×
Ad

ದುಬೈಯಲ್ಲಿ ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರ ಸುರಕ್ಷಿತ ವಾಪಸಾತಿ ಕುರಿತು ಡಾ. ರೊನಾಲ್ಡ್ ಕೊಲಾಸೊ ಜೊತೆ ‘ದುಬೈ ಕನ್ನಡ ಕೂಟ’ ಸಭೆ

Update: 2026-03-04 08:17 IST

ದುಬೈ: ದುಬೈನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರವಾಸಿಗರ ಸ್ಥಿತಿಗತಿ ಕುರಿತು ತುರ್ತು ಮಾಹಿತಿ ನೀಡಲು ಹಾಗೂ ಅವರ ಸುರಕ್ಷಿತ ವಾಪಸಾತಿಗಾಗಿ ಸರ್ಕಾರದ ಮಧ್ಯಸ್ಥಿಕೆ ಕೋರಲು ಕನ್ನಡಿಗರ ಕೂಟ, ದುಬೈ ತಂಡವು ಖ್ಯಾತ ಅನಿವಾಸಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿತು.

ಅಮೇರಿಕ-ಇಸ್ರೇಲ್ ಹಾಗು ಇರಾನ್ ನೇರ ಸಂಘರ್ಷದ ಪರಿಣಾಮ ಉಂಟಾದ ಅಸ್ಥಿರತೆಯ ನಡುವೆಯೂ ದುಬೈ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ದುಬೈನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರ ಕೂಟದ ಪ್ರಮುಖರು, ವಿಮಾನಗಳ ರದ್ದತಿಯಿಂದಾಗಿ ಪ್ರವಾಸಿಗರು ಸೇರಿದಂತೆ ಅನೇಕ ಕನ್ನಡಿಗರು ಸಿಲುಕಿಕೊಂಡಿರುವ ಕುರಿತು ಮಾಹಿತಿ ನೀಡಿದರು. ಅವರಿಗೆ ವಸತಿ, ಆಹಾರ, ವೈದ್ಯಕೀಯ ನೆರವು ಮುಂತಾದ ಮೂಲಭೂತ ಅಗತ್ಯಗಳಿಗಾಗಿ ಕನ್ನಡಿಗರ ಕೂಟ ಹಾಗೂ ಇತರ ಸಂಘಟನೆಗಳು ನೀಡುತ್ತಿರುವ ತುರ್ತು ಸಹಾಯದ ವಿವರಗಳನ್ನು ಹಂಚಿಕೊಂಡರು. ಜೊತೆಗೆ ಕುಟುಂಬಗಳಲ್ಲಿ ಉಂಟಾಗಿರುವ ಆತಂಕದ ಸ್ಥಿತಿಯನ್ನೂ ಡಾ. ಕೊಲಾಸೊ ಅವರ ಗಮನಕ್ಕೆ ತಂದರು.

ಕರ್ನಾಟಕ ಸರ್ಕಾರದೊಂದಿಗೆ ತಕ್ಷಣ ಸಂಪರ್ಕಿಸುವುದಾಗಿ, ದುಬೈಯ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಿ ವಾಪಸಿ ವಿಮಾನಗಳನ್ನು ಶೀಘ್ರಗತಿಯಲ್ಲಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸುವುದಾಗಿ ಡಾ. ರೊನಾಲ್ಡ್ ಕೊಲಾಸೊ ಭರವಸೆ ನೀಡಿದರು. ಪ್ರವಾಸಿಗರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಈ ವೇಳೆ ಕನ್ನಡಿಗರ ಕೂಟ, ದುಬೈಯ ಅಧ್ಯಕ್ಷ ಅರುಣ್ ಕುಮಾರ್, ಸದನ್ ದಾಸ್(ಸಂಸ್ಥಾಪಕ ಮತ್ತು ಮುಖ್ಯ ಸಲಹೆಗಾರ), ಚೇತನ್ ಸುಬ್ರಹ್ಮಣ್ಯ(ಪ್ರಧಾನ ಕಾರ್ಯದರ್ಶಿ), ಮಂಜುನಾಥ್ ರಾಜನ್(ಸಲಹೆಗಾರ), ದೀಪಕ್ ಸೋಮಶೇಖರ್(ಸಲಹೆಗಾರ), ಭಾರ್ಗವ್ ಶರ್ಮಾ(ಸಲಹೆಗಾರ), ಮಾಧವ್ ಕಿರಣ್(ದುಬೈನಲ್ಲಿ ಅನೇಕ ಪ್ರವಾಸಿಗರಿಗೆ ನೆರವಾದ ಉದ್ಯಮಿ) ಹಾಜರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News