Photo:screengrab/ x.com/ANI

ನ್ಯೂಯಾರ್ಕ್ : ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಪರಿಹಾರ ಅಗತ್ಯವಿದೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಝ್ ಶರೀಫ್ ಪ್ರತಿಪಾದಿಸಿದ್ದಾರೆ.

ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ನೇತೃತ್ವದಲ್ಲಿ ಮುಕ್ತ ಮತ್ತು ನಿಷ್ಪಕ್ಷಪಾತ ಜನಮತಗಣನೆ ನಡೆಸುವ ಭರವಸೆಯನ್ನು ಈಡೇರಿಸುವುದಕ್ಕಾಗಿ ಕಾಶ್ಮೀರದ ಜನತೆ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

“ತಲೆಮಾರುಗಳಿಂದ ಕಾಶ್ಮೀರಿಗಳು ಅಕ್ರಮ ಆಕ್ರಮಣ, ಅಪ್ರಚೋದಿತ ಬಂಧನ, ನ್ಯಾಯಾಂಗಬಾಹಿರ ಹತ್ಯೆಗಳು, ಬಲವಂತದ ಕಣ್ಮರೆ, ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಶಿಕ್ಷೆ ಅನುಭವಿಸಿದ್ದಾರೆ “ಎಂದು ಅವರು ಆರೋಪಿಸಿದ್ದಾರೆ.

ಮುಂದುವರಿದು , “ಕಾಶ್ಮೀರ ವಿವಾದಕ್ಕೆ ನ್ಯಾಯಯುತ ಹಾಗೂ ಸೂಕ್ತ ಪರಿಹಾರದ ಅಗತ್ಯವಿದೆ. ಕಳೆದ ಎಂಟು ದಶಕಗಳಿಂದ ಕಾಶ್ಮೀರದ ಜನರು ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆಯಬೇಕಾದ ಮುಕ್ತ ಮತ್ತು ನಿಷ್ಪಕ್ಷಪಾತ ಜನಮತಗಣನೆಯ ಬದ್ಧತೆಯನ್ನು ಈಡೇರಿಸುವುದಕ್ಕಾಗಿ ಕಾಯುತ್ತಿದ್ದಾರೆ. ತಲೆಮಾರುಗಳಿಂದ ಅವರು ಅಕ್ರಮ ಆಕ್ರಮಣ, ಅನ್ಯಾಯದ ಬಂಧನ, ಹತ್ಯೆಗಳು ಮತ್ತು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ” ಎಂದು ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ.

ಭಾರತದ ಪ್ರತ್ಯುತ್ತರ

ಭಾರತಕ್ಕೆ ನೀಡಲಾದ ಪ್ರತ್ಯುತ್ತರದ ಹಕ್ಕು ಬಳಸಿ ಮಾತನಾಡಿದ ವಿಶ್ವಸಂಸ್ಥೆಯ ಭಾರತೀಯ ಖಾಯಂ ಪ್ರತಿನಿಧಿ ಕಚೇರಿಯ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್, ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿರಂತರವಾಗಿ ಪೋಷಿಸುತ್ತಿರುವ ಪಾಕಿಸ್ತಾನದ ನೀತಿಯನ್ನು ತೀವ್ರವಾಗಿ ಟೀಕಿಸಿದರು. ಇಂತಹ ಕೃತ್ಯಗಳಿಗೆ ಪಾಕಿಸ್ತಾನ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

“ಈ ಸಮಸ್ಯೆಯ ಮೂಲ ಇರುವುದು ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ. ಭಯೋತ್ಪಾದಕರಿಗೆ ಓಡಿಹೋಗಲು ಅಥವಾ ಅಡಗಿಕೊಳ್ಳಲು ಜಾಗವಿಲ್ಲ ಎಂಬುದನ್ನು ನಾವು ಕಳೆದ ವರ್ಷ ತೋರಿಸಿಕೊಟ್ಟಿದ್ದೇವೆ. ಭಯೋತ್ಪಾದನೆಯ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಚಲಾಯಿಸಿದ್ದೇವೆ ಮತ್ತು ಮುಂದೆಯೂ ಮುಂದುವರಿಸುತ್ತೇವೆ “ ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪಾಕಿಸ್ತಾನ ಮಂಡಿಸುತ್ತಿರುವ ವಾದಗಳನ್ನು ಭಾರತ ಹಿಂದಿನಿಂದಲೂ ಸಾರಾಸಗಟಾಗಿ ತಿರಸ್ಕರಿಸುತ್ತಾ ಬಂದಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಅಂಗವಾಗಿತ್ತು, ಇದೆ ಮತ್ತು ಮುಂದೆಯೂ ಇರಲಿದೆ ಎಂದು ಭಾರತ ಪುನರುಚ್ಚರಿಸಿದೆ.

ಸಿಂಧೂ ಜಲ ಒಪ್ಪಂದದ ಬಗ್ಗೆ ಶಹಬಾಝ್ ಶರೀಫ್ ಹೇಳಿಕೆ

ತಮ್ಮ ‌UNGA ಭಾಷಣದಲ್ಲಿ, ಸಿಂಧೂ ನದಿಯ ನೀರಿನಲ್ಲಿ ಪಾಕಿಸ್ತಾನದ ಪಾಲನ್ನು ತಡೆಯುವ, ಅಡ್ಡಿಪಡಿಸುವ ಅಥವಾ ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು “ಯುದ್ಧದ ಕೃತ್ಯ” ಎಂದು ಪರಿಗಣಿಸಲಾಗುವುದು ಎಂದು ಶಹಬಾಝ್ ಶರೀಫ್ ಎಚ್ಚರಿಸಿದರು. ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರವನ್ನೂ ಅವರು ಟೀಕಿಸಿದರು.

ಕಳೆದ ವರ್ಷ 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ಭಾರತ ಕೈಗೊಂಡ ರಾಜತಾಂತ್ರಿಕ ಹಾಗೂ ಆರ್ಥಿಕ ಕಠಿಣ ಕ್ರಮಗಳ ಭಾಗವಾಗಿ 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡಲು ನಿರ್ಧರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor