×
Ad

ಕಣ್ಣಿನ ಸುತ್ತ ಕಪ್ಪು ಕಲೆಗೆ ಲಿವರ್ ಪರೀಕ್ಷೆ ಮಾಡಿಸಿಕೊಳ್ಳಬೇಕೆ?

ಕಣ್ಣಿನ ಸುತ್ತ ಕಪ್ಪು ಕಲೆಗಳು ಏಕೆ ಬರುತ್ತವೆ?; ಇಲ್ಲಿದೆ ಮಾಹಿತಿ…

Update: 2026-01-06 16:57 IST

ಸಾಂದರ್ಭಿಕ ಚಿತ್ರ | Photo Credit : freepik

ಮದ್ಯಪಾನ, ನಿದ್ರಾರಾಹಿತ್ಯ ಮೊದಲಾದುವುಗಳಿಂದ ಲಿವರ್ ನಿಧಾನಗತಿಯಲ್ಲಿ ಕೆಲಸ ಮಾಡಬಹುದು. ಅದರಿಂದಾಗಿ ಚರ್ಮ ಮಸುಕಾಗಬಹುದು, ಆಯಾಸಗೊಂಡಂತೆ ಇರಬಹುದು. ಇದರಿಂದ ಕಣ್ಣಿನ ಕೆಳಗಿನ ಜಾಗ ಕಪ್ಪು ಬಣ್ಣಕ್ಕೆ ತಿರುಗಬಹುದು.

ಕಣ್ಣಿನ ಸುತ್ತ ಕಪ್ಪು ಕಲೆಗಳು ಏಕೆ ಬರುತ್ತವೆ? ಸುಸ್ತು ಅಥವಾ ಆಯಾಸದಿಂದ ಬಂದಿರುವ ಕಪ್ಪು ಕಲೆಗಳೇ ಅಥವಾ ಆಂತರಿಕ ಆರೋಗ್ಯದ ಎಚ್ಚರಿಕೆಯಾಗಿ ಕಪ್ಪು ಕಲೆಗಳು ಕಾಣಿಸಿಕೊಂಡಿವೆಯೇ ಎಂದು ತಿಳಿಯುವುದು ಹೇಗೆ? ನಿದ್ರಾ ರಾಹಿತ್ಯ, ಅತಿಯಾಗಿ ಮೊಬೈಲ್ ಪರದೆ ನೋಡುವುದು ಅಥವಾ ಆಯಾಸದಿಂದಲೂ ಕಪ್ಪು ಕಲೆಗಳು ಬರಬಹುದು. ಇದರ ಬದಲಾಗಿ ಅನೇಕ ಅನಗತ್ಯ ವರ್ಣದ್ರವ್ಯಗಳ ಕಾರಣದಿಂದಲೂ ಕಣ್ಣುಗಳ ಕೆಳಗೆ ಕಪ್ಪು ಕಲೆಗಳು ಬರಬಹುದು. ಲಿವರ್ (ಯಕೃತ್ತು) ಕಾರಣದಿಂದಲೂ ಕಪ್ಪು ಕಲೆಗಳು ಕಂಡುಬರಬಹುದು!

ಲಿವರ್ ಸಮಸ್ಯೆಯಿಂದ ಏಕೆ ಕಪ್ಪು ಕಲೆಗಳು ಬರುತ್ತವೆ?

ತಜ್ಞರು ಹೇಳುವ ಪ್ರಕಾರ ಲಿವರ್ ಒತ್ತಡದಲ್ಲಿದ್ದಾಗ ಅಥವಾ ಸರಿಯಾಗಿ ಕೆಲಸ ಮಾಡದೆ ಇದ್ದಾಗ ಅದರ ಪರಿಣಾಮ ಚರ್ಮದ ಮೇಲೆ ಕಂಡುಬರಬಹುದು. ವಿಷಗಳನ್ನು ದೇಹದಿಂದ ಹೊರಹಾಕುವುದು ಲಿವರ್ನ ಮುಖ್ಯ ಕೆಲಸವಾಗಿರುತ್ತದೆ. ಶಿಸ್ತಿನ ಆಹಾರ ಸೇವಿಸದೆ ಇದ್ದಾಗ, ಮದ್ಯಪಾನ, ನಿದ್ರಾರಾಹಿತ್ಯ ಮೊದಲಾದುವುಗಳಿಂದ ಲಿವರ್ ನಿಧಾನಗತಿಯಲ್ಲಿ ಕೆಲಸ ಮಾಡಬಹುದು. ಅದರಿಂದಾಗಿ ಚರ್ಮ ಮಸುಕಾಗಬಹುದು, ಆಯಾಸಗೊಂಡಂತೆ ಇರಬಹುದು. ಇದರಿಂದ ಕಣ್ಣಿನ ಕೆಳಗಿನ ಜಾಗ ಕಪ್ಪು ಬಣ್ಣಕ್ಕೆ ತಿರುಗಬಹುದು.

ಆದರೆ ಚರ್ಮ ತಜ್ಞರ ಪ್ರಕಾರ ಕಣ್ಣಿನ ಸುತ್ತ ಕಪ್ಪುಕಲೆಗಳಿಗೆ ಲಿವರ್ ಮಾತ್ರ ಕಾರಣವಲ್ಲ. ಅನುವಂಶಿಕ, ಸುಸ್ತು ಅಥವಾ ತೇವಾಂಶದ ಕೊರತೆಯ ಜೊತೆಗೆ ಆಂತರಿಕ ಕಾರಣಗಳು ಇರಬಹುದು.

ವ್ಯತ್ಯಾಸ ತಿಳಿಯುವುದ ಹೇಗೆ?

ಸರಳವಾಗಿ ತಿಳಿಸಲು ಸಾಧ್ಯವಾಗದು. ಒಟ್ಟಾರೆ ಮಸುಕಾಗಿರುವುದು, ಊದಿದಂತೆ ಇರುವುದು ಅಥವಾ ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದ್ದಲ್ಲಿ ಲಿವರ್ ಸಂಬಂಧಿತ ಕಪ್ಪುಕಲೆ ಎಂದು ತಿಳಿಯಬೇಕು. ಇದರ ಜೊತೆಯಲ್ಲಿಯೇ ಸುಸ್ತು, ಶಕ್ತಿಯ ಕೊರತೆ ಅಥವಾ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಕಂಡುಬರಬಹುದು. ಇತರ ಕಪ್ಪುಕಲೆಗಳನ್ನು ಉತ್ತಮ ನಿದ್ರೆಯಿಂದ, ದೇಹಕ್ಕೆ ಸಾಕಷ್ಟು ತೇವಾಂಶ ಒದಗಿಸುವುದು ಮತ್ತು ಕಪ್ಪು ಕಲೆ ಇದ್ದಲ್ಲಿ ಆರೈಕೆ ಮಾಡಿದರೆ ಗುಣವಾಗಬಹುದು.

ಕಪ್ಪುಕಲೆ ಕಂಡುಬರಲು ಕಾರಣವೇನು?

ತಜ್ಞರ ಪ್ರಕಾರ ಕಣ್ಣನ್ನು ತಿಕ್ಕುವುದು, ಸರಿಯಾಗಿ ನಿದ್ರೆ ಮಾಡದೆ ಇರುವುದು ಅಥವಾ ಅತ್ಯಧಿಕ ಪ್ರಮಾಣದಲ್ಲಿ ಫೋನ್ ಪರದೆಯನ್ನು ನೋಡುವುದು ಬಹಳ ಸಾಮಾನ್ಯವಾದ ಕಾರಣಗಳು. ಅನುವಂಶಿಕವಾಗಿಯೂ ಕಪ್ಪು ಕಲೆ ಹರಡಬಹುದು. ಕಣ್ಣಿನ ಅಡಿಯಲ್ಲಿರುವ ಚರ್ಮ ತೆಳುವಾಗಿರುತ್ತದೆ. ಹೀಗಾಗಿ ಅಡಿಯಲ್ಲಿರುವ ರಕ್ತನಾಳಗಳು ಮತ್ತು ವರ್ಣದ್ರವ್ಯ ನೀಟಾಗಿ ಕಣ್ಣಿಗೆ ಕಾಣಬಹುದು.

ದೇಹದಿಂದ ಜಲಾಂಶ ನಷ್ಟವಾಗುವುದು, ಹೀಮೋಗ್ಲೊಬಿನ್ ಮಟ್ಟ ಕಡಿಮೆ ಇರುವುದು, ಸೂರ್ಯನ ಕಿರಣಗಳು, ಅಲರ್ಜಿಗಳು ಮತ್ತು ಕಣ್ಣು ಆಳದಲ್ಲಿರುವುದು ಕೂಡ ಕಪ್ಪು ಕಲೆಗೆ ಕಾರಣವಾಗಬಹುದು. ವಯಸ್ಸಾದಂತೆ ಕಣ್ಣಿನ ಸುತ್ತಲಿನ ಕೊಲಾಜೆನ್ ಮತ್ತು ಕೊಬ್ಬು ಕಳೆದುಹೋಗುತ್ತದೆ. ಹೀಗಾಗಿ ಟೊಳ್ಳಾದಂತೆ ಕಂಡುಬರಬಹುದು. ಧೂಮಪಾನಿಗಳಲ್ಲಿ ಇದು ಹೆಚ್ಚು ಗಮನಾರ್ಹವಾಗಿ ಕಂಡುಬರಬಹುದು.

ಕಪ್ಪು ಕಲೆಗಳನ್ನು ತೊಡೆದು ಹಾಕುವುದು ಹೇಗೆ?

ಕಪ್ಪುಕಲೆಗಳಿಗೆ ಕಾರಣ ಅರ್ಥಮಾಡಿಕೊಂಡ ಮೇಲೆ ಅದನ್ನು ನೀಗಿಸಲು ಚಿಕಿತ್ಸೆ ನೀಡಲಾಗುತ್ತದೆ. ವರ್ಣದ್ರವ್ಯ ಸಂಬಂಧಿತ ಕಪ್ಪುಕಲೆಗಳಿಗೆ ವಿಟಮಿನ್ ಸಿ, ನಿಯಾಸಿನಮೈಡ್, ಕೊಜಿಕ್ ಆಮ್ಲವಿರುವ ಅಥವಾ ಕೆಫೈನ್ ಇರುವ ಕಣ್ಣಿನ ಕ್ರೀಮ್ಗಳನ್ನು ಬಳಸಬಹುದು. ಈ ಅಂಶಗಳು ಹೊಳಪು ನೀಡುವ ಜೊತೆಗೆ ರಕ್ತಪರಿಚಲನೆಯನ್ನು ಸುಧಾರಿಸುತ್ತವೆ. ಟೊಳ್ಳಾಗಿದ್ದಲ್ಲಿ ಚರ್ಮತಜ್ಞರಿಂದ ಚಿಕಿತ್ಸೆ ಪಡೆಯಬಹುದು.

ಜೀವನಶೈಲಿಯ ಅಭ್ಯಾಸಗಳೂ ಮುಖ್ಯವಾಗುತ್ತವೆ. ಅಂದರೆ ಸರಿಯಾಗಿ ನಿದ್ರೆ ಮಾಡುವುದು, ಜಲಸಂಚಯನ, ಸನ್ಸ್ಕ್ರೀನ್ಗಳ ಬಳಕೆ, ಕಣ್ಣಿನ ಕೆಳಗೆ ಸೌಮ್ಯವಾಗಿ ಉಜ್ಜುವುದು, ಹಗುರುವಾದ ಮಸಾಜ್ನಿಂದ ರಕ್ತಪರಿಚಲನೆ ಸುಧಾರಿಸಬಹುದು. ಫೋನ್ ಪರದೆ ನೋಡುವಾಗ ನಿಯಮಿತವಾಗಿ ವಿರಾಮ ತೆಗೆದುಕೊಳ್ಳಬೇಕು.

ವೃತ್ತಿಪರ ವೈದ್ಯರ ಮೇಲ್ವಿಚಾರಣೆಯಲ್ಲಿ ಲೇಸರ್ ಚಿಕಿತ್ಸೆ ಮತ್ತು ಸೌಮ್ಯವಾದ ಕೆಮಿಕಲ್ ಪೀಲ್ ಚಿಕಿತ್ಸೆ ಪಡೆಯುವುದರಿಂದ ಬಣ್ಣ ಸುಧಾರಿಸಬಹುದು.

ಇದೆಲ್ಲ ಮಾಡಿದ ಹೊರತೂ ಕಪ್ಪು ಕಲೆ ಹೋಗದೆ ಇದ್ದಲ್ಲಿ ರಕ್ತ ಪರೀಕ್ಷೆ ಮತ್ತು ಲಿವರ್ ಕಾರ್ಯನಿರ್ವಹಿಸುತ್ತದೆಯೇ ಎಂದು ಪರೀಕ್ಷಿಸುವುದು ಒಳಿತು.

ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಿಂದ ಪಡೆಯಲಾಗಿದೆ ಮತ್ತು ವೈದ್ಯರ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತ ಯಾವುದೇ ಪ್ರಶ್ನೆಗೆ ಸದಾ ನಿಮ್ಮ ವೈದ್ಯರ ಸಲಹೆಯನ್ನೇ ಪಡೆಯಿರಿ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News