“ಇರಾನಿಯನ್ನರಿಗೆ ಕೊನೆಯ ಗುಂಡು ಇರುವವರೆಗೂ ಹೋರಾಡುವ ಗುಂಡಿಗೆಯಿದೆ”: RAW ದ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್
ವಿಕ್ರಮ್ ಸೂದ್ | Photo Credit : ANI
ಹೊಸದಿಲ್ಲಿ: ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ವಿರುದ್ಧ ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಅಮೆರಿಕ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ನ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ಅವರು, ಇರಾನ್ ಪ್ರತೀಕಾರಾತ್ಮಕ ದಾಳಿಗಳನ್ನು ಮುಂದುವರಿಸುತ್ತಿದ್ದು, ಅದು ಅಮೆರಿಕಕ್ಕಿಂತ ಭಿನ್ನವಾಗಿ “ಸಾಯಲು ಸಿದ್ಧವಾಗಿರುವ ರಾಷ್ಟ್ರ” ಎಂದು ಹೇಳಿದರು.
“ಈ ಸಂಘರ್ಷ ಎಷ್ಟು ಕಾಲ ಮುಂದುವರಿಯುತ್ತದೆ ಎಂದು ಹೇಳುವುದು ಕಷ್ಟ. ಆದರೆ ಅಮೆರಿಕ ಯೋಚಿಸಿದ್ದಕ್ಕಿಂತ ಇದು ಹೆಚ್ಚು ಕಾಲ ಸಾಗುವ ಸಾಧ್ಯತೆ ಇದೆ. ಅಮೆರಿಕವು ಸಣ್ಣ ಹಾಗೂ ತೀಕ್ಷ್ಣ ದಾಳಿಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ ಇರಾನ್ ವಿಭಿನ್ನ ರೀತಿಯ ತಂತ್ರವನ್ನು ಅನುಸರಿಸುತ್ತಿದೆ. ಅದು ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆಯೇ ದಾಳಿ ನಡೆಸುತ್ತಿದೆ. ಇದರಿಂದ ಅಮೆರಿಕದ ವಿರುದ್ಧ ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ನೆನಪಿಡಿ, ಇರಾನಿಯನ್ನರು ಸಾಯಲು ಸಿದ್ಧರಾಗಿದ್ದಾರೆ, ಆದರೆ ಅಮೆರಿಕನ್ನರು ಸಾಯಲು ಸಿದ್ಧರಾಗಿರುವುದಿಲ್ಲ” ಎಂದು ಸೂದ್ ಹೇಳಿದರು.
ಈ ನಡುವೆ ಇರಾನ್ ಉಪ ವಿದೇಶಾಂಗ ಸಚಿವ ಸಯೀದ್ ಖತೀಬ್ಝಾದೆ, ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ “ಆಕ್ರಮಣ”ದ ವಿರುದ್ಧ ಟೆಹ್ರಾನ್ “ವೀರೋಚಿತ ರಾಷ್ಟ್ರೀಯ ರಕ್ಷಣಾ ಹೋರಾಟ” ನಡೆಸುತ್ತಿದೆ ಎಂದು ಹೇಳಿದ್ದಾರೆ. ದೇಶವು “ಕೊನೆಯ ಗುಂಡು ಮತ್ತು ಕೊನೆಯ ಸೈನಿಕ”ವರೆಗೂ ಪ್ರತಿರೋಧ ತೋರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.
“ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ್ದು, ಗರಿಷ್ಠ ಹಾನಿ ಉಂಟುಮಾಡಲು ಪ್ರಯತ್ನಿಸುತ್ತಿವೆ. ನಾವು ಮಾತನಾಡುತ್ತಿರುವಾಗಲೇ ನನ್ನ ನಾಗರಿಕರು ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ನಿರಂತರ ಕಾರ್ಪೆಟ್ ಬಾಂಬ್ ದಾಳಿಗೆ ಒಳಗಾಗುತ್ತಿದ್ದಾರೆ. ಟೆಹ್ರಾನ್ ನಗರ ನಿರಂತರ ದಾಳಿಗೆ ಒಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಬಳಿ ಇರುವ ಕೊನೆಯ ಗುಂಡು ಹಾಗೂ ಕೊನೆಯ ಸೈನಿಕನ ವರೆಗೆ ಪ್ರತಿರೋಧ ತೋರಿಸುವುದನ್ನು ಬಿಟ್ಟು ನಮಗೆ ಬೇರೆ ಮಾರ್ಗವಿಲ್ಲ” ಎಂದು ಖತೀಬ್ಝಾದೆ ಹೇಳಿದರು.
ಈ ಸಂಘರ್ಷವನ್ನು ಬಾಹ್ಯ ದೌರ್ಜನ್ಯಗಳ ವಿರುದ್ಧದ ಅಗತ್ಯ ಹೋರಾಟವೆಂದು ಅವರು ವಿವರಿಸಿದರು.
“ಇದು ನಮಗೆ ಅತ್ಯಂತ ವೀರೋಚಿತ ರಾಷ್ಟ್ರೀಯತಾವಾದಿ ಯುದ್ಧವಾಗಿದೆ. ಆಕ್ರಮಣಕಾರರನ್ನು ತಡೆಯುವುದು ಈಗ ನಮ್ಮ ಮೊದಲ ಆದ್ಯತೆ. ಅಂತರರಾಷ್ಟ್ರೀಯ ಕಾನೂನಿನ ತತ್ವಗಳ ಮೇಲೆಯೇ ದಾಳಿ ನಡೆದಿದೆ. ಈಗ ಅಂತರರಾಷ್ಟ್ರೀಯ ಕಾನೂನು ಮತ್ತು ಇರಾನ್ ಎರಡೂ ದಾಳಿಗೆ ಒಳಗಾಗಿವೆ. ಈ ದೌರ್ಜನ್ಯಗಳ ವಿರುದ್ಧ ಜಾಗತಿಕ ಸಮುದಾಯ ಒಟ್ಟಾಗಿ ನಿಲ್ಲಬೇಕು” ಎಂದು ಅವರು ಹೇಳಿದರು.
ಫೆಬ್ರವರಿ 28ರಂದು ಇರಾನ್ ಭೂಪ್ರದೇಶದ ಮೇಲೆ ಅಮೆರಿಕ–ಇಸ್ರೇಲ್ ಜಂಟಿ ಸೈನಿಕ ದಾಳಿ ನಡೆದಿದ್ದು, ಅದರಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಸೇರಿದಂತೆ ಹಲವು ಹಿರಿಯ ನಾಯಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬಳಿಕ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ.
ಪ್ರತಿಕಾರವಾಗಿ ಇರಾನ್ ಹಲವು ಅರಬ್ ದೇಶಗಳತ್ತ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಅಲೆಗಳನ್ನು ಆರಂಭಿಸಿದೆ. ಸಂಘರ್ಷ ಈಗ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಈ ದಾಳಿಗಳು ಮುಖ್ಯವಾಗಿ ಆ ಪ್ರದೇಶದಲ್ಲಿರುವ ಅಮೆರಿಕದ ಸೈನಿಕ ನೆಲೆಗಳು ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ನಡೆದಿವೆ.