Photo credit : timesofindia

ವಾಷಿಂಗ್ಟನ್ ಡಿಸಿ : ಅಮೆರಿಕದ ವಾಷಿಂಗ್ಟನ್ ಡಿಸಿಯಿಂದ ಮೈನೆವರೆಗೆ ಪೂರ್ವ ಕರಾವಳಿ ಭಾಗಕ್ಕೆ ಈ ವಾರಾಂತ್ಯದಲ್ಲಿ ಪ್ರಬಲ ‘ನಾರ್-ಈಸ್ಟರ್’ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮವಾಗಿ 400ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ಶನಿವಾರ ಒಂದು ಹಂತದಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ವಿಮಾನ ಸಂಚಾರದ ಮಾಹಿತಿ ನೀಡುವ ಫ್ಲೈಟ್ಅವೇರ್ (FlightAware) ಪ್ರಕಾರ, ಸ್ಥಳೀಯ ಕಾಲಮಾನ ಸಂಜೆ 6:13ರ ವೇಳೆಗೆ ಅಮೆರಿಕದ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದಂತೆ 439 ವಿಮಾನಗಳ ಹಾರಾಟ ರದ್ದಾಗಿದ್ದು, 2,459 ವಿಮಾನಗಳ ಹಾರಾಟ ವಿಳಂಬಗೊಂಡಿದೆ.

ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಕನೆಕ್ಟಿಕಟ್ ರಾಜ್ಯದಲ್ಲಿ ಗವರ್ನರ್ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಕ್ರಿಯಗೊಳಿಸಿದ್ದಾರೆ.

PowerOutage.com ವರದಿ ಪ್ರಕಾರ, ಸ್ಥಳೀಯ ಕಾಲಮಾನ ಸಂಜೆ 6:07ರ ವೇಳೆಗೆ ನ್ಯೂಜೆರ್ಸಿ, ಕನೆಕ್ಟಿಕಟ್, ನ್ಯೂಯಾರ್ಕ್ ಮತ್ತು ಪೆನ್ಸಿಲ್ವೇನಿಯಾದಲ್ಲಿ 68,000ಕ್ಕೂ ಅಧಿಕ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದಿನದ ಆರಂಭದಲ್ಲಿ ಈ ಸಂಖ್ಯೆ 1,19,000ಕ್ಕೂ ಅಧಿಕವಾಗಿತ್ತು. ನ್ಯೂಯಾರ್ಕ್ ನಲ್ಲಿ 31,000ಕ್ಕೂ ಅಧಿಕ ಗ್ರಾಹಕರು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದರೆ, ಕನೆಕ್ಟಿಕಟ್ ಮತ್ತು ನ್ಯೂಜೆರ್ಸಿಯಲ್ಲಿ ತಲಾ 12,000ಕ್ಕೂ ಅಧಿಕ ಗ್ರಾಹಕರು ಸಮಸ್ಯೆ ಎದುರಿಸಿದರು.

ನ್ಯೂಯಾರ್ಕ್ ರಾಜ್ಯದಲ್ಲಿ ಸಂಜೆ 4 ಗಂಟೆಯ ವೇಳೆಗೆ 19,000ಕ್ಕೂ ಅಧಿಕ ಮನೆಗಳು ಮತ್ತು ಸಂಸ್ಥೆಗಳಿಗೆ ವಿದ್ಯುತ್ ಮರುಸ್ಥಾಪಿಸಲು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೆಂಟ್ರಲ್ ಹಡ್ಸನ್ ಗ್ಯಾಸ್ & ಎಲೆಕ್ಟ್ರಿಕ್ ಕಾರ್ಪೊರೇಷನ್ ತಿಳಿಸಿದೆ. ಅಲ್ಸ್ಟರ್ ಕೌಂಟಿಯ ಕೆಲವು ಭಾಗಗಳಲ್ಲಿ ತೀವ್ರ ಹಾನಿಯಾಗಿದ್ದು, ವಿದ್ಯುತ್ ಮರುಸ್ಥಾಪನೆ ಕಾರ್ಯಗಳು ಭಾನುವಾರದವರೆಗೂ ಮುಂದುವರಿಯುವ ಸಾಧ್ಯತೆಯಿದೆ.

ಉತ್ತರದ ಬರ್ಗೆನ್ ಕೌಂಟಿಯಿಂದ ದಕ್ಷಿಣದ ಕೇಪ್ ಮೇ ಕೌಂಟಿಯವರೆಗೆ ನ್ಯೂಜೆರ್ಸಿಯ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ ಎಂದು NJ.com ವರದಿ ಮಾಡಿದೆ. ಜರ್ಸಿ ಶೋರ್ ನ ಕೆಲವು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಈ ನಾರ್-ಈಸ್ಟರ್ ಚಂಡಮಾರುತವು ಸೋಮವಾರದವರೆಗೆ ಮಿಡ್-ಅಟ್ಲಾಂಟಿಕ್ ಮತ್ತು ನ್ಯೂ ಇಂಗ್ಲೆಂಡ್ ಪ್ರದೇಶಗಳಲ್ಲಿ ಪ್ರವಾಹ, ಅಪಾಯಕಾರಿ ಸಮುದ್ರದ ಅಲೆಗಳು, ಬಿರುಗಾಳಿ ಹಾಗೂ ಭಾರೀ ಮಳೆಗೆ ಕಾರಣವಾಗಲಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor