“ದುಬೈ ಪರಿಸ್ಥಿತಿ ಕುರಿತು ಕನ್ನಡ ಟಿವಿ ಚಾನೆಲ್ ಗಳು ಬಿತ್ತರಿಸುತ್ತಿರುವ ಕಪೋಲಕಲ್ಪಿತ ಸುದ್ದಿಗಳನ್ನು ನಿಲ್ಲಿಸಿ”
'ವಾರ್ತಾ ಭಾರತಿ' ಚಾನಲ್ ಚರ್ಚೆಯಲ್ಲಿ ಡಾ.ರೊನಾಲ್ಡ್ ಕೊಲಾಸೊ ಮನವಿ
ಡಾ.ರೊನಾಲ್ಡ್ ಕೊಲಾಸೊ
ದುಬೈ: ಸಂಘರ್ಷದ ಹಿನ್ನೆಲೆಯಲ್ಲಿ ದುಬೈಯ ಪರಿಸ್ಥಿತಿ ಯಾವುದೇ ರೀತಿ ಕಳವಳಕಾರಿಯಾಗಿಲ್ಲ. ಯಾವುದೇ ರೀತಿಯ ಭಯ, ಆತಂಕವಿಲ್ಲ. ಕನ್ನಡ ಟಿವಿ ಚಾನೆಲ್ ಗಳು ಬಿತ್ತರಿಸುತ್ತಿರುವ ವೈಭವೀಕೃತ ಸುದ್ದಿಗಳು ಕಪೋಲಕಲ್ಪಿತ, ಈ ರೀತಿಯ ವರದಿಗಾರಿಕೆ ನಿಲ್ಲಿಸಬೇಕು ಎಂದು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಹೇಳಿದ್ದಾರೆ.
'ವಾರ್ತಾ ಭಾರತಿ' ಯುಟ್ಯೂಬ್ ಚಾನೆಲ್ ನಡೆಸಿದ 'Iran- Israel, America ಸಂಘರ್ಷ | ಗಲ್ಫ್ ದೇಶಗಳಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆ ?' ಎಂಬ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.
ಕನ್ನಡ ಚಾನೆಲ್ ಗಳು 'ಅಯ್ಯೋ ದುಬೈಯ ಏರ್ ಪೋರ್ಟ್ ಧ್ವಂಸ ಆಯಿತು... ದುಬೈ ಧಘ ಧಘ, ಭಗ ಭಗ' ಎಂದು ಸುದ್ದಿ ಮಾಡುವ ಮೂಲಕ ತನ್ನ TRP ಗಾಗಿ ಸುದ್ದಿಗಳನ್ನು ವೈಭವೀಕರಿಸುತ್ತಿವೆ. ಇದರಿಂದ ಯುಎಇಯಲ್ಲಿರುವ 43 ಲಕ್ಷಕ್ಕೂ ಹೆಚ್ಚು ಭಾರತೀಯರ ಮನೆಯವರಲ್ಲಿ, ಜನರಲ್ಲಿ ಭಯ, ಆತಂಕದ ವಾತಾವರಣ ಮೂಡುವಂತೆ ಮಾಡುತ್ತಿರುವುದು ಸರಿಯಲ್ಲ. ನಾವೆಲ್ಲಾ ಇಲ್ಲಿ ಸುರಕ್ಷಿತವಾಗಿದ್ದೇವೆ. ಯುಎಇ ನಮಗೆ ಬೇಕಾದ ಎಲ್ಲ ರೀತಿಯ ಸುರಕ್ಷತಾ ಕಾರ್ಯವನ್ನು ಮಾಡುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮಾಧ್ಯಮಗಳು ಬಿತ್ತರಿಸುತ್ತಿರುವ ವೈಭವೀಕೃತ ಸುದ್ದಿಗಳನ್ನು ನಂಬಬೇಡಿ, ಜೊತೆಗೆ ಅಂತ ಸುದ್ದಿಗಳನ್ನು ದಯವಿಟ್ಟು ಪ್ರಸಾರ ಮಾಡಿ ಜನರ ನೆಮ್ಮದಿ ಹಾಳು ಮಾಡಬೇಡಿ ಎಂದರು.
ಇರಾನ್‍ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ನಂತರ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ ಬರಬೇಕೆಂದು ಅಲ್ಲಿನ ಜನ ಬಯಸಿದರೆ ಈಗ ನಡೆಯುತ್ತಿರುವ ಸಂಘರ್ಷ ಕೊನೆಗೊಳ್ಳಬಹುದು. ಇಲ್ಲದಿದ್ದರೆ ಈ ಸಂಘರ್ಷ ಇನ್ನಷ್ಟು ತೀವ್ರತೆಯನ್ನು ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಸಂಘರ್ಷ ತೀವ್ರ ಪಡೆದರೂ ಇಲ್ಲಿನ ದಿನನಿತ್ಯ ವಸ್ತುಗಳ, ಹಣ್ಣು ಹಂಪಲು, ತರಕಾರಿಗಳ ಸರಬರಾಜಿಗೆ ಯಾವುದೇ ರೀತಿಯ ಸಮಸ್ಯೆ ಆಗಲ್ಲ. ಆದರೆ ಇರಾನ್ ಇತರ ದೇಶಗಳ ಮೇಲೆ ನಡೆಸುತ್ತಿರುವ ದಾಳಿ ಇದೆ ರೀತಿ ಮುಂದುವರಿದರೆ ದಾಳಿಗೀಡಾದ ರಾಷ್ಟ್ರಗಳು ಕೂಡ ಒಟ್ಟು ಸೇರುವ ಸಾಧ್ಯತೆ ಇದೆ. ಇನ್ನೊಂದೆಡೆ ಚೀನಾ ಹಾಗು ರಷ್ಯಾ ದೇಶವು ಇರಾನ್ ಜೊತೆ ಸೇರಿದರೆ ಇನ್ನೊಂದು ವಿಶ್ವ ಯುದ್ಧ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾನವ ಕುಲ ನಾಶವಾಗದ ರೀತಿಯಲ್ಲಿ ಅವರಿಗೆ ಸದ್ಬುದ್ಧಿಯನ್ನು ಕೊಡಲಿ ಎಂದರು.
ಇರಾನ್ ತನ್ನ ಸುತ್ತಮುತ್ತಲಿನ ಗಲ್ಫ್ ರಾಷ್ಟ್ರಗಳು ಸೇರಿದಂತೆ ಸುಮಾರು 15 ದೇಶಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ಮುಂದುವರಿಸುತ್ತಿರುವುದನ್ನು ನೋಡಿದರೆ ಯಾವ ಉದ್ದೇಶಕ್ಕೆ ಎಂಬುದು ಇನ್ನೂ ಖಚಿತವಾಗಿಲ್ಲ. ಯುದ್ಧ ನಡೆಯುತ್ತಿರುವುದು ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆ. ಆದರೆ ಗಲ್ಫ್ ರಾಷ್ಟ್ರಗಳ ಮೇಲೆ ಏಕೆ ದಾಳಿ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ದುಬೈಯಲ್ಲಿ ಸಿಲುಕಿಕೊಂಡಿದ್ದ MLC ಭೋಜೇಗೌಡರೊಂದಿಗೆ ನಾನು ಮಾತನಾಡಿದ್ದು, ಅವರ ಮೂಲಕ ಮುಖ್ಯಮಂತ್ರಿಯಿಂದ 2 ಕೋಟಿ ರೂ.ತುರ್ತು ಪರಿಸ್ಥಿತಿ ನಿಭಾಯಿಸಲು ಸಹಾಯಧನ ನೀಡುವಂತೆ ಮನವಿ ಮಾಡಿದ್ದೇವೆ. ಅವರು ಮುಖ್ಯಮಂತ್ರಿ, ಹೆಚ್.ಕೆ.ಪಾಟೀಲ್, ಕೃಷ್ಣೇಭೈರೇಗೌಡರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ ಆ ಹಣ ಬರುವವರೆಗೆ ಇಲ್ಲಿನ ಕನ್ನಡಿಗರ ರಕ್ಷಣೆಗೆ ಬೇಕಾದ ಹಣಕಾಸಿನ ನೆರವನ್ನು ನಾನು ಕೊಡುತ್ತೇನೆ ಎಂದಿದ್ದೇನೆ.
ಕೊರೋನಾ, ಪ್ರವಾಹದ ಸಂದರ್ಭದಲ್ಲಿ ಯುಎಇ ತೋರಿಸಿದಂಥ ಮಾನವೀಯತೆ ವಿಶ್ವದ ಬೇರೆ ಯಾವ ದೇಶವೂ ತೋರಿಸಿಲ್ಲ. ಅದೇ ರೀತಿ ಈಗಲೂ ಇಲ್ಲಿನ ಜನರ ರಕ್ಷಣೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಯುಎಇ ಮಾಡುತ್ತಿದೆ. ಜೊತೆಗೆ ಸಲಹೆ ಸೂಚನೆಗಳನ್ನು ನಿರಂತರವಾಗಿ ನೀಡುತ್ತಲೇ ಇದೆ.
ಈ ಹಿಂದೆ ಯುಎಇಯಲ್ಲಿ ಕೊರೋನಾ, ಪ್ರವಾಹ ಸಂಭವಿಸಿದಾಗ ಎಲ್ಲ ಕನ್ನಡಿಗರು, ಸಂಘ ಸಂಸ್ಥೆಗಳು ಹಿದಾಯತ್ ಅಡ್ಡೂರು ಅವರ ಮುಖಂಡತ್ವದಲ್ಲಿ 'ಕನ್ನಡಿಗಾಸ್ ಹೆಲ್ಪ್ ಲೈನ್' ತಂಡವನ್ನು ಕಟ್ಟಿಕೊಂಡು ರಕ್ಷಣಾ ಕಾರ್ಯದಲ್ಲಿ, ಸೇವೆಯಲ್ಲಿ ತಮ್ಮ ಕಿಸೆಯಿಂದಲೇ ಹಣವನ್ನು ಹಾಕಿ ಇಲ್ಲಿನ ಕನ್ನಡಿಗರನ್ನು ರಕ್ಷಿಸಿದ್ದಾರೆ. ಅದೇ ಮಾದರಿಯಲ್ಲಿ ಈ ಬಾರಿ ಯುದ್ಧ ನಡೆಯುವ ಸಂದರ್ಭದಲ್ಲಿಯೂ 'ಕನ್ನಡಿಗಾಸ್ ಹೆಲ್ಪ್ ಲೈನ್' ತಂಡ ಎಲ್ಲ ಕನ್ನಡಪರ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಧಾವಿಸುತ್ತಿರುದು ನಿಜವಾಗಿಯೂ ಶ್ಲಾಘನೀಯ ಕಾರ್ಯ. ಇದರ ನೇತೃತ್ವವನ್ನು ನನಗೆ ವಹಿಸಿದ್ದು, ನಾವೆಲ್ಲಾ ಒಟ್ಟು ಸೇರಿಕೊಂಡು ಮುನ್ನಡೆಯುತ್ತಿದ್ದೇವೆ. ಇಲ್ಲಿ ಯಾವುದೇ ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ, ಸಮಸ್ಯೆ ಆದರೂ ನಾವು ಅವರ ಸಹಾಯಕ್ಕೆ ಸಿದ್ಧರಿದ್ದೇವೆ ಎಂದರು.