Photo Credit : x 

ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಂಗಿದ್ದ ನ್ಯೂಯಾರ್ಕ್ ನಗರದ ಹೋಟೆಲ್‍ನ ಹತ್ತಿರದಲ್ಲಿರುವ ಮ್ಯಾನ್‍ಹೋಲ್‍ನಿಂದ ಹೊರಬರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಈ ಘಟನೆಯು ಬುಧವಾರ ಬೆಳಿಗ್ಗೆ ಪಾರ್ಕ್ ಅವೆನ್ಯೂ ಮತ್ತು ಈಸ್ಟ್ 61ನೇ ರಸ್ತೆ ಬಳಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಮೂವರು ಮ್ಯಾನ್‍ಹೋಲ್‍ನಿಂದ ಹೊರಬಂದು ವಾಹನಗಳಲ್ಲಿ ತೆರಳುತ್ತಿದ್ದ ದೃಶ್ಯಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ಬಳಿಕ ಕೆವಿನ್ ರೋಡ್ರಿಗಸ್ ಮತ್ತು ಸ್ಯಾಮ್ಯುಯೆಲ್ ರೆವೆರಾನ್ ಎಂಬ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದ ನಂತರ ಬಿಡುಗಡೆ ಮಾಡಲಾಯಿತು. ಈ ಗುಂಪಿನಲ್ಲಿದ್ದ ಇನ್ನೊಬ್ಬ ವ್ಯಕ್ತಿಗಾಗಿ ಹುಡುಕಾಟ ಮುಂದುವರಿದಿದೆ.

ವಿಶ್ವಸಂಸ್ಥೆಯ ಮಹಾಸಭೆಗಾಗಿ ವಿಶ್ವ ನಾಯಕರು ನ್ಯೂಯಾರ್ಕ್‍ನಲ್ಲಿದ್ದ ಕಾರಣ, ಈ ಘಟನೆ ಆತಂಕಕ್ಕೆ ಕಾರಣವಾಯಿತು. ವಿಸ್ತೃತ ತನಿಖೆಯ ನಂತರ ಈ ಪ್ರದೇಶದಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ನ್ಯೂಯಾರ್ಕ್‍ನ ಭೂಗತ ಚರಂಡಿ ವ್ಯವಸ್ಥೆಯಲ್ಲಿ ಬೆಲೆಬಾಳುವ ವಸ್ತುಗಳು ಮತ್ತು ಲೋಹಗಳನ್ನು ಹುಡುಕುವ ಉದ್ದೇಶದಿಂದ ಈ ವ್ಯಕ್ತಿಗಳು ಚರಂಡಿಗೆ ಇಳಿದಿದ್ದರು. ಚರಂಡಿಗಳಲ್ಲಿ ಕೊಚ್ಚಿಹೋಗುವ ಆಭರಣಗಳು, ಚಿನ್ನ ಅಥವಾ ತಾಮ್ರದಂತಹ ಲೋಹಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಜನರು ಹೀಗೆ ಚರಂಡಿ ಪ್ರವೇಶಿಸುತ್ತಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಗೂ ಪ್ರಧಾನಿ ನೆತನ್ಯಾಹು ಅವರು ತಂಗಿದ್ದ ಹೋಟೆಲ್ ಅಥವಾ ವಿಶ್ವಸಂಸ್ಥೆಯ ಮಹಾಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor