ಘೋಷಣೆಯಾಗದ NRI ಸಚಿವಾಲಯ; ನಮಗೆ ತೀವ್ರ ನಿರಾಶೆಯಾಗಿದೆ: ಝಕರಿಯ ಜೋಕಟ್ಟೆ
Update: 2026-03-06 21:25 IST
ದುಬೈ: ನಾವು ಡಾ.ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ 30 ದೇಶಗಳ ಅನಿವಾಸಿ ಕನ್ನಡಿಗ ಪ್ರತಿನಿಧಿಗಳು ಸರಕಾರದ ಬಳಿ ಹೋಗಿ ಅನಿವಾಸಿ ಸಚಿವಾಲಯ ಪ್ರಾರಂಭಿಸಲು ಆಗ್ರಹಿಸಿದ್ದೆವು. ಸರಕಾರ ನಮ್ಮ ಮನವಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿ ಖಂಡಿತ ಪ್ರತ್ಯೇಕ ಸಚಿವಾಲಯ ಮಾಡುತ್ತೇವೆ ಎಂದು ಭರವಸೆ ನೀಡಿತ್ತು ಆದರೆ ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಖೇದಕರ. ಇದು ಇಡೀ ಅನಿವಾಸಿ ಕನ್ನಡಿಗ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಸೌದಿ ಅರೇಬಿಯಾದ ಖ್ಯಾತ ಅನಿವಾಸಿ ಕನ್ನಡಿಗ, ಉದ್ಯಮಿ, ರಾಜ್ಯೋತ್ಸವ ಪುರಸ್ಕೃತ ಝಕರಿಯ ಜೋಕಟ್ಟೆ ಹೇಳಿದ್ದಾರೆ.
ನಾವು ಎಲ್ಲ ವಿಷಯಗಳನ್ನು ಸರಕಾರದ ಮುಂದೆ ಇಟ್ಟಿದ್ದೆವು. ಸಿಎಂ, ಡಿಸಿಎಂ ಇಬ್ಬರೂ ಎನ್ನರೈ ಸಚಿವಾಲಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಸರಕಾರ ನಮ್ಮನ್ನು ಕಡೆಗಣಿಸಿದೆ ಎಂಬ ಭಾವನೆ ಅನಿವಾಸಿ ಕನ್ನಡಿಗರಲ್ಲಿ ಬಂದಿದೆ. ಈ ಸರಕಾರದಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದು ಝಕರಿಯ ಜೋಕಟ್ಟೆ ಹೇಳಿದ್ದಾರೆ.