×
Ad

Nepal | Gen-Z ಪ್ರತಿಭಟನೆ, ಆತ್ಮಾಹುತಿ ಯತ್ನ: ಬಾಲೆನ್ ಶಾ ಸರ್ಕಾರಕ್ಕೆ ಸಂಕಷ್ಟ

Update: 2026-07-13 07:50 IST

Photo credit : NDTV

ಕಠ್ಮಂಡು: ಪುನರ್ವಸತಿ ಯೋಜನೆ ರೂಪಿಸದೆ ಜನರನ್ನು ತೆರವುಗೊಳಿಸುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ರವಿವಾರ ನೂರಾರು ಜನರು ಪ್ರತಿಭಟನೆ ನಡೆಸಿದರು. ಕಳೆದ ವರ್ಷ ಕೆ.ಪಿ. ಶರ್ಮಾ ಓಲಿ ನೇತೃತ್ವದ ಆಡಳಿತದ ಅಂತ್ಯಕ್ಕೆ ಕಾರಣವಾದ Gen-Z ಯುವಕರ ಪ್ರತಿಭಟನೆಗಳನ್ನು ಬೆಂಬಲಿಸಿದ್ದ ಪ್ರಧಾನಿ ಬಾಲೆನ್ ಶಾ ನೇತೃತ್ವದ ಸರ್ಕಾರಕ್ಕೆ ಇದು ಮೊದಲ ಪ್ರಮುಖ ರಾಜಕೀಯ ಸವಾಲಾಗಿ ಪರಿಣಮಿಸಿದೆ.

ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಪೊಲೀಸರ ಕ್ರಮವನ್ನು ವಿರೋಧಿಸಿ ಆರಂಭವಾದ ಪ್ರತಿಭಟನೆ ಕಳೆದ ಕೆಲವು ದಿನಗಳಿಂದ ಮುಂದುವರಿದಿದೆ. ಪುನರ್ವಸತಿ ಯೋಜನೆ ಇಲ್ಲದೆ ಭೂಹೀನರನ್ನು ತೆರವುಗೊಳಿಸಿ ತಾತ್ಕಾಲಿಕ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿರುವ ಕ್ರಮವನ್ನು ಅನೇಕ ಯುವಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಸ್ಥಳಾಂತರಿತ ಕುಟುಂಬಗಳು ಎದುರಿಸುತ್ತಿರುವ ‘ಅಮಾನವೀಯ’ ಜೀವನ ಪರಿಸ್ಥಿತಿಯನ್ನು Gen-Z ಕಾರ್ಯಕರ್ತರು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿರುವ ಜನರ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಕೆಲವು ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರನ್ನು ಬಂಧಿಸಲಾಗಿದೆ. ಇದೇ ತಿಂಗಳ ಆರಂಭದಲ್ಲಿ 25 ವರ್ಷದ ಗಣೇಶ್ ನೇಪಾಳಿ ಎಂಬ ಪ್ರತಿಭಟನಾಕಾರ, ನಗರ ಪೊಲೀಸರು ತನ್ನ ಮೋಟಾರ್‌ಸೈಕಲ್‌ಗೆ ಚಕ್ರ ಲಾಕ್ ಹಾಕಿದ್ದನ್ನು ವಿರೋಧಿಸಿ ಕಠ್ಮಂಡುವಿನಲ್ಲಿ ಆತ್ಮಾಹುತಿ ಯತ್ನ ನಡೆಸಿದ್ದರು.

ಜಾಯಿಂಟ್ ನ್ಯಾಷನಲ್ ಸ್ಕ್ವಾಟರ್ಸ್ ಫ್ರಂಟ್ ಆಯೋಜಿಸಿದ್ದ ಸೋಮವಾರದ ಪ್ರತಿಭಟನೆ ರಾಜಧಾನಿಯ ಪ್ರಮುಖ ಸರ್ಕಾರಿ ಕಚೇರಿ ಎದುರು ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಹೆಚ್ಚಿನವರು Gen-Z ಯುವಕರಾಗಿದ್ದು, ‘ಬಡವರ ಮೇಲಿನ ದೌರ್ಜನ್ಯ ನಿಲ್ಲಿಸಿ’, ‘ಮಾನವ ಹಕ್ಕುಗಳನ್ನು ಗೌರವಿಸಿ’, ‘ಅಕ್ರಮ ಬಂಧನವನ್ನು ನಿಲ್ಲಿಸಿ’ ಹಾಗೂ ‘ಸ್ಥಳಾಂತರಿತ ಕುಟುಂಬಗಳಿಗೆ ಶಾಶ್ವತ ಆಶ್ರಯ ಕಲ್ಪಿಸಿ’ ಎಂಬ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿದರು.

ಕಳೆದ ವರ್ಷ ನೇಪಾಳದಲ್ಲಿ ಭುಗಿಲೆದ್ದ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಈ ಹೋರಾಟ ನೆನಪಿಸುವಂತಿದೆ. ಶುಕ್ರವಾರ ಕಠ್ಮಂಡುವಿನ ವಸತಿ ಪ್ರದೇಶಕ್ಕೆ ಪ್ರವಾಹ ನುಗ್ಗಿದ ಪರಿಣಾಮ 150 ಮಂದಿಯನ್ನು ಭದ್ರತಾ ಪಡೆಗಳ ನೆರವಿನಿಂದ ಸ್ಥಳಾಂತರಿಸಲಾಗಿತ್ತು. ಮರುದಿನ ಪರಿಸ್ಥಿತಿಯನ್ನು ಪರಿಶೀಲಿಸಲು Gen-Z ಕಾರ್ಯಕರ್ತರ ದೊಡ್ಡ ತಂಡ ಅಲ್ಲಿಗೆ ತೆರಳಿದಾಗ, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಮುಖಕ್ಕೆ ಗಾಯಗೊಂಡಿದ್ದ ಒಬ್ಬ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಗಗನ್ ಕುಮಾರ್ ಥಾಪಾ, ಪ್ರತಿಭಟನಾಕಾರರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ರಾಜಧಾನಿಯಿಂದ 206 ಕಿಲೋಮೀಟರ್ ದೂರದಲ್ಲಿರುವ ಕೋಶಿ ಪ್ರಾಂತ್ಯದಲ್ಲಿಯೂ ಬಂಧಿತ Gen-Z ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ 26 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಎಪ್ರಿಲ್‌ ನಲ್ಲಿ ಕಠ್ಮಂಡು ಕಣಿವೆ ಹಾಗೂ ನೇಪಾಳದ ಇತರ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ 15,000ಕ್ಕೂ ಹೆಚ್ಚು ಜನರನ್ನು ಒಳಗೊಂಡ 2,600ಕ್ಕೂ ಅಧಿಕ ಕುಟುಂಬಗಳ ವಸತಿಗಳನ್ನು ತೆರವುಗೊಳಿಸಲಾಗಿದೆ. ಅವರಲ್ಲಿ 325 ಕುಟುಂಬಗಳು ಕಠ್ಮಂಡುವಿನ ವಿವಿಧ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿವೆ.

ಜುಲೈ 2ರಂದು ನೇಪಾಳ ಸರ್ಕಾರವು ಜುಲೈ 6ರೊಳಗೆ ತಾತ್ಕಾಲಿಕ ವಸತಿ ಕೇಂದ್ರಗಳನ್ನು ಖಾಲಿ ಮಾಡುವಂತೆ ಆದೇಶಿಸಿತ್ತು. ಆದರೆ ಕನಿಷ್ಠ 60 ಕುಟುಂಬಗಳು ಬೇರೆ ಆಶ್ರಯವಿಲ್ಲ ಎಂದು ಹೇಳಿ ಅಲ್ಲಿಂದ ತೆರಳಲು ನಿರಾಕರಿಸಿವೆ.

Gen-Z ಯುವಕರ ಬೆಂಬಲದ ಅಲೆಯ ಮೇಲೆ ಅಧಿಕಾರಕ್ಕೆ ಬಂದ ಬಾಲೆನ್ ಶಾ ಅವರಿಗೆ ಈಗ ಅದೇ ಯುವ ಸಮುದಾಯದ ಅಸಮಾಧಾನವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. Tine ನಿಯತಕಾಲಿಕವು 2023ರ ‘ಟಾಪ್ 100 ಉದಯೋನ್ಮುಖ ನಾಯಕರು’ ಪಟ್ಟಿಯಲ್ಲಿ ಬಾಲೆನ್ ಶಾ ಅವರನ್ನು ಸೇರಿಸಿತ್ತು. ಕಠ್ಮಂಡು ಮಹಾನಗರದ ಮೇಯರ್ ಆಗಿದ್ದ ವೇಳೆ ನಗರ ಸುಧಾರಣೆ ಹಾಗೂ ರಾಜಧಾನಿಯ ಸುಂದರೀಕರಣ ಕಾರ್ಯಕ್ರಮಗಳ ಮೂಲಕ ಅವರು ಜನಪ್ರಿಯತೆ ಗಳಿಸಿದ್ದರು. ಇದೀಗ ಪುನರ್ವಸತಿ ನೀತಿ, ಬಲವಂತದ ತೆರವು ಕಾರ್ಯಾಚರಣೆ ಹಾಗೂ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವು ಅವರ ಸರ್ಕಾರಕ್ಕೆ ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಾಗಿ ಪರಿಣಮಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News