95 ಲಕ್ಷ ಡಾಲರ್ ಅಕ್ರಮ ಜೂಜು ವಹಿವಾಟು: ಗುಜರಾತ್ ನ ಒಂಬತ್ತು ಮಂದಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪ
ಸಾಂದರ್ಭಿಕ ಚಿತ್ರ PC: istockphoto
ಅಹ್ಮದಾಬಾದ್: ಅಮೆರಿಕದ ಮಿಸ್ಸೋರಿಯ ಆರು ಕಡೆಗಳಲ್ಲಿ ಸುಮಾರು ಒಂದು ಕೋಟಿ ಡಾಲರ್ ಅಂದಾಜಿನ ಅಕ್ರಮ ಜೂಜು ವಹಿವಾಟು ನಡೆಸುತ್ತಿದ್ದ ಗುಜರಾತ್ ಮೂಲದ ಒಂಬತ್ತು ಮಂದಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪ ಹೊರಿಸಲಾಗಿದೆ.
ಎಲ್ಲ ಆರೋಪಿಗಳು ಭಾರತೀಯರಾಗಿದ್ದು, ಗುಜರಾತ್ ಮೂಲದವರು. ಸ್ಕಿಲ್ ಗೇಮ್ ಹೆಸರಿನಲ್ಲಿ ಕಾನೂನುಬಾಹಿರ ಎಲೆಕ್ಟ್ರಾನಿಕ್ ಜೂಜು ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದ್ದು, 2022 ರಿಂದ 2025ರ ಅವಧಿಯಲ್ಲಿ 95 ಲಕ್ಷ ಡಾಲರ್ ವಹಿವಾಟು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಒಂಬತ್ತು ಮಂದಿಯ ಪೈಕಿ ನಾಲ್ಕು ಮಂದಿ ಜಾರ್ಜಿಯಾ, ಇಬ್ಬರು ನ್ಯೂಯಾರ್ಕ್ ಹಾಗೂ ತಲಾ ಒಬ್ಬರು ವಾಷಿಂಗ್ಟನ್, ಅರ್ಕಾನ್ಸಸ್ ಮತ್ತು ಕೊಲೊರಡೊದಲ್ಲಿ ವಾಸವಿದ್ದರು. ಫೆಡರಲ್ ಗ್ರ್ಯಾಂಡ್ ಜ್ಯೂರಿ ಇವರ ವಿರುದ್ಧ 72 ಅಂಶಗಳ ದೋಷಾರೋಪ ಹೊರಿಸಿದೆ ಎಂದು ಅಮೆರಿಕದ ಮಿಸ್ಸೋರಿ ಪಶ್ಚಿಮ ಜಲ್ಲೆಯ ಅಟಾರ್ನಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ 2024ರ ಡಿಸೆಂಬರ್ 10ರಂದು ಹೊರಿಸಿದ್ದ ದೋಷಾರೋಪವನ್ನು ಪರಿಷ್ಕರಿಸಿ, ಹೆಚ್ಚುವರಿ ಆರೋಪಗಳು ಮತ್ತು ಪ್ರತಿವಾದಿಗಳನ್ನು ಸೇರಿಸಲಾಗಿದೆ. ಮುಚ್ಚಿದ ಲಕೋಟೆಯಲ್ಲಿದ್ದ ಈ ದೋಷಾರೋಪಗಳನ್ನು ಜುಲೈ 23 ಹಾಗೂ 24ರಂದು ವಿಚಾರಣೆಗಾಗಿ ಆರೋಪಿಗಳನ್ನು ಬಂಧಿಸಿದ್ದರಿಂದ ಬಹಿರಂಗಪಡಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಇದರ ಪರಿಣಾಮಗಳು ಇನ್ನೂ ವಿಸ್ತೃತವಾಗಿವೆ ಎಂದು ಅಮೆರಿಕದ ಅಟಾರ್ನಿ ಜೆಫ್ ರೇ ಒತ್ತಿ ಹೇಳಿದ್ದಾರೆ. "ಅಕ್ರಮ ಜೂಜು ಕಾರ್ಯಾಚರಣೆ ಅಕ್ಕಪಕ್ಕದ ನಾಗರಿಕರು ಮತ್ತು ಸಮುದಾಯವನ್ನು ಮಾತ್ರವಲ್ಲದೇ ಸ್ಥಳೀಯ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.