ತೈಲ ಬೆಲೆ ಜಿಗಿತ, ಷೇರು ಮಾರುಕಟ್ಟೆ ಕುಸಿತ | ಅಮೆರಿಕದ ಆರ್ಥಿಕತೆಗೆ ಸವಾಲು: ವರದಿ
ಸಾಂದರ್ಭಿಕ ಚಿತ್ರ | Photo Credit : freepik
ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧದ ಬೆಳವಣಿಗೆಗಳಿಗೆ ಜಾಗತಿಕ ಮಾರುಕಟ್ಟೆಗಳು ತೀವ್ರವಾಗಿ ಪ್ರತಿಕ್ರಿಯಿಸುತ್ತಿರುವ ನಡುವೆ ಅಮೆರಿಕದ ಆರ್ಥಿಕತೆ ‘ರೋಲರ್–ಕೋಸ್ಟರ್’ ಸವಾರಿಯಂತಾಗಿದೆ ಎಂದು The New York Times ವರದಿ ಮಾಡಿದೆ.
ಇರಾನ್ ಮೇಲಿನ ಯುದ್ಧಕ್ಕೆ ಷೇರು ಮಾರುಕಟ್ಟೆ ಪ್ರತಿಕ್ರಿಯಿಸುತ್ತಿದ್ದಂತೆ ಅಮೆರಿಕದ ಪ್ರಮುಖ ಸೂಚ್ಯಂಕಗಳಲ್ಲಿಯೂ ಅಸ್ಥಿರತೆ ಕಾಣಿಸಿಕೊಂಡಿದೆ. ಎಸ್ & ಪಿ 500 ಸೂಚ್ಯಂಕವು ಶುಕ್ರವಾರ ಶೇಕಡಾ 1.3 ರಷ್ಟು ಕುಸಿದಿದ್ದು, ಈ ವಾರದ ಒಟ್ಟು ನಷ್ಟವು ಶೇಕಡಾ 2 ಕ್ಕೆ ತಲುಪಿದೆ. 2026ರಲ್ಲಿ ಈ ಸೂಚ್ಯಂಕಕ್ಕೆ ಇದು ಅತ್ಯಂತ ಕೆಟ್ಟ ವಾರವೆಂದು ವರದಿ ತಿಳಿಸಿದೆ.
ಇದೇ ವೇಳೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿಯೂ ತೀವ್ರ ಏರಿಕೆ ದಾಖಲಾಗಿದೆ. ಅಂತರರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 92 ಡಾಲರ್ ಗೆ ತಲುಪಿದ್ದು, ಕಳೆದ ಶುಕ್ರವಾರದಿಂದ ಸುಮಾರು ಶೇಕಡಾ 30 ರಷ್ಟು ಏರಿಕೆಯಾಗಿದೆ. ಏಪ್ರಿಲ್ 2020ರಲ್ಲಿ ಕೋವಿಡ್–19 ಸಾಂಕ್ರಾಮಿಕದ ಪರಿಣಾಮ ಮಾರುಕಟ್ಟೆಗಳು ನಲುಗಿದ ಬಳಿಕ ಕಂಡುಬಂದ ಅತಿದೊಡ್ಡ ಸಾಪ್ತಾಹಿಕ ಏರಿಕೆಯಿದು ಎಂದು ವರದಿ ಹೇಳಿದೆ.
ಇದರ ನಡುವೆ ಅಮೆರಿಕದ ಕಾರ್ಮಿಕ ಇಲಾಖೆ ಫೆಬ್ರವರಿಯಲ್ಲಿ 90,000 ಕ್ಕೂ ಹೆಚ್ಚು ಉದ್ಯೋಗಗಳ ಅನಿರೀಕ್ಷಿತ ನಷ್ಟವಾಗಿದೆ ಎಂದು ವರದಿ ಮಾಡಿದೆ. ಈ ಬೆಳವಣಿಗೆಯು ಬಡ್ಡಿದರಗಳನ್ನು ಕಡಿತಗೊಳಿಸಬೇಕೇ ಅಥವಾ ಸ್ಥಿರವಾಗಿಯೇ ಇರಿಸಬೇಕೇ ಎಂಬ ಕಠಿಣ ನಿರ್ಧಾರದ ನಡುವೆ ಫೆಡರಲ್ ರಿಸರ್ವ್ ಸಿಲುಕಿದೆ ಎಂದು ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ. ಏರುತ್ತಿರುವ ತೈಲ ಬೆಲೆಗಳ ನಡುವೆ ಬಡ್ಡಿದರಗಳನ್ನು ಕಡಿತಗೊಳಿಸಬೇಕೆ ಅಥವಾ ಅವುಗಳನ್ನು ಸ್ಥಿರವಾಗಿಯೇ ಉಳಿಸಬೇಕೆ ಎಂಬ ನಿರ್ಧಾರದಲ್ಲಿ ಫೆಡರಲ್ ರಿಸರ್ವ್ ಗೊಂದಲದಲ್ಲಿದೆ ಎಂದು ಅವರು ಹೇಳಿದ್ದಾರೆ.
ಬಡ್ಡಿದರ ನೀತಿಗಳ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರನ್ನು ಪದೇ ಪದೇ ಟೀಕಿಸುತ್ತಿದ್ದಾರೆ. ಪೊವೆಲ್ ಅವರ ಬದಲಿಗೆ ನೇಮಕ ಮಾಡಲು ಆದ್ಯತೆಯ ಅಭ್ಯರ್ಥಿಯನ್ನು ಜನವರಿಯಲ್ಲಿ ನಾಮನಿರ್ದೇಶನ ಮಾಡಿರುವುದಾಗಿ ವರದಿ ತಿಳಿಸಿದೆ.