದ ಸೇವೆಯನ್ನು ಕೊಂಡಾಡಿದ್ದು, ಸುರಕ್ಷಿತ ವಸತಿ ವ್ಯವಸ್ಥೆ, ಸಮಯಕ್ಕೆ ಸರಿಯಾದ ಆಹಾರ ಮತ್ತು ವೈದ್ಯಕೀಯ ನೆರವು, ಕಷ್ಟಕರ ಪರಿಸ್ಥಿತಿಯಲ್ಲೂ ಕೊಚ್ಚಿಗೆ ವಿಮಾನ ವ್ಯವಸ್ಥೆ, ಅಲ್ಲಿಂದ ಬೆಂಗಳೂರು ಮತ್ತು ನಂತರ ತಮ್ಮ ತಮ್ಮ ಊರುಗಳಿಗೆ ವಿಶೇಷ ವಾಹನ ವ್ಯವಸ್ಥೆ ಮಾಡಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.