×
Ad

ಇಸಬ್ಗೋಲ್ ಜೀರ್ಣಕ್ರಿಯೆಗೆ ಉತ್ತಮವೆ? ಅದನ್ನು ಹೇಗೆ ಬಳಸಬೇಕು?

Update: 2026-01-09 16:12 IST

ಸಾಂದರ್ಭಿಕ ಚಿತ್ರ (AI)

ಸಾಕಷ್ಟು ನೀರು ಬೆರೆಸದೆ ಇಸಬ್ಗೋಲ್ ಸೇವಿಸಿದರೆ ಬೇಗನೇ ವಿಸ್ತರಿಸಿಕೊಂಡು ಕರುಳಿನ ಚಲನೆಯನ್ನು ನಿಧಾನಗೊಳಿಸಬಹುದು. ಹೀಗಾಗಿ ಮಲಬದ್ಧತೆ ಸರಿಯಾಗುವ ಬದಲು ಹದಗೆಡಬಹುದು.

ದೇಹಕ್ಕೆ ತಂಪು ಎನ್ನುವ ಕಾರಣಕ್ಕೆ ನಿತ್ಯ ಇಸಬ್ಗೋಲ್ ಅಥವಾ ಸಿಲಿಯಂ ಹಸ್ಕ್ ಸೇವಿಸುತ್ತಾರೆ. ಆದರೆ ಸಾಕಷ್ಟು ನೀರು ಕುಡಿಯದೆ ಇಸಬ್ಗೋಲ್ ಸೇವಿಸುವುದು ಅಪಾಯಕಾರಿ ಎನ್ನುತ್ತಾರೆ ಡಾ ಸೌರಬ್ ಸೇಥಿ. ಸಾಮಾಜಿಕ ಜಾಲತಾಣ ‘ಇನ್ಸ್ಟಾಗ್ರಾಂ’ನಲ್ಲಿ ಅವರು ಈ ಸಂಬಂಧ ಒಂದು ಪೋಸ್ಟ್ ಹಾಕಿದ್ದಾರೆ.

“ಇಸಬ್ಗೋಲ್ ನೀರನ್ನು ಹೀರಿಕೊಂಡು ಮೃದುವಾದ ಜೆಲ್ ರೂಪಿಸಿಕೊಂಡು ಮಲವನ್ನು ನಿಧಾನವಾಗಿ ಕರುಳಿನ ಮೂಲಕ ಚಲಿಸುವಂತೆ ಮಾಡುತ್ತದೆ. ಸಾಕಷ್ಟು ನೀರು ಬೆರೆಸದೆ ಸೇವಿಸಿದರೆ ಬೇಗನೇ ವಿಸ್ತರಿಸಿಕೊಂಡು ಕರುಳಿನ ಚಲನೆಯನ್ನು ನಿಧಾನಗೊಳಿಸಬಹುದು. ಹೀಗಾಗಿ ಮಲಬದ್ಧತೆ ಸರಿಯಾಗುವ ಬದಲು ಹದಗೆಡಬಹುದು. ಒಂದು ಗ್ಲಾಸ್ ಪೂರ್ಣ ನೀರಿನ ಜೊತೆಗೆ ಇಸಬ್ಗೋಲ್ ಸೇವಿಸಿದ ನಂತರ ಮತ್ತೊಂದು ಗ್ಲಾಸ್ ನೀರು ಕುಡಿಯಬೇಕು. ಎಂದಿಗೂ ಒಣ ಇಸಬ್ಗೋಲ್ ಅಥವಾ ಔಷಧಿ ನುಂಗುವ ರೀತಿ ಸ್ವಲ್ಪ ನೀರಿನಲ್ಲಿ ಸೇವಿಸಬೇಡಿ. ಮಲಗುವ ಮುನ್ನ ಸೇವಿಸಬೇಡಿ” ಎಂದು ಸೌರಬ್ ಹೇಳಿದ್ದಾರೆ.


ಏನಿದು ಇಸಬ್ಗೋಲ್ ಮತ್ತು ಏಕೆ ಸೇವಿಸಲಾಗುತ್ತದೆ?

ಇಸಬ್ಗೋಲ್ ಭಾರತದ ಬಹುತೇಕ ಮನೆಯ ಅಡುಗೆ ಕೋಣೆಗಳಲ್ಲಿ ಇರುತ್ತದೆ. ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿ ಔಷಧಿಯಾಗಿ ಇದನ್ನು ಸೇವಿಸಲಾಗುತ್ತದೆ. ಅಲ್ಪ ಪ್ರಮಾಣದಲ್ಲಿ ನೀರು ಬೆರೆಸಿ ಸೇವಿಸಲಾಗುತ್ತಿದೆ. ಇತ್ತೀಚೆಗೆ ಫೈಬರ್ ಸೇವನೆ ವಿಚಾರದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹಾಗಿದ್ದರೆ ಇಸಬ್ಗೋಲ್ ಎಂದರೇನು?

ಇಸಬ್ಗೋಲ್ ಎನ್ನುವುದು ಪ್ಲಾಂಟಗೊ ಒವಾಟ ಸಸ್ಯದ ಬೀಜಗಳಿಂದ ಪಡೆದ ಸಿಪ್ಪೆಯಾಗಿದೆ. ಭಾರತದಲ್ಲಿ ಇದನ್ನು ಹೆಚ್ಚು ಬೆಳೆಯಲಾಗುತ್ತದೆ. ಸಸ್ಯ ಬೆಳೆದಾಗ ಸಣ್ಣ ಬೀಜ ಉತ್ಪತ್ತಿಯಾಗುತ್ತದೆ. ಅವುಗಳನ್ನು ಸಂಸ್ಕರಿಸಿ ಹೊರಪದರವನ್ನು ಬೇರ್ಪಡಿಸಲಾಗುತ್ತದೆ. ನಂತರ ಹೊಟ್ಟನ್ನು ಇಸಬ್ಗೋಲ್ ಆಗಿ ಮಾರಲಾಗುತ್ತದೆ. ಬೀಜ ಮಾತ್ರ ಸೇವಿಸಬಹುದಾದರೂ ಹೊಟ್ಟು ಹೆಚ್ಚು ಫೈಬರ್ ಅಂಶ ಹೊಂದಿರುವ ಕಾರಣ ಅದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಇಸಬ್ಗೋಲ್ ನಲ್ಲಿರುವ ಪೋಷಕಾಂಶಗಳೇನು?

ಇಸಬ್ಗೋಲ್ ಸಂಪೂರ್ಣವಾಗಿ ಆಹಾರದ ಫೈಬರ್ ಅಂಶಗಳು, ಮುಖ್ಯವಾಗಿ ಕರಗುವ ಫೈಬರ್ ಆಗಿರುತ್ತದೆ. ಅದರಲ್ಲಿ ಕ್ಯಾಲರಿ, ಕೊಬ್ಬು, ಸಕ್ಕರೆ ಅಥವಾ ಪ್ರೊಟೀನ್ ಕಡಿಮೆ ಇರುತ್ತದೆ. ಇದು ವಿಟಮಿನ್ಗಳೂ, ಮಿನರಲ್ಗಳು ಅಥವಾ ಆಂಟಿಆಕ್ಸಿಡಂಟ್ಗಳನ್ನು ಹೆಚ್ಚು ಒದಗಿಸುವುದಿಲ್ಲ. ಹೀಗಾಗಿ ಇದನ್ನು ಪೌಷ್ಠಿಕ ಆಹಾರ ಎಂದು ಪರಿಗಣಿಸಲಾಗಿಲ್ಲ. ಆದರೆ ಜೀರ್ಣಕ್ರಿಯೆಗೆ ನೆರವಾಗುವ ಕಾರಣ ಇದನ್ನು ಹೆಚ್ಚು ಬಳಸಲಾಗುತ್ತದೆ.

ಇಸಬ್ಗೋಲ್ ನ ಆರೋಗ್ಯ ಲಾಭಗಳೇನು?

ಒಟ್ಟು ಆಹಾರದ ಭಾಗವಾಗಿ ಸೇವಿಸಿದಾಗ ಮಲದ ಪ್ರಮಾಣ ಮತ್ತು ತೇವಾಂಶ ಏರಿಸುವ ಮೂಲಕ ಇಸಬ್ಗೋಲ್ ನಿಯಮಿತವಾಗಿ ಕರುಳಿನ ಚಲನೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದು ಜೆಲ್ ರೂಪಿಸುವುದರಿಂದಾಗಿ ಸಡಿಲವಾದ ಮಲಕ್ಕೆ ದೃಢತೆಯನ್ನು ನೀಡುವ ಜೊತೆಗೆ ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ಕರಗುವ ಫೈಬರ್ ಪಿತ್ತರಸದ ಆಮ್ಲಗಳನ್ನು ಬಂಧಿಸಬಹುದು ಇದರಿಂದ ಎಲ್ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಗೊಳಿಸಬಹುದು. ಕಾರ್ಬೋಹೈಡ್ರೇಟ್ಗಳನ್ನು ನಿಧಾನವಾಗಿ ಹೀರಿಕೊಳ್ಳುವುದರಿಂದ ಭೋಜನದ ನಂತರ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಿಂದ ಪಡೆಯಲಾಗಿದೆ ಮತ್ತು ವೈದ್ಯರ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತ ಯಾವುದೇ ಪ್ರಶ್ನೆಗೆ ಸದಾ ನಿಮ್ಮ ವೈದ್ಯರ ಸಲಹೆಯನ್ನೇ ಪಡೆಯಿರಿ.

ಕೃಪೆ: ndtv.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News