ಮಧ್ಯಪ್ರಾಚ್ಯ ಸಂಘರ್ಷ | ಖತರ್ ನಲ್ಲಿ ಸೀಮಿತ ವಿಮಾನ ಸೇವೆ ಆರಂಭ; ಸಿಕ್ಕಿ ಹಾಕಿಕೊಂಡಿರುವ ಪ್ರಯಾಣಿಕರ ಸ್ಥಳಾಂತರ, ಸರಕು ವಿಮಾನಗಳಿಗೆ ಅವಕಾಶ
Photo Credit : qatarairways.com
ದೋಹಾ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆಯೇ ಖತರ್ ತನ್ನ ವಾಯು ಸಂಚಾರವನ್ನು ಭಾಗಶಃ ಪುನಃ ತೆರೆಯಲು ಮುಂದಾಗಿದೆ. ದೋಹಾದ ಹಮದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (HIA) ಶನಿವಾರ (ಮಾರ್ಚ್ 7) ಸೀಮಿತ ಸಂಖ್ಯೆಯ ವಿಮಾನಗಳನ್ನು ನಿರ್ವಹಿಸುವುದಾಗಿ ತಿಳಿಸಿದೆ.
ವಿಮಾನ ನಿಲ್ದಾಣದ ಪ್ರಕಟಣೆಯ ಪ್ರಕಾರ, ಸಿಕ್ಕಿ ಹಾಕಿಕೊಂಡಿರುವ ಪ್ರಯಾಣಿಕರನ್ನು ಸ್ಥಳಾಂತರಿಸುವಿಕೆ ಹಾಗೂ ವಾಯು ಸರಕು ಕಾರ್ಯಾಚರಣೆ ಉದ್ದೇಶದಿಂದ ಕೆಲ ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.
ಆದಾಗ್ಯೂ, ವಿಮಾನ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಯಾವುದೇ ನಿರ್ಧಾರವು ಸಂಬಂಧಿತ ಅಧಿಕಾರಿಗಳು ನಡೆಸುವ ನಿರಂತರ ಭದ್ರತಾ ಮೌಲ್ಯಮಾಪನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹಮದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸ್ಪಷ್ಟಪಡಿಸಿದೆ.
‘‘ಮುಂದಿನ ದಿನಗಳಲ್ಲಿ ಹೆಚ್ಚುವರಿ ವಿಮಾನಗಳ ಕಾರ್ಯಾಚರಣೆ ಕುರಿತು ನಿರ್ಧಾರವು ಸಂಬಂಧಿತ ಅಧಿಕಾರಿಗಳು ನಡೆಸುವ ಭದ್ರತಾ ಪರಿಸ್ಥಿತಿಯ ನಿರಂತರ ಮೌಲ್ಯಮಾಪನದ ಮೇಲೆ ಅವಲಂಬಿತವಾಗಿರುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಖತರ್ ರಾಜ್ಯದ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರವು ವಾಯುಪ್ರದೇಶವನ್ನು ಸುರಕ್ಷಿತವೆಂದು ಘೋಷಿಸಿ ಪುನಃ ತೆರೆಯುತ್ತಿದ್ದಂತೆಯೇ ಸಾಮಾನ್ಯ ವಿಮಾನ ಸೇವೆಗಳು ಪುನರಾರಂಭಗೊಳ್ಳಲಿವೆ’ ಎಂದು ವಿಮಾನ ನಿಲ್ದಾಣವು ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಈ ಪ್ರದೇಶದಲ್ಲಿ ಟೆಹ್ರಾನ್ ನಡೆಸುತ್ತಿರುವ ಪ್ರತೀಕಾರದ ದಾಳಿಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಹಾರಾಟಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸುವ ಮೊದಲು ಹಲವು ಸವಾಲುಗಳಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಕುವೈತ್, ಖತರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರದೇಶಗಳತ್ತ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಲಾಗಿದೆ ಎಂಬ ವರದಿಗಳೂ ಪ್ರಕಟವಾಗಿವೆ ಎಂದು Al Jazeera ಹೇಳಿದೆ.