×
Ad

ಅತಿಯಾದ ವ್ಯಾಯಾಮ ದೇಹಕ್ಕೆ ಅಪಾಯಕಾರಿ ಎನ್ನುವುದು ನಿಮಗೆ ಗೊತ್ತೆ?

Update: 2026-01-05 19:24 IST

ಸಾಂದರ್ಭಿಕ ಚಿತ್ರ | Photo Credit : freepik

ಅತಿಯಾದ ವ್ಯಾಯಾಮದಿಂದ ದೇಹವನ್ನು ಅಪಾಯಕ್ಕೆ ದೂಡುತ್ತಿದ್ದೀರಿ ಎನ್ನುವುದನ್ನು ನೀವು ಅರಿತುಕೊಳ್ಳುವ ಅಗತ್ಯವಿದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ. ಆದರೆ ಕಸರತ್ತುಗಳು ಅತಿಯಾದಾಗ ಸಾಕಷ್ಟು ಚೇತರಿಕೆ ಕಾಣದೆ ಇದ್ದರೆ ಅವು ಆರೋಗ್ಯ ಲಾಭದ ಬದಲು ಆರೋಗ್ಯ ಹದಗೆಡಿಸಬಹುದು. ಕ್ಯಾಲಿಫೋರ್ನಿಯ ಮತ್ತು ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಪ್ರಕಾರ ನೋವಿನ ನಡುವೆಯೂ ಕಸರತ್ತು ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುವುದು ಸುಳ್ಳು. ವಿಶ್ರಾಂತಿ ಇಲ್ಲದೆ ಅತಿಯಾಗಿ ವ್ಯಾಯಾಮ ಮಾಡುವುದು ದೇಹದ ಮೇಲೆ ಒತ್ತಡ ಹೇರುತ್ತದೆ. ಹೀಗಾಗಿ ಫಿಟ್ನೆಸ್ ಸುಧಾರಿಸುವ ಬದಲಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ.

► ಅತಿಯಾದ ತರಬೇತಿಯೆಂದು ತಿಳಿಯುವುದು ಹೇಗೆ?

ದೇಹಕ್ಕೆ ಚೇತರಿಕೆಗೆ ಅವಕಾಶ ಕೊಡದೆಯೇ ಪದೇಪದೆ ದೈಹಿಕ ಒತ್ತಡವನ್ನು ಹಾಕುವುದನ್ನೇ ಅತಿಯಾದ ತರಬೇತಿ ಎಂದು ಹೇಳಲಾಗುತ್ತದೆ. ಜನರು ವ್ಯಾಯಾಮದ ತೀವ್ರತೆ, ಅವಧಿ ಅಥವಾ ಕಾಲವನ್ನು ಬೇಗನೇ ಏರಿಸುವುದರಿಂದ ಈ ಸಮಸ್ಯೆ ಬರುತ್ತದೆ. ಧನಾತ್ಮಕವಾಗಿ ಹೊಂದಿಕೊಳ್ಳುವ ಬದಲಾಗಿ ದೇಹಕ್ಕೆ ಸುಸ್ತು, ಆಯಾಸವಾಗಿ ದೈಹಿಕ ನೋವು ಕಾಣಿಸಿಕೊಳ್ಳುತ್ತದೆ. ಚೇತರಿಕೆಗೆ ಕಾಲಾವಕಾಶ ಕೊಡಬೇಕು. ಏಕೆಂದರೆ ಸ್ನಾಯುಗಳು, ಕೀಲುಗಳು ಮತ್ತು ದೇಹದ ಆಂತರಿಕ ವ್ಯವಸ್ಥೆಗೆ ರಿಪೇರಿ ಮತ್ತು ಬಲಿಷ್ಠವಾಗಲು ಸಮಯದ ಅಗತ್ಯವಿರುತ್ತದೆ.

► ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು

ಸಾಕಷ್ಟು ವಿಶ್ರಾಂತಿ ಇಲ್ಲದೆ ಅತಿಯಾಗಿ ವ್ಯಾಯಾಮದ ತರಬೇತಿಯಿಂದ ದೇಹದ ಹಾರ್ಮೋನ್ ಸಮತೋಲನಕ್ಕೆ ಸಮಸ್ಯೆ ಒಡ್ಡಬಹುದು. ಅತಿಯಾದ ವ್ಯಾಯಾಮದಿಂದ ಕಾರ್ಟಿಸಾಲ್ನಂತಹ ಒತ್ತಡದ ಹಾರ್ಮೋನ್ ವಿಸ್ತರಣೆಗೊಳ್ಳಬಹುದು. ಇದರಿಂದ ಸ್ನಾಯು ಬೆಳವಣಿಗೆ ಮತ್ತು ಚೇತರಿಕೆಗೆ ಹಾರ್ಮೋನ್ಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಟೆಸ್ಟೊಸ್ಟರಾನ್ ಮತ್ತು ಬೆಳವಣಿಗೆಯ ಹಾರ್ಮೋನ್ ಕೂಡ ಕುಂಠಿತವಾಗಬಹುದು. ಈ ಅಸಮತೋಲನದಿಂದ ಚಯಾಪಚಯ ಕ್ರಿಯೆಗಳು ನಿಧಾನಗೊಳ್ಳುತ್ತವೆ. ಸ್ನಾಯು ರಿಪೇರಿಗೆ ಸಾಧ್ಯವಾಗುವುದಿಲ್ಲ. ದೇಹವೂ ಆಯಾಸ ಮತ್ತು ವಿಶ್ರಾಂತಿಯ ಕೊರತೆ ಎದುರಿಸುತ್ತದೆ.

► ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತದೆ

ದೇಹದ ಮೇಲೆ ನಿರಂತರವಾಗಿ ವ್ಯಾಯಾಮದಿಂದ ಒತ್ತಡ ಹೇರಿದರೆ ಸೋಂಕುಗಳ ವಿರುದ್ಧ ಹೋರಾಡಲು ಸಾಕಷ್ಟು ಸಂಪನ್ಮೂಲ ಲಭ್ಯವಿರುವುದಿಲ್ಲ. ಫಲಿತಾಂಶವಾಗಿ ಅತಿಯಾಗಿ ವ್ಯಾಯಾಮ ಮಾಡುವವರಿಗೆ ಬೇಗನೇ ಅನಾರೋಗ್ಯ ಕಾಡಬಹುದು. ರೋಗದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಬಹುದು. ಸದಾ ಆಯಾಸದ ಅನುಭವವಿರಬಹುದು. ಆರೋಗ್ಯ ಹೆಚ್ಚಿಸುವ ಬದಲಾಗಿ ಅತಿಯಾದ ವ್ಯಾಯಾಮದಿಂದ ದೇಹ ಬಳಲಬಹುದು.

► ಮಾನಸಿಕ ಆರೋಗ್ಯ ಕಡಿಮೆಯಾಗಬಹುದು

ಅಥ್ಲೆಟಿಕ್ ಕಾರ್ಯವೈಖರಿಯನ್ನು ಸುಧಾರಿಸುವ ಬದಲಾಗಿ ಅತಿಯಾದ ವ್ಯಾಯಾಮದಿಂದ ಸಾಮರ್ಥ್ಯ ಕುಸಿಯಬಹುದು. ದೇಹ ಅತಿಯಾದ ಒತ್ತಡದ ಸ್ಥಿತಿಯಲ್ಲಿದ್ದರೆ ಸುಸ್ತು, ನಿದ್ರಾರಾಹಿತ್ಯ, ಕಿರಿಕಿರಿ, ಖಿನ್ನತೆ ಮತ್ತು ಮನೋಸ್ಥಿತಿ ಕುಂದುವ ಸಾಮಾನ್ಯ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಬಹಳಷ್ಟು ಮಂದಿಯಲ್ಲಿ ಸಾಮರ್ಥ್ಯ, ಸಹಿಷ್ಣುತೆ ಮತ್ತು ಪ್ರೇರಣೆ ಕುಸಿಯಬಹುದು. ಈ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳು ನಿಮಗೆ ತುರ್ತು ವಿಶ್ರಾಂತಿಯ ಅಗತ್ಯವನ್ನು ಸೂಚಿಸುತ್ತವೆ.

► ಸ್ನಾಯು ಸಂಕೋಚನದ ಅಪಾಯ

ಅತಿಯಾದ ವ್ಯಾಯಾಮದ ಒಂದು ಅಪಾಯಕಾರಿ ಪರಿಣಾಮವೆಂದರೆ ಸ್ನಾಯು ಸಂಕೋಚನ ಅಥವಾ ರಾಬ್ಡೋಮಿಯೊಲಿಸಿಸ್! ಅಂದರೆ ಸ್ನಾಯುಗಳು ಕೈಕೊಡುವುದು. ಸ್ನಾಯು ಅಂಗಾಂಶಗಳು ತ್ವರಿತವಾಗಿ ಬ್ರೇಕ್ಡೌನ್ ಆದಾಗ ಅವು ಮಿಯೊಗ್ಲೊಬಿನ್ ಎನ್ನುವ ಪ್ರೊಟೀನ್ ಅನ್ನು ರಕ್ತದ ಹರಿವಿಗೆ ಬಿಡುತ್ತದೆ. ಅದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗಬಹುದು. ಈ ರೋಗದ ಲಕ್ಷಣಗಳಲ್ಲಿ ಅತಿಯಾದ ಸ್ನಾಯು ನೋವು, ಊತ, ದೌರ್ಬಲ್ಯ ಮತ್ತು ಕಪ್ಪು ಬಣ್ಣದಲ್ಲಿ ಮೂತ್ರ ಹೋಗುವುದು ಇತ್ಯಾದಿ ಕಾಣಬಹುದು. ತೀವ್ರ ಪ್ರಕರಣಗಳಲ್ಲಿ ಕಿಡ್ನಿ ವೈಫಲ್ಯವೂ ಸಂಭವಿಸಬಹುದು ಮತ್ತು ತಕ್ಷಣವೇ ವೈದ್ಯಕೀಯ ಪರಿಹಾರ ಕಾಣಬೇಕಾಗುತ್ತದೆ.

► ಚೇತರಿಕೆಗೆ ಏಕೆ ಗಮನ ಕೊಡಬೇಕು?

ವ್ಯಾಯಾಮದಲ್ಲಿ ಚೇತರಿಕೆ ಆಯ್ಕೆಯಲ್ಲ, ನಿರ್ಣಾಯಕ ಭಾಗವಾಗಿರಬೇಕು. ವಿಶ್ರಾಂತಿ ದಿನಗಳನ್ನು ಇಡುವುದು, ಸಾಕಷ್ಟು ನಿದ್ರೆ ಮಾಡುವುದು, ದೇಹದಲ್ಲಿ ತೇವಾಂಶ ಇರುವಂತೆ ಗಮನಿಸುವುದು ಮುಖ್ಯವಾಗುತ್ತದೆ. ಅಲ್ಲದೆ, ಗಾಯ ಅಥವಾ ದೀರ್ಘಕಾಲೀನ ಹಾನಿಯಾಗದಂತೆ ದೇಹಕ್ಕೆ ಸಾಕಷ್ಟು ಆಹಾರ ಒದಗಿಸಬೇಕು. ಸುಸ್ಥಿರವಾದ ಫಿಟ್ನೆಸ್ ನಲ್ಲಿ ಸಮತೋಲನವಿರುತ್ತದೆ. ಅತಿಯಾದ ವ್ಯಾಯಾಮವಲ್ಲ. ನಿಮ್ಮ ದೇಹದ ಅಗತ್ಯವನ್ನು ಅರಿತುಕೊಂಡು ಚೇತರಿಕೆಗೆ ಕಾಲಾವಕಾಶ ಕೊಡುತ್ತಾ ವ್ಯಾಯಾಮದತ್ತ ಗಮನಹರಿಸಬೇಕು. ದೇಹವನ್ನು ಅಪಾಯಕ್ಕೆ ದೂಡುವ ಬದಲಾಗಿ ಒಟ್ಟು ಆರೋಗ್ಯಕ್ಕೆ ನೆರವಾಗುವಂತೆ ವ್ಯಾಯಾಮ ಮಾಡುವುದು ಅತ್ಯಗತ್ಯ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News