×
Ad

ಅಮೆರಿಕದ ಸಹವಾಸ ಸಾಕು ಎಂದು ನಿರ್ಧಾರ ತಳೆದ ಗಲ್ಫ್ ರಾಷ್ಟ್ರಗಳು?

ಅಮೆರಿಕದಲ್ಲಿನ ಹೂಡಿಕೆಗಳಿಂದ ಹಿಂದೆ ಸರಿಯುವ ಕುರಿತು ಗಲ್ಫ್ ರಾಷ್ಟ್ರಗಳ ಚರ್ಚೆ: ವರದಿ

Update: 2026-03-06 21:27 IST

ಸಾಂದರ್ಭಿಕ ಚಿತ್ರ |Photo Credit ; X 

ದುಬೈ: ಗಲ್ಫ್ ಪ್ರದೇಶದ ನಾಲ್ಕು ದೊಡ್ಡ ಆರ್ಥಿಕತೆಗಳಲ್ಲಿ ಮೂರು ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್ ಅಮೆರಿಕ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಹೂಡಿಕೆಗಳಿಂದ ಹಿಂದೆ ಸರಿಯುವ ಸಾಧ್ಯತೆ ಕುರಿತು ಚರ್ಚೆ ನಡೆಸುತ್ತಿರುವುದಾಗಿ financial times ವರದಿ ಮಾಡಿದೆ.

ವರದಿ ಪ್ರಕಾರ, ಗಲ್ಫ್ ಪ್ರದೇಶದಾದ್ಯಂತ ಆರ್ಥಿಕ ಒತ್ತಡಗಳು ಹೆಚ್ಚುತ್ತಿವೆ. ಇಂಧನ ಆದಾಯದಲ್ಲಿನ ಇಳಿಕೆ, ಸಮುದ್ರ ಹಡಗು ಮಾರ್ಗಗಳಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಇಳಿಕೆಯು ಅಲ್ಲಿನ ಆಡಳಿತಗಾರರಿಗೆ ಈಗಿರುವ ಹಣಕಾಸಿನ ಬದ್ಧತೆಗಳನ್ನು ಮರುಪರಿಶೀಲಿಸಲು ಪ್ರೇರೇಪಿಸಿದೆ ಎನ್ನಲಾಗಿದೆ.

ಸಂಭಾವ್ಯ ಬದಲಾವಣೆಯನ್ನು ಮೂಲಗಳು ತಕ್ಷಣದ ನೀತಿ ಬದಲಾವಣೆ ಅಲ್ಲ, ಬದಲಾಗಿ ಮುನ್ನೆಚ್ಚರಿಕೆ ಕ್ರಮವೆಂದು ವಿವರಿಸಿವೆ. ಆದರೆ ಗಲ್ಫ್ ರಾಷ್ಟ್ರಗಳ ಸಾರ್ವಭೌಮ ಸಂಪತ್ತು ನಿಧಿಗಳ ಪ್ರಮಾಣ ದೊಡ್ಡದಾಗಿರುವುದರಿಂದ ಯಾವುದೇ ಗಮನಾರ್ಹ ಮರುಹಂಚಿಕೆ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದಲ್ಲಿನ ಈಕ್ವಿಟಿಗಳು, ಬಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್ ಸೇರಿ ವಿವಿಧ ಸ್ವತ್ತುಗಳಲ್ಲಿ ಗಲ್ಫ್ ಸಾರ್ವಭೌಮ ಸಂಪತ್ತು ನಿಧಿಗಳ ಒಟ್ಟಾರೆ ಹೂಡಿಕೆ ಅಂದಾಜು 2 ಟ್ರಿಲಿಯನ್ ಡಾಲರ್ ಆಗಿದೆ ಎಂದು ವರದಿ ಹೇಳಿದೆ.

ಇರಾನ್‌ನೊಂದಿಗಿನ ನಡೆಯುತ್ತಿರುವ ಸಂಘರ್ಷವು ಪ್ರದೇಶದ ಆರ್ಥಿಕ ದೃಷ್ಟಿಕೋನದ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆಗಳು ಮುಂದುವರಿದಿವೆ. ಗಲ್ಫ್ ಸರ್ಕಾರಗಳಿಗೆ ಈಗ ಎರಡು ಪ್ರಮುಖ ಸವಾಲುಗಳು ಎದುರಾಗಿವೆ, ದೇಶೀಯ ಹಣಕಾಸಿನ ಒತ್ತಡಗಳನ್ನು ನಿರ್ವಹಿಸುವುದು ಮತ್ತು ಸಂಕೀರ್ಣವಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸುವುದು.

ಅಂತರರಾಷ್ಟ್ರೀಯ ಹೂಡಿಕೆಗಳನ್ನು ಕಡಿಮೆ ಮಾಡುವ ಯಾವುದೇ ನಿರ್ಧಾರ ರಾಜತಾಂತ್ರಿಕ ಪರಿಣಾಮಗಳನ್ನೂ ಹೊಂದಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಗಲ್ಫ್ ರಾಷ್ಟ್ರಗಳ ಬಂಡವಾಳ ಹೂಡಿಕೆಗೆ ಅಮೆರಿಕ ಬಹುಕಾಲದಿಂದ ಪ್ರಮುಖ ತಾಣವಾಗಿದ್ದು, ಆ ಸಂಬಂಧದಲ್ಲಿ ಸಂಭವಿಸುವ ಯಾವುದೇ ಬದಲಾವಣೆಗಳನ್ನು ನೀತಿ ನಿರೂಪಕರು ಮತ್ತು ಹಣಕಾಸು ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News