Bangkok ನ ಬಾರ್ ನಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 27 ಮೃತ್ಯು
ಪ್ರವೇಶದ್ವಾರದಲ್ಲಿ ಹೊತ್ತಿಕೊಂಡ ಬೆಂಕಿ; ದಟ್ಟ ಹೊಗೆಗೆ ಉಸಿರುಗಟ್ಟಿದ ಜನರು, 22 ಮಂದಿಯ ಸ್ಥಿತಿ ಗಂಭೀರ
Photo credit : NDTV
ಬ್ಯಾಂಕಾಕ್, ಜು.13: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನ ಉತ್ತರ ಭಾಗದಲ್ಲಿರುವ ನಾ ಲಾಡ್‌ಪ್ರಾವ್ ಪಬ್ ನಲ್ಲಿ ರವಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 27 ಮಂದಿ ಮೃತಪಟ್ಟಿದ್ದು, 63 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 22 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಮಧ್ಯರಾತ್ರಿ ಸುಮಾರಿಗೆ ಪಬ್ ನ ಪ್ರವೇಶದ್ವಾರದ ಬಳಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಇಡೀ ಕಟ್ಟಡವನ್ನು ಆವರಿಸಿದ್ದರಿಂದ ಗ್ರಾಹಕರು ಮತ್ತು ಸಿಬ್ಬಂದಿ ಹೊರಗೆ ಓಡಲು ಯತ್ನಿಸಿದರು. ಈ ವೇಳೆ ಅನೇಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸುಮಾರು 30 ನಿಮಿಷಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು.
ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪುಂಟ್ ಮಾತನಾಡಿ, ಬೆಂಕಿ ಅತ್ಯಂತ ವೇಗವಾಗಿ ಸೀಲಿಂಗ್ ವರೆಗೂ ಹರಡಿತ್ತು. ಹೆಚ್ಚಿನ ಸಾವುಗಳಿಗೆ ದಟ್ಟ ಹೊಗೆಯೇ ಕಾರಣವಾಗಿರಬಹುದು ಎಂದು ಹೇಳಿದರು.
ಘಟನಾ ಸ್ಥಳದ ಅಗ್ನಿ ನಿರ್ಗಮನ ದ್ವಾರದ ಬಳಿ ಹಲವು ಮೃತದೇಹಗಳು ಪತ್ತೆಯಾಗಿವೆ. ನಿರ್ಗಮನ ಮಾರ್ಗದಲ್ಲಿ ಅಡೆತಡೆ ಉಂಟಾಗಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. "ಪಬ್ ನಲ್ಲಿ ಆ ಸಮಯದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಖಚಿತವಾಗಿಲ್ಲ" ಎಂದು ಸಿಟ್ಟಿಪುಂಟ್ ತಿಳಿಸಿದರು.
ಥೈಲ್ಯಾಂಡ್ ಪ್ರಧಾನಿ ಅನುತಿನ್ ಚಾರ್ನ್‌ವಿರಕುಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿಗೆ ಕಾರಣ ಇನ್ನೂ ಗೊತ್ತಾಗಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಿಯ ಪ್ರಕಾರ, ಪಬ್ ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಸಂಗೀತಗಾರನೊಬ್ಬ ಮೊದಲು ಹೊಗೆಯನ್ನು ಗಮನಿಸಿದ್ದಾನೆ. ವೇದಿಕೆಯ ಸಮೀಪದ ಸರ್ಕ್ಯೂಟ್ ಬ್ರೇಕರ್ ಬಳಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕೆಲವೇ ಕ್ಷಣಗಳ ಬಳಿಕ ಸ್ಫೋಟದಂತಹ ಶಬ್ದ ಕೇಳಿಸಿದ್ದು, ತಕ್ಷಣವೇ ದಟ್ಟ ಹೊಗೆ ಕಟ್ಟಡವನ್ನು ಆವರಿಸಿದೆ.
ಪಬ್ ನ ಹಿಂಭಾಗದಲ್ಲಿರುವ ಶೌಚಾಲಯಗಳಲ್ಲಿ ಹಲವು ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುಲ ವೀಡಿಯೋಗಳಲ್ಲಿ ಪಬ್ ನ ಪ್ರವೇಶದ್ವಾರದಿಂದ ದಟ್ಟ ಹೊಗೆ ಹೊರಬರುತ್ತಿರುವುದು, ಜನರು ಜೀವ ಉಳಿಸಿಕೊಳ್ಳಲು ಆತಂಕದಿಂದ ಹೊರಗೆ ಓಡುತ್ತಿರುವುದು ಮತ್ತು ಆಕಾಶದತ್ತ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ. ಬೆಂಕಿ ನಂದಿಸಿದ ಬಳಿಕ ತೆಗೆದ ಚಿತ್ರಗಳಲ್ಲಿ ಒಳಾಂಗಣ ಸಂಪೂರ್ಣ ಸುಟ್ಟು ಕರಕಲಾಗಿರುವುದು ಗೋಚರಿಸಿದೆ.
ಘಟನೆ ನಡೆದ ವೇಳೆ ಸಮೀಪದಲ್ಲೇ ಕಾರ್ಯಕ್ರಮ ನೀಡುತ್ತಿದ್ದ ಗಾಯಕಿ ಸುಕನ್ಯಾ ವಾಂಗ್‌ವೊಂಗ್‌ವಾಯ್, ತಮ್ಮ ಬ್ಯಾಂಡ್ ನ ಸದಸ್ಯರು ಪಬ್ ನಲ್ಲಿ ಪ್ರದರ್ಶನ ನೀಡುತ್ತಿದ್ದರು ಎಂಬ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾಗಿ ಹೇಳಿದ್ದಾರೆ. ಅವರ ಬ್ಯಾಂಡ್ ನ ಒಬ್ಬ ಸದಸ್ಯ ಮೃತಪಟ್ಟಿದ್ದು, ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬ ಸದಸ್ಯ ಇನ್ನೂ ನಾಪತ್ತೆಯಾಗಿದ್ದಾರೆ.
"ಒಳಗಿದ್ದವರು ಹೇಳುವ ಪ್ರಕಾರ, ಬೆಂಕಿ ಕಾಣಿಸಿಕೊಂಡ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಎಲ್ಲೆಡೆ ಹೊಗೆ ತುಂಬಿದ್ದರಿಂದ ಯಾರಿಗೂ ಹೊರಬರುವ ದಾರಿ ಕಾಣಲಿಲ್ಲ" ಎಂದು ಅವರು ತಿಳಿಸಿದ್ದಾರೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಹಾಗೂ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದ ಸಾವಿನ ಸಂಖ್ಯೆ ಹೆಚ್ಚಾಯಿತೇ ಎಂಬ ಕುರಿತು ತನಿಖೆ ಮುಂದುವರಿದಿದೆ.