×
Ad

ಟ್ರಂಪ್ ವಲಸೆ ಯೋಜನೆಗೆ ಟೆಕ್ಸಾಸ್ ಬೆಂಬಲ: H-1B ವೀಸಾ ಅರ್ಜಿ ಸ್ಥಗಿತಕ್ಕೆ ಗವರ್ನರ್ ಸೂಚನೆ

ಭಾರತೀಯರಿಗೆ ಮತ್ತೊಂದು ಹಿನ್ನಡೆ

Update: 2026-01-28 21:30 IST

ಸಾಂದರ್ಭಿಕ ಚಿತ್ರ | Photo Credit : freepik

ನ್ಯೂಯಾರ್ಕ್, ಜ.28: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನಿರ್ಬಂಧ ನೀತಿಗೆ ಟೆಕ್ಸಾಸ್ ರಾಜ್ಯ ಬೆಂಬಲ ವ್ಯಕ್ತಪಡಿಸಿದ್ದು, ಸರಕಾರಿ ಏಜೆನ್ಸಿಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ H-1B ವೀಸಾ ಅರ್ಜಿಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದು ಭಾರತೀಯರಿಗೆ ಮತ್ತೊಂದು ಹಿನ್ನಡೆಯಾಗಿದೆ.

H-1B ವೀಸಾ ಕಾರ್ಯಕ್ರಮದ ಪರಿಣಾಮವಾಗಿ ಅಮೆರಿಕನ್ ಉದ್ಯೋಗಿಗಳನ್ನು ನೇಮಿಸಬೇಕಾದ ಹುದ್ದೆಗಳು ವಿದೇಶಿ ಉದ್ಯೋಗಿಗಳಿಗೆ ಹೋಗುತ್ತಿವೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೋಟ್ ಜಾರಿಗೊಳಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷ ವೃತ್ತಿಗಳಲ್ಲಿ ವಿಶ್ವದಾದ್ಯಂತದ ಉನ್ನತ ಕೌಶಲ್ಯ ಹೊಂದಿದ ವಿದೇಶಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶದಿಂದ ಈ H-1B ಯೋಜನೆಯನ್ನು ರೂಪಿಸಲಾಗಿದೆ. ಆದರೆ, ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಸ್ಥಳೀಯರ (ಅಮೆರಿಕನ್ನರ) ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅರ್ಹ ಅಮೆರಿಕನ್ನರ ಬದಲು ಕಡಿಮೆ ಸಂಬಳದ ವಿದೇಶಿ ಕಾರ್ಮಿಕರನ್ನು ನೇಮಿಸಲಾಗುತ್ತಿರುವುದು ಪರಿಶೀಲನೆಯ ವೇಳೆ ದೃಢಪಟ್ಟಿದೆ ಎಂದು ಅಬೋಟ್ ಪ್ರತಿಪಾದಿಸಿದ್ದಾರೆ. ಟೆಕ್ಸಾಸ್‌ನಲ್ಲಿ ಹೆಚ್ಚಿನ H-1B ವೀಸಾ ಅರ್ಜಿದಾರರು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ‘ಹ್ಯೂಸ್ಟನ್ ಕ್ರೋನಿಕಲ್’ ವರದಿ ತಿಳಿಸಿದೆ.

2027ರ ಮೇ 31ರವರೆಗೆ ಜಾರಿಯಲ್ಲಿರುವ ಪ್ರಸ್ತುತ ಆದೇಶವು ಸಾರ್ವಜನಿಕ ಸಂಸ್ಥೆಗಳು—ಮುಖ್ಯವಾಗಿ ರಾಜ್ಯ ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ಮತ್ತು ಇತರ ಏಜೆನ್ಸಿಗಳ ಮೇಲೆ—ನೇರ ಪರಿಣಾಮ ಬೀರುತ್ತದೆ.

ಟೆಕ್ಸಾಸ್ ರಾಜ್ಯ ಏಜೆನ್ಸಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಲಕ್ಷಾಂತರ ಸ್ಥಳೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತವೆ ಮತ್ತು ರಾಜ್ಯದ ಕಾರ್ಮಿಕ ಮಾರುಕಟ್ಟೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯ ಸರ್ಕಾರವು ಇತರರಿಗೆ ಉದಾಹರಣೆಯಾಗಬೇಕು ಮತ್ತು ಉದ್ಯೋಗಾವಕಾಶಗಳಲ್ಲಿ (ವಿಶೇಷವಾಗಿ ತೆರಿಗೆದಾರರ ಹಣಕ್ಕೆ ಸಂಬಂಧಿಸಿದ ಹುದ್ದೆಗಳಲ್ಲಿ) ‘ಸ್ಥಳೀಯರಿಗೆ ಮೊದಲ ಆದ್ಯತೆ ಇರಬೇಕು’ ಎಂದು ಅಬೋಟ್ ಹೇಳಿದ್ದಾರೆ.

► ಭಾರತೀಯರಿಗೆ ಮತ್ತೊಂದು ಹಿನ್ನಡೆ

ಟೆಕ್ಸಾಸ್ ಆಡಳಿತದ ಕ್ರಮವು ಭಾರತೀಯರಿಗೆ ಮತ್ತೊಂದು ಹಿನ್ನಡೆಯಾಗಿದೆ. ‘ಪ್ಯೂ ರಿಸರ್ಚ್ ಸೆಂಟರ್’ ವರದಿ ಪ್ರಕಾರ, ಅಮೆರಿಕಾದಲ್ಲಿರುವ 52 ಲಕ್ಷ ಭಾರತೀಯರಲ್ಲಿ ಕನಿಷ್ಠ 5,70,000 ಮಂದಿ ಟೆಕ್ಸಾಸ್‌ನಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಭಾರತೀಯರು, ಭಾರತೀಯ ಮೂಲದ ನಿವಾಸಿಗಳು ಮತ್ತು ಭಾರತೀಯ ವಲಸಿಗರು ಸೇರಿದ್ದಾರೆ. ನ್ಯೂಜೆರ್ಸಿ (4,40,000), ನ್ಯೂಯಾರ್ಕ್ (3,90,000) ಮತ್ತು ಇಲ್ಲಿನಾಯ್ಸ್ (2,70,000) ರಾಜ್ಯಗಳಲ್ಲಿ ಕೂಡ ಭಾರತೀಯ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ.

2025ರ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಘೋಷಿಸಿದ ವೀಸಾ ಕ್ರಮಗಳು ಭಾರತೀಯ ಸಮುದಾಯಕ್ಕೆ ಹೆಚ್ಚಿನ ಆಘಾತ ನೀಡಿವೆ. ಅಮೆರಿಕಾದ ಜನಗಣತಿ ಬ್ಯೂರೋ 2023ರಲ್ಲಿ ನೀಡಿದ ವರದಿ ಪ್ರಕಾರ, ಅಮೆರಿಕಾದಲ್ಲಿರುವ ವಲಸಿಗರಲ್ಲಿ ಕನಿಷ್ಠ 66% ಭಾರತೀಯರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News