×
Ad

ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ; ನಮಗೆ ನಿರಾಶೆಯಾಗಿದೆ: ಡಾ. ರೊನಾಲ್ಡ್ ಕೊಲಾಸೊ

ಕರ್ನಾಟಕ ಸರಕಾರ ಕೊಟ್ಟ ಭರವಸೆ ಈಡೇರಿಸಲಿಲ್ಲ: ಅನಿವಾಸಿಗಳಿಗೆ ಅಸಮಾಧಾನ

Update: 2026-03-06 18:20 IST

ಡಾ. ರೊನಾಲ್ಡ್ ಕೊಲಾಸೊ

ದುಬೈ: ಶುಕ್ರವಾರ ಮಂಡನೆಯಾಗಿರುವ ಕರ್ನಾಟಕ ಬಜೆಟ್-2026ರಲ್ಲಿ ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ 'ಪ್ರತ್ಯೇಕ ಸಚಿವಾಲಯ' ಘೋಷಣೆಯಾಗದಿರುವುದು ಅತೀವ ನಿರಾಸೆಯನ್ನುಂಟು ಮಾಡಿದೆ ಎಂದು ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಬೇಸರ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 11ರಂದು ಬೆಳಗಾವಿ ಅಧಿವೇಶನದ ವೇಳೆ ಡಾ.ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ ಸಿಎಂ-ಡಿಸಿಎಂ‌-ಗೃಹಸಚಿವರು, ಇತರ ಸಚಿವರು ಹಾಗೂ ವಿಪಕ್ಷ ನಾಯಕರನ್ನು ಭೇಟಿಯಾದ ಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ NRI ನಿಯೋಗವು 'ಪ್ರತ್ಯೇಕ ಸಚಿವಾಲಯ'ಕ್ಕಾಗಿ ಬೇಡಿಕೆಯ ಮನವಿ ಸಲ್ಲಿಸಿತ್ತು.

ಈ ವೇಳೆ ಖುದ್ದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗು ಇತರ ಸಚಿವರು 'ಪ್ರತ್ಯೇಕ ಸಚಿವಾಲಯ'ವನ್ನು ಶೀಘ್ರವೇ ಮಾಡುವ ಭರವಸೆ ನೀಡಿದ್ದರು. ಹಾಗಾಗಿ ಅನಿವಾಸಿ ಕನ್ನಡಿಗರ ಈ ಬಹುಕಾಲದ ಬೇಡಿಕೆ ಕೊನೆಗೂ ಈಡೇರುವ ನಿರೀಕ್ಷೆ ಇತ್ತು. ಆದರೆ ಈ ಬಾರಿಯ ಕರ್ನಾಟಕ ಬಜೆಟ್-2026ನಲ್ಲಿ ಯಾವುದೇ ರೀತಿಯ ಘೋಷಣೆ ಆಗಲಿ, ಉಲ್ಲೇಖವಾಗಲಿ ಮಾಡದಿರುವುದಕ್ಕೆ ಡಾ. ರೊನಾಲ್ಡ್ ಕೊಲಾಸೊ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ 'ವಾರ್ತಾ ಭಾರತಿ'ಯೊಂದಿಗೆ ಮಾತನಾಡಿರುವ ಅವರು, ಈ ಬಾರಿಯ ಬಜೆಟ್ ನಲ್ಲಿ 'ಪ್ರತ್ಯೇಕ ಸಚಿವಾಲಯ'ದ ಘೋಷಣೆಯಾಗಲಿದೆ ಎಂದು ಬಹುದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು. ಆದರೆ ಕರ್ನಾಟಕ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನಿವಾಸಿ ಕನ್ನಡಿಗರ ಆಸೆ, ನಿರೀಕ್ಷೆಗೆ ತಣ್ಣೀರೆರೆಚಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಇತರ ಸಚಿವರನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಭೇಟಿ ಮಾಡಿ, ಪ್ರತ್ಯೇಕ ಸಚಿವಾಲಯ ಇಲ್ಲದಿರುವುದರಿಂದ ಅನಿವಾಸಿ ಕನ್ನಡಿಗರಿಗೆ ಆಗುತ್ತಿರುವ ಹಲವು ಸಮಸ್ಯೆ ಹಾಗು ಪ್ರತ್ಯೇಕ ಸಚಿವಾಲಯ-ಇಲಾಖೆಯ ಅನಿವಾರ್ಯತೆಯನ್ನು ಮನದಟ್ಟು ಮಾಡುವ ಮೂಲಕ ಮನವಿ ಸಲ್ಲಿಸಿದ್ದೇವು. ಈ ವೇಳೆ ಆದಷ್ಟು ಬೇಗ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ನಿಯೋಗಕ್ಕೆ ಭರವಸೆ ನೀಡಿದ್ದರು. ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಆಗುವುದು ಖಂಡಿತ ಎಂದುಕೊಂಡಿದ್ದ ನಮಗೆ ಸರಕಾರ ನಿರಾಸೆಯನ್ನುಂಟು ಮಾಡಿದೆ ಎಂದು ಡಾ.ಕೊಲಾಸೊ ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ನೀಡಿರುವ ಇನ್ನೊಂದು ಗ್ಯಾರಂಟಿಯಾದ ಅನಿವಾಸಿ ಕನ್ನಡಿಗರು ಕರ್ನಾಟಕದಲ್ಲಿ ಉದ್ಯಮ ನಡೆಸಲು ಉತ್ತೇಜನ ನೀಡುವ ಉದ್ದೇಶದಿಂದ 1 ಸಾವಿರ ಕೋಟಿ ರೂ. ಆವರ್ತನ ನಿಧಿ ಸ್ಥಾಪಿಸುವುದಾಗಿಯೂ ಭರವಸೆ ನೀಡಿದ್ದರು. ಅದರ ಬಗ್ಗೆಯೂ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ನಮಗೆ ಮುಖ್ಯಮಂತ್ರಿ ನೀಡಿರುವ ಭರವಸೆಯು ಭರವಸೆಯಾಗಿಯೇ ಉಳಿದಿದೆ ಎಂದು ಡಾ.ಕೊಲಾಸೊ ಹೇಳಿದ್ದಾರೆ.

ಅನಿವಾಸಿ ಕನ್ನಡಿಗರ ಪ್ರಮುಖ ಹಾಗು ಬಹುಮುಖ್ಯ ಬೇಡಿಕೆಯಾಗಿರುವ 'ಪ್ರತ್ಯೇಕ ಸಚಿವಾಲಯ'ವನ್ನು ಮಾರ್ಚ್ ಅಂತ್ಯದೊಳಗೆ 100% ಸ್ಥಾಪಿಸುವುದಾಗಿ ನಮ್ಮ ನಿಯೋಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭರವಸೆ ನೀಡಿದ್ದರು. ಜೊತೆಗೆ ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೂ ಮನವಿ ಪತ್ರ ನೀಡಿ, ಅನಿವಾಸಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದೆವು.

ನಾವು ಈ ಬಾರಿಯ ಬಜೆಟ್ ನಲ್ಲಿ 'ಪ್ರತ್ಯೇಕ ಸಚಿವಾಲಯ' ಸ್ಥಾಪನೆ ಕುರಿತು ಘೋಷಣೆ ಆಗುತ್ತೆ ಎಂದೇ ನಂಬಿದ್ದೆವು. ನಾವಿಟ್ಟ ನಂಬಿಕೆ, ನಮಗೆ ಕೊಟ್ಟ ಭರವಸೆ ಎಲ್ಲವೂ ಹುಸಿಯಾಗಿದೆ ಎಂದು ಡಾ.ರೊನಾಲ್ಡ್ ಕೊಲಾಸೊ ನೋವನ್ನು ತೋಡಿಕೊಂಡಿದ್ದಾರೆ.

ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಅಲ್ಲಿನ ಸರಕಾರ 'ಪ್ರತ್ಯೇಕ ಸಚಿವಾಲಯ' ಸ್ಥಾಪಿಸಿದೆ. ಇದರಿಂದ ಅಲ್ಲಿನ ಅನಿವಾಸಿಗಳಿಗೆ ಎಲ್ಲ ರೀತಿಯ ಸಹಾಯ, ಸಹಕಾರ ಸಿಗುತ್ತಿದೆ. ಜೊತೆಗೆ ಅಲ್ಲಿನ ಸರಕಾರಕ್ಕೂ ಹಲವು ರೀತಿಯ ಪ್ರಯೋಜನ, ಲಾಭ ಅನಿವಾಸಿಗಳಿಂದ ಸಿಗುತ್ತಿದೆ.

'ಪ್ರತ್ಯೇಕ ಸಚಿವಾಲಯ' ಸ್ಥಾಪನೆಯಿಂದ ಕೇವಲ ಅನಿವಾಸಿ ಕನ್ನಡಿಗರಿಗೆ ಮಾತ್ರ ಪ್ರಯೋಜನ, ಲಾಭ ಸಿಗುವುದಲ್ಲ. ಬದಲಾಗಿ ಕರ್ನಾಟಕ ರಾಜ್ಯಕ್ಕೂ ಇದರಿಂದ ಬಹಳಷ್ಟು ಲಾಭ ಸಿಗಲಿದೆ, ಜೊತೆಗೆ ರಾಜ್ಯದ ಆರ್ಥಿಕತೆಯು ಬೆಳೆಯಲಿದೆ. ಈ ಕುರಿತು ನಮ್ಮ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಕ್ತ ಮಾಹಿತಿ, ಅಂಕಿ ಅಂಶಗಳ ಮೂಲಕ ಮನವರಿಕೆ ಮಾಡಿಕೊಟ್ಟಿತ್ತು.

ಆವರ್ತನ ನಿಧಿ, 'ಪ್ರತ್ಯೇಕ ಸಚಿವಾಲಯ' ಸ್ಥಾಪನೆಯಿಂದ ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಅನಿವಾಸಿ ಕನ್ನಡಿಗರ ಹೂಡಿಕೆ ಹೆಚ್ಚಲು, ನವೋದ್ಯಮಗಳಿಗೆ ಅಗತ್ಯವಾದ ಬಲ ಸಿಗಲು ಮತ್ತು ರಾಜ್ಯದಲ್ಲಿ ಉದ್ಯೋಗಾವಕಾಶ ವಿಸ್ತರಣೆಗಾಗಲು ನೆರವಾಗಲಿದೆ. ಜೊತೆಗೆ ವಿದೇಶದಿಂದ ವೃತ್ತಿಪರರು ರಾಜ್ಯಕ್ಕೆ ಮರಳಲು ಬೇಕಾದ ಆರ್ಥಿಕ ಮತ್ತು ಆಡಳಿತಾತ್ಮಕ ಭರವಸೆ ಒದಗಿಸಲಿದೆ ಎಂಬುದನ್ನು ನಾವು ನೀಡಿರುವ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

NRK ಸಮುದಾಯ ಮಾಡುವ ಹಣ ರವಾನೆ, ಜ್ಞಾನ–ಕೌಶಲ್ಯ, ಜಾಗತಿಕ ಸಂಪರ್ಕ ಜಾಲ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳು ರಾಜ್ಯದ ಆರ್ಥಿಕ–ಸಾಮಾಜಿಕ ಬೆಳವಣಿಗೆಗೆ ನಿರಂತರ ಬಲ ನೀಡುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಅನಿವಾಸಿ ಕನ್ನಡಿಗರ ದೀರ್ಘಕಾಲದ ಬೇಡಿಕೆಗಳಿಗೆ ಸರ್ಕಾರ ತ್ವರಿತ ಮತ್ತು ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ನಮ್ಮ ನಿಯೋಗ ರಾಜ್ಯ ಸರಕಾರವನ್ನು ಒತ್ತಾಯಿಸಿತ್ತು. ಆದರೆ ನಮ್ಮ ಬೇಡಿಕೆ, ಕೊಟ್ಟ ಸಲಹೆ, ಸೂಚನೆಗಳಿಗೆ ಯಾವುದೇ ರೀತಿಯಲ್ಲಿಯೂ ರಾಜ್ಯ ಸರಕಾರ ಸ್ಪಂದಿಸದಿರುವುದು ನಮಗೆ ಬೇಸರ ತಂದಿದೆ ಎಂದು ಡಾ. ಕೊಲಾಸೊ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ 'ಪ್ರತ್ಯೇಕ ಸಚಿವಾಲಯ'ವನ್ನು ಘೋಷಣೆ ಮಾಡುವ ಮೂಲಕ ಅನಿವಾಸಿ ಕನ್ನಡಿಗರ ಬಹುಮುಖ್ಯ ಬೇಡಿಕೆಯನ್ನು ಈಡೇರಿಸಬೇಕು ಎಂದು ಡಾ. ರೊನಾಲ್ಡ್ ಕೊಲಾಸೊ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News