ನೇಪಾಳ ಚುನಾವಣೆ: RSPಗೆ ಭರ್ಜರಿ ಗೆಲುವು; ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ
PC: x.com/bizmandu
ಕಠ್ಮಂಡು: ರ‍್ಯಾಪ್ ಕಲಾವಿದನಾಗಿ ಜನಪ್ರಿಯವಾಗಿದ್ದ ಬಲೇಂದ್ರ ಶಾ ಕಟ್ಟಿದ್ದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSPಗೆ) ನೇಪಾಳ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬಹುಮತದತ್ತ ಮುಖ ಮಾಡಿದೆ. ಕಳೆದ ವರ್ಷ ರಾಷ್ಟ್ರಾದ್ಯಂತ ನಡೆದ GenZ ದಂಗೆಯ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ನೂತನ ಪಕ್ಷ ಆರು ಸ್ಥಾನಗಳನ್ನು ಗೆದ್ದು ಮುನ್ನಡೆಯಲ್ಲಿದೆ. 165 ಸ್ಥಾನಗಳ ಪೈಕಿ 161 ಸ್ಥಾನಗಳ ಚಿತ್ರಣ ಚುನಾವಣಾ ಆಯೋಗದ ಅಂಕಿ ಅಂಶಗಳಿಂದ ಲಭ್ಯವಿದೆ.
ಇತ್ತೀಚಿನವರೆಗೂ ಕಠ್ಮಂಡು ಮೇಯರ್ ಆಗಿದ್ದ ಬಲೇಂದ್ರ ಶಾ ಅವರು ಝಾಪಾ-5 ಕ್ಷೇತ್ರದಲ್ಲಿ 15 ಸಾವಿರ ಮತಗಳನ್ನು ಗಳಿಸಿ, ನಾಲ್ಕು ಬಾರಿಯ ಪ್ರಧಾನಿ ಹಾಗೂ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಕೆ.ಪಿ.ಶರ್ಮಾ ಓಲಿ ವಿರುದ್ಧ ಗೆಲುವಿನ ಅಂಚಿನಲ್ಲಿದ್ದಾರೆ. ಓಲಿ ತಮ್ಮ ಭದ್ರಕೋಟೆಯಲ್ಲಿ ಇದುವರೆಗೆ ಕೇವಲ 3300 ಮತಗಳನ್ನಷ್ಟೇ ಗಳಿಸಿದ್ದಾರೆ.
ಬಲೇನ್ ಎಂದೇ ಜನಪ್ರಿಯರಾಗಿರುವ 35 ವರ್ಷದ ಎಂಜಿನಿಯರ್ ನೇಪಾಳದ ಮುಂದಿನ ಪ್ರಧಾನಿಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಈಗಾಗಲೇ ಸ್ಥಾಪಿತ ಪಕ್ಷಗಳನ್ನು ಜನ ಸಾರಾ ಸಗಟಾಗಿ ತಿರಸ್ಕರಿಸಿರುವುದು ಈ ಫಲಿತಾಂಶದಿಂದ ಕಂಡುಬರುತ್ತದೆ. ನೇಪಾಳ ಕಳೆದ 18 ವರ್ಷಗಳಲ್ಲಿ 14 ಸರ್ಕಾರಗಳನ್ನು ಕಂಡಿತ್ತು.
ಸಾಂಪ್ರದಾಯಿಕ ಪಕ್ಷಗಳ ಬಹುತೇಕ ಮಂದಿ ನಾಯಕರು ಹೊಸ ಪಕ್ಷದ ಅಭ್ಯರ್ಥಿಗಳ ಎದುರು ಸೋಲಿನ ಅಂಚಿನಲ್ಲಿದ್ದಾರೆ. ನೇಪಾಳದ 275 ಸದಸ್ಯಬಲದ ಪ್ರತಿನಿಧಿ ಸಭೆಯಲ್ಲಿ ಎಫ್‌ಪಿಟಿಪಿ ವ್ಯವಸ್ಥೆಯಡಿ 165 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. 110 ಸ್ಥಾನಗಳನ್ನು ಪ್ರಮಾಣಾನುಸಾರ ಪ್ರಾತಿನಿಧ್ಯ ವ್ಯವಸ್ಥೆಯಡಿ ಭರ್ತಿ ಮಾಡಲಾಗುತ್ತದೆ.
ಇತ್ತೀಚಿನ ವರದಿಗಳು ಬಂದಾಗ ಪ್ರಧಾನಿ ಅಭ್ಯರ್ಥಿ RSPಗೆ ಯ ಬಲೇನ್ ಶಾ ಅವರು ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿಯವರ ಭದ್ರಕೋಟೆ ಎನಿಸಿದ ಪೂರ್ವ ನೇಪಾಳದ ಝಾಪಾ-5 ಕ್ಷೇತ್ರದಲ್ಲಿ ಭಾರಿ ಮುನ್ನಡೆಯಲ್ಲಿದ್ದಾರೆ. ಶಾ ಇದುವರೆಗೆ 13694 ಮತಗಳನ್ನು ಗಳಿಸಿದ್ದು, ಓಲಿ ಕೇವಲ 3011 ಮತ ಪಡೆದಿದ್ದಾರೆ.