ಮಕ್ಕಳಿಗೆ ನೀಡುವ ಪ್ರೊಟೀನ್ ಪಾನೀಯಗಳು ಆರೋಗ್ಯಕರವೆ?
ಸಾಂದರ್ಭಿಕ ಚಿತ್ರ | Photo Credit : freepik
‘ಆರೋಗ್ಯ ಪಾನೀಯಗಳು” ಅಥವಾ ‘ಪೋಷಕಾಂಶದ ಪೂರಕ ಆಹಾರ” ಎಂದು ಸಕ್ಕರೆ ಬದಲಾಗಿ ಬೆಲ್ಲವನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಡಾ ಶಿವರಂಜಿನಿ.
ಹೈದರಾಬಾದ್ ಮೂಲದ ಶಿಶುವೈದ್ಯೆಯಾಗಿರುವ ಡಾ ಶಿವರಂಜಿನಿ ಇದೀಗ ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಪ್ರೊಟೀನ್ ಪಾನೀಯಗಳನ್ನು ವೈದ್ಯರು ಪ್ರಾಯೋಜಿಸುತ್ತಿರುವ ವಿರುದ್ಧ ಹೊಸ ಸಮರ ಸಾರಿದ್ದಾರೆ. ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಡಿರುವ ಪೋಸ್ಟ್ ಬಹಳ ಚರ್ಚೆಗೆ ಗ್ರಾಸವಾಗಿದೆ.
ಡಾ ಶಿವರಂಜಿನಿ ಅವರು ಓರಲ್ ರಿಹೈಡ್ರೇಶನ್ ಸೊಲ್ಯುಷನ್ಸ್ ಎಂದು ತಪ್ಪಾಗಿ ಮಾರಾಟ ಮಾಡಲಾಗುತ್ತಿರುವ ಸಕ್ಕರೆ ಭರಿತ ಪಾನೀಯಗಳ ವಿರುದ್ಧ ದೀರ್ಘಕಾಲದ ಹೋರಾಟ ನಡೆಸಿ ಯಶಸ್ವಿಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರ ಹೋರಾಟದ ನಂತರ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ವಿಶ್ವ ಆರೋಗ್ಯ ಸಂಸ್ಥೆಯ (WHO) ಶಿಫಾರಸು ಮಾಡಿದ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರದ ಹೊರತು ಯಾವುದೇ ಆಹಾರ ಬ್ರಾಂಡ್ ತನ್ನ ಉತ್ಪನ್ನಗಳ ಮೇಲೆ ‘ಒಆರ್ಎಸ್’ ಎನ್ನುವ ಪದ ಬಳಸುವಂತಿಲ್ಲ ಎಂದು ಕಳೆದ ವರ್ಷ ಆದೇಶಿಸಿತ್ತು.
ಇದೀಗ ಡಾ ಶಿವರಂಜಿನಿ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತದ ಮಕ್ಕಳು ಮತ್ತೊಂದು ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಅವರು ಪೋಸ್ಟ್ ಮಾಡಿದ್ದು, “ಒಂದೆಡೆ ಮಕ್ಕಳ ವೈದ್ಯರು ಮತ್ತು ಪ್ರಭಾವಿಗಳು ಬೋರ್ನ್ವಿಟಾ, ಬೂಸ್ಟ್, ಹಾರ್ಲಿಕ್ಸ್ ಇತ್ಯಾದಿಗಳನ್ನು ಅನುಮೋದಿಸುತ್ತಿದ್ದರೆ, ಮತ್ತೊಂದೆಡೆ ಮಕ್ಕಳ ವೈದ್ಯರು ಮತ್ತು ಪ್ರಭಾವಿಗಳು ಹಾಲಿನ ಮಿಶ್ರಣಗಳಿರುವ ಬೆಲ್ಲವನ್ನು ಸಕ್ಕರೆ ಮುಕ್ತ ಎಂದು ಅನುಮೋದಿಸುತ್ತಿದ್ದಾರೆ” ಎಂದು ಶಿಶು ವೈದ್ಯರ ಮೇಲೆ ಹರಿಹಾಯ್ದಿದ್ದಾರೆ.
“ಈ ಹಿಂದೆ “ಸಕ್ಕರೆ ಸೇರಿಸಲಾಗಿದೆ” ಎಂದು ಬರೆದಿದ್ದರೆ ಅದನ್ನು ಮಕ್ಕಳಿಗೆ ಬಳಸಲೇ ಬಾರದು ಎನ್ನುವ ನಿಯಮವಿತ್ತು. ಇದೀಗ ಕಂಪನಿಗಳು ಲೇಬಲಿಂಗ್ ಅನ್ನು ಸುಧಾರಿಸಿದ್ದಾರೆ. ಬೆಲ್ಲದ ಪ್ರಮಾಣವನ್ನು “ಸಂಸ್ಕರಿಸಲಾಗದ ಸಕ್ಕರೆ/ ಸೇರಿಸಲಾದ ಸಕ್ಕರೆ”ಯ ಬದಲಾಗಿ ಬಳಸಲಾಗುತ್ತಿದೆ. ಇದನ್ನು ದೊಡ್ಡ ಬದಲಾವಣೆ ಎನ್ನುವಂತೆ ತೋರಿಸಲಾಗುತ್ತಿದೆ. ಬೆಲ್ಲ ಮತ್ತು ಸಕ್ಕರೆ ಎರಡೂ ಸುಕ್ರೋಸ್ (ಸಕ್ಕರೆ)! ಶಿಶು ವೈದ್ಯರು ಮತ್ತು ಇತರ ವೈದ್ಯರು ಹಾಲಿನ ಮಿಶ್ರಣದ ಮತ್ತು ಫಾರ್ಮುಲಾ ಹಾಲಿನ ವ್ಯಾಪಾರಿಗಳಾಗಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಕೆಲವು ಮೂಲಭೂತ ನೀತಿಗಳನ್ನು ಗೌರವಿಸಬೇಕು” ಎಂದು ಅವರು ಬರೆದುಕೊಂಡಿದ್ದಾರೆ.
ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಡಾ ಸಂಜೀವಿನ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. “ಆರೋಗ್ಯ ಪಾನೀಯಗಳು” ಅಥವಾ ‘ಪೋಷಕಾಂಶದ ಪೂರಕ ಆಹಾರ” ಎಂದು ಮಾರಾಟ ಮಾಡುವವರ ವಿರುದ್ಧ ಸಮರ ಹೂಡಿರುವ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಸಂಜೀವಿನ ಅವರ ಪೋಸ್ಟ್ಗೆ ಉತ್ತರಿಸಿರುವ ವೈದ್ಯರಾದ ರೇಖಾ ರೆಡ್ಡಿ, “ನಿಜ! ನ್ಯಾಚುರಲ್ ಜ್ಯಾಗರಿ/ಸಕ್ಕರೆ ಹೇಳಿಕೆಗಳು ಎಲ್ಲೆಡೆ ಕೇಳಿಬರುತ್ತಿದೆ. FSSAI ಕೂಡ ಉತ್ತಮ ಲೇಬಲಿಂಗ್ ಮಾಡಿ ಬೆಲ್ಲವನ್ನು ಪ್ರೋತ್ಸಾಹಿಸುತ್ತಿದೆ. ಎಐ ಬಾರ್ಕೋಡ್ ಸ್ಕ್ಯಾನರ್ನಂತಹ ಸಾಧನಗಳ (ಜಾಗತಿಕವಾಗಿ ಯುಕಾ ಇರುವ ರೀತಿಯಲ್ಲಿ ಭಾರತದಲ್ಲಿಯೂ ಸತ್ಯಾಂಶ ಸ್ಕ್ಯಾನ್ ಮಾಡುವ ಅವಕಾಶ) ಅಗತ್ಯವಿದೆ. ವಸ್ತುಗಳನ್ನು ಕೈಗೆ ಹಿಡಿದ ತಕ್ಷಣ ಅದರಲ್ಲಿರುವ ಅಂಶಗಳು ಮತ್ತು ರಹಸ್ಯವಾಗಿ ಸೇರಿಸಿರುವ ಸಕ್ಕರೆಗಳನ್ನು ಪತ್ತೆ ಮಾಡುವ ಅವಕಾಶವಿರಬೇಕು. ಇದರಿಂದ ಮಕ್ಕಳನ್ನು ರಕ್ಷಿಸಬಹುದು” ಎಂದು ಅವರು ಹೇಳಿದ್ದಾರೆ.