ಕುತ್ತಿಗೆ- ಕಂಕುಳದಲ್ಲಿ ಕಪ್ಪು ಕಲೆಯೆ? ತಕ್ಷಣವೇ ಆರೋಗ್ಯ ಪರೀಕ್ಷೆ ಅಗತ್ಯ!
Photo source: X/@drsunita02
ಇತ್ತೀಚೆಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ಅಕಾಂಥೊಸಿಸ್ ನೈಗ್ರಿಕನ್ಸ್ ಎನ್ನುವ ರೋಗವೊಂದರೆ ಬಗ್ಗೆ ಚರ್ಚಿಸುತ್ತಿದ್ದಾರೆ. ಏನಿದು ಅಕಾಂಥೊಸಿಸ್ ನೈಗ್ರಿಕನ್ಸ್.
ಹೈದರಾಬಾದ್ ನ ವೈದ್ಯರಾಗಿರುವ ಮಧುಮೇಹಿ/ಬೊಜ್ಜು/ಕರುಳು ಸಂಬಂಧಿತ ಲೈಂಗಿಕ ಆರೋಗ್ಯದ ತಜ್ಞರಾಗಿರುವ ಸುನೀತಾ ಸಯಮ್ಮಗಾರು ಇತ್ತೀಚೆಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಚರ್ಮದ ಮಡಿಕೆಗಳಲ್ಲಿ ಅಂದರೆ, ಕುತ್ತಿಗೆ, ಕಂಕುಳ, ತೊಡೆಸಂದು, ಒಳ ತೊಡೆಗಳು ಮತ್ತು ಸ್ತನಗಳ ಕೆಳಗೆ, ಹೊಟ್ಟೆಯ ಮೇಲೆ ಚರ್ಮ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುವುದರ ಬಗ್ಗೆ ಚರ್ಚಿಸಿದ್ದಾರೆ.
ಏನಿದು ಅಕಾಂಥೊಸಿಸ್ ನೈಗ್ರಿಕನ್ಸ್?
ಅಕಾಂಥೊಸಿಸ್ ನೈಗ್ರಿಕನ್ಸ್ ಎಂದು ಹೇಳಲಾಗುವ ಈ ಸಮಸ್ಯೆಯನ್ನು ಮೆಟ್ರೋದಲ್ಲಿ ಪ್ರಯಾಣಿಸುವಾಗ ಶೇ 50ರಷ್ಟು ಮಂದಿಗೆ ಇದ್ದುದನ್ನು ನೋಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. “ನನಗೆ ಕುತ್ತಿಗೆ ಮಾತ್ರ ಕಾಣಿಸುತ್ತದೆ. ಹೀಗಾಗಿ ಕುತ್ತಿಗೆಯ ಕಲೆಗಳ ಬಗ್ಗೆ ಹೇಳುತ್ತಿದ್ದೇನೆ. ಕೆಲವರಿಗೆ ಮಂದವಾದ ಮತ್ತು ಇನ್ನು ಕೆಲವರಿಗೆ ಕಡು ಕಪ್ಪಾದ ಕಲೆಗಳು ಇರುತ್ತವೆ. ಯುವಕರು, ಹಿರಿಯರು, ಮಹಿಳೆಯರು, ಪುರುಷರು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಎಲ್ಲರಲ್ಲೂ ಈ ಸಮಸ್ಯೆ ಗುರುತಿಸಿದ್ದೇನೆ. ಹೆಚ್ಚು ಬೊಜ್ಜಿಲ್ಲದ ವ್ಯಕ್ತಿಗಳಲ್ಲೂ ಕಂಡಿದ್ದೇನೆ. ಅವರನ್ನು ಮುಂಭಾಗದಿಂದ ನೋಡಿದಾಗ ಹೊಟ್ಟೆ ಉಬ್ಬರಿಸಿರುತ್ತದೆ. ಹೀಗಾಗಿ ಖಂಡಿತಾ ಇದು ಅಕಾಂಥೊಸಿಸ್ ನೈಗ್ರಿಕನ್ಸ್ ಎನ್ನುವುದು ಖಚಿತವಾಗುತ್ತದೆ” ಎಂದು ಅವರು ಹೇಳಿದ್ದಾರೆ. ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ.
“ಸಂಸ್ಕರಿತ ಆಹಾರವನ್ನು ತೊರೆಯಿರಿ, ಕೊಬ್ಬು ನಿವಾರಿಸಿ, ಪ್ರೊಟೀನ್ ಸೇವನೆ ಹೆಚ್ಚಿಸಿ, ತೂಕ ಇಳಿಸಿ. ಸಾಕಷ್ಟು ಚಲನೆ ಇರಲಿ, ನಿದ್ರೆ ಚೆನ್ನಾಗಿ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ” ಎಂದು ಅವರು ಹೇಳಿದ್ದಾರೆ.
ಮಾರಕ ರೋಗಗಳಿಗೆ ಚಿಹ್ನೆಯಾಗಿರಬಹುದು?
ಸುನೀತಾ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಡಾ. ಪ್ರಿಯಂ ಬೊಡ್ಡೊಲೊಯಿ, “ಕುತ್ತಿಗೆ ಸುಳ್ಳು ಹೇಳುವುದಿಲ್ಲ. ಹೀಗೆ ಕಂದು ಬಣ್ಣದ ಕಲೆಗಳು ಇದ್ದರೆ ಚಯಾಪಚಯ ಕ್ರಿಯೆ ಸಮಸ್ಯೆಯಲ್ಲಿದೆ ಎಂದು ಅರ್ಥಮಾಡಿಕೊಳ್ಳಬೇಕು. ಇಂಟರ್ನಲ್ ಮೆಡಿಸಿನ್ ನಲ್ಲಿ ನಾವು ಚಿಕಿತ್ಸೆ ನೀಡುವ ಅನೇಕ ಮಾರಕ ರೋಗಗಳಿಗೆ ಇದು ಚಿಹ್ನೆಯಾಗಿರುತ್ತದೆ. ಇಂತಹ ಕಲೆಗಳನ್ನು ಅಲಕ್ಷಿಸಬಾರದು. ಅದು ಇನ್ಸುಲಿನ್ ರೆಸಿಸ್ಟನ್ಸ್: ಟೈಪ್ 2 ಮಧುಮೇಹ, ಮೆಲಿಟಸ್, ಬೊಜ್ಜು, ಮೆಟಬಾಲಿಕ್ ಸಿಂಡ್ರೋಮ್ ಸೂಚಕವಾಗಬಹುದು.
ಅಲ್ಲದೆ, ಯುವತಿಯರಲ್ಲಿ ಪಿಸಿಒಎಸ್ ನ ಮೊದಲ ಸೂಚನೆಯಾಗಿರಬಹುದು. ಎಂಡೋಕ್ರೈನ್ ಸಮಸ್ಯೆಯಾಗಿದ್ದು, ಅಕ್ರೊಮೆಗಲಿ, ಹೈಪೊಥೈರಾಯ್ಡಿಸಮ್ನ ಸೂಚನೆಯಾಗಿರಬಹುದು ಎಂದು ಬರೆದುಕೊಂಡಿದ್ದಾರೆ. “ಗಡ್ಡೆಗಳ ಆರಂಭದ ಸೂಚನೆಯಾಗಬಹುದು. ಹಠಾತ್ ಆಗಿ ಕಾಣಿಸಿಕೊಂಡರೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ನ ಚಿಹ್ನೆಯೂ ಆಗಿರಬಹುದು. ಕೆಲವೊಮ್ಮೆ ಔಷಧಿಯಿಂದಲೂ ಬರುತ್ತದೆ. ಸ್ಟೆರಾಯ್ಡ್ಗಳು, ಒಸಿಪಿಗಳು ಅಥವಾ ಹೈ-ಡೋಸ್ ನಿಯಾಸಿನ್ ಸೇವನೆಯಿಂದಲೂ ಕಂಡುಬರಬಹುದು” ಎಂದು ವಿವರಿಸಿದ್ದಾರೆ.
ಈ ಕಲೆಗಳನ್ನು ಅಲಕ್ಷಿಸಲು ಹೋಗಬೇಡಿ ರೋಗಪರಿಶೀಲನೆ ಮಾಡಿಸಿಕೊಳ್ಳಿ. ಕುತ್ತಿಗೆ ಸುಳ್ಳು ಹೇಳುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಸೌಂದರ್ಯ ಸಮಸ್ಯೆಯೆಂದು ಅಲಕ್ಷಿಸಬೇಡಿ:
ಸುನೀತಾ ಅವರ ಪೋಸ್ಟ್ ಗೆ ಉತ್ತರಿಸಿರುವ ಕೊಲ್ಲಾಪುರದ ಹೋಮಿಯೋಪತಿ ವೈದ್ಯರಾಗಿರುವ ಡಾ. ಸಯಾಜಿರಾವ್ ಗಾಯಕ್ವಾಡ್ ಅವರೂ ಇದು ಕುತ್ತಿಗೆ ಕೊಳಕಾಗಿರುವುದಲ್ಲ, ಇನ್ಸುಲಿನ್ ರೆಸಿಸ್ಟನ್ಸ್ ಅಕಾಂಥೊಸಿಸ್ ನೈಗ್ರಿಕನ್ಸ್ ಎಂದು ಹೇಳಿದ್ದಾರೆ. ಅವರು ಮುಂದುವರಿದು, “ಹೀಗೆ ಕಂಕುಳ, ಕುತ್ತಿಗೆಯ ಸುತ್ತ ಇರುವ ಕಂದು- ಕಪ್ಪು ಕಲೆಗಳು ಸ್ಪಷ್ಟವಾಗಿ ಇನ್ಸುಲಿನ್ ರೆಸಿಸ್ಟನ್ಸ್ ಚಿಹ್ನೆಯಾಗಿದೆ. ಇನ್ಸುಲಿನ್ ರೆಸಿಸ್ಟ್ ಎಂದರೆ ದೇಹ ಇನ್ನಷ್ಟು ಇನ್ಸುಲಿನ್ ಉತ್ಪಾದಿಸುವುದಾಗಿರುತ್ತದೆ. ಹೀಗೆ ಹೆಚ್ಚುವರಿ ಇನ್ಸುಲಿನ್ ಚರ್ಮದ ಕೋಶಗಳು ಮತ್ತು ದಪ್ಪನಾದ ವರ್ಣದ್ರವ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.
ಸಯಾಜಿರಾವ್ ಅವರ ಪ್ರಕಾರ, ಇದು ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಮಧುಮೇಹದ ಪೂರ್ವದ ಚಿಹ್ನೆಯಾಗಿರಬಹುದು. ಟೈಪ್ 2 ಮಧುಮೇಹ, ಪಿಸಿಒಎಸ್, ಕೊಬ್ಬಿದ ಲಿವರ್ ಮತ್ತು ಚಯಾಪಚಯ ಸಿಂಡ್ರೋಮ್ನ ಸಂಕೇತವಾಗಿರಬಹುದು.
ಪರಿಹಾರವೆಂದರೆ ಜೀವನಶೈಲಿಯನ್ನು ಬದಲಿಸಿಕೊಂಡು ಇನ್ಸುಲಿನ್ ಕಡಿಮೆ ಮಾಡಬೇಕಾಗುತ್ತದೆ. ಮೊದಲನೆಯದಾಗಿ ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕು. ಪ್ರೊಟೀನ್ ಸೇವನೆ, ಆರೋಗ್ಯಕರ ಕೊಬ್ಬು ಸೇವಿಸಬೇಕು. ತೂಕ ಇಳಿಸಬೇಕು. ನಿದ್ರೆ ಸರಿಯಾಗಿ ಮಾಡಬೇಕು. ಕಪ್ಪು ಕುತ್ತಿಗೆ ಚಯಾಪಚಯ ಕ್ರಿಯೆಯ ಎಚ್ಚರಿಕೆಯ ಗುರುತು ಎಂದು ವೈದ್ಯರು ಹೇಳಿದ್ದಾರೆ.
ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿಯಿಂದ ಬರೆಯಲಾಗಿದೆ. ಯಾವುದೇ ದೈಹಿಕ ಬದಲಾವಣೆಗಳಿಗೆ ಮೊದಲು ವೈದ್ಯರನ್ನು ಸಂಪರ್ಕಿಸಿ.