ಕದನವಿರಾಮ ಮಧ್ಯಸ್ಥಿಕೆಗೆ ಅವಕಾಶ ನೀಡದ್ದಕ್ಕೆ ಭಾರತದ ಮೇಲೆ ಶೇ. 50ರಷ್ಟು ಸುಂಕ ಹೇರಿಕೆ: ಜೆಫ್ಪರೀಸ್ ವರದಿ
ವಾಶಿಂಗ್ಟನ್/ಹೊಸ ದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟಿನ ವೇಳೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವಕಾಶ ನೀಡದೆ ಇದ್ದುದರಿಂದ, ಭಾರತದ ಮೇಲೆ ಶೇ. 50ರಷ್ಟು ಸುಂಕ ವಿಧಿಸಲಾಗಿದೆ ಎಂದು ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಹಾಗೂ ಹಣಕಾಸು ಸೇವಾ ಕಂಪನಿ ಜೆಫ್ಫರೀಸ್ ವರದಿಯಲ್ಲಿ ಹೇಳಲಾಗಿದೆ.
ಡೊನಾಲ್ಡ್ ಟ್ರಂಪ್ ರ ಸ್ವಪ್ರತಿಷ್ಠೆಯಿಂದಾಗಿ ಇಷ್ಟು ಭಾರಿ ಪ್ರಮಾಣದ ಸುಂಕವನ್ನು ಹೇರಲಾಗಿದೆ ಹಾಗೂ ದಕ್ಷಿಣ ಏಶ್ಯದ ಎರಡು ಅಣ್ವಸ್ತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವ ಅವಕಾಶ ದೊರೆಯಲಿದೆ ಎಂದು ಟ್ರಂಪ್ ಭಾವಿಸಿದ್ದರು ಎಂದು ಈ ವರದಿಯಲ್ಲಿ ಹೇಳಲಾಗಿದೆ.
“ಮೂಲಭೂತವಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲೀನ ಹಗೆತನವನ್ನು ಅಂತ್ಯಗೊಳಿಸುವ ಪಾತ್ರವನ್ನು ನಿರ್ವಹಿಸಲು ತನಗೆ ಅವಕಾಶ ದೊರೆಯಲಿಲ್ಲ ಎಂಬ ಅಮೆರಿಕ ಅಧ್ಯಕ್ಷರ ಸ್ವಪ್ರತಿಷ್ಠೆಯಿಂದಾಗಿ ಈ ಪರಿಸ್ಥಿತಿ ಉದ್ಭವವಾಗಿದೆ” ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದೊಂದಿಗಿನ ಬಿಕ್ಕಟ್ಟಿನಲ್ಲಿ ಇತರ ದೇಶಗಳು ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತ ಪುನರುಚ್ಚರಿಸಿತ್ತು ಎನ್ನಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವೇರ್ಪಟ್ಟಿರುವುದೂ ಸೇರಿದಂತೆ ಜಗತ್ತಿನ ವಿವಿಧ ಬಿಕ್ಕಟ್ಟುಗಳನ್ನು ನಾನು ಅಂತ್ಯಗೊಳಿಸಿರುವುದರಿಂದ, ನನಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಶ್ವೇತ ಭವನ ಹಲವು ಬಾರಿ ಪ್ರತಿಪಾದಿಸಿತ್ತು. ಆದರೆ, ಅಮೆರಿಕದ ಮಧ್ಯಸ್ಥಿಕೆಯನ್ನು ನಿರಾಕರಿಸುವುದರಿಂದ, ದುಬಾರಿ ಆರ್ಥಿಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ತಿಳಿದಿದ್ದರೂ, ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಗೆ ಭಾರತ ಕೆಂಪು ನಿಶಾನೆ ತೋರಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಈ ವರದಿಯಲ್ಲಿ ಉಲ್ಲೇಖಿಸಲಾಗಿರುವ ಮತ್ತೊಂದು ಅಂಶ ಕೃಷಿ. ತಮ್ಮ ರೈತರ ಹಿತಾಸಕ್ತಿಯನ್ನು ಕಾಪಾಡಲು ಭಾರತದ ಯಾವ ಸರಕಾರವೂ ಈವರೆಗೆ ಕೃಷಿ ಉತ್ಪನ್ನಗಳ ಆಮದಿಗೆ ಸಮ್ಮತಿ ಸೂಚಿಸದೆ ಇರುವುದರಿಂದಲೂ ಈ ಭಾರಿ ಪ್ರಮಾಣದ ಸುಂಕವನ್ನು ಹೇರಲಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಸುಮಾರು 25 ಕೋಟಿ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಭಾರತದ ಶೇ. 40ರಷ್ಟು ಉದ್ಯೋಗಿಗಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಭಾರಿ ಪ್ರಮಾಣದ ಸುಂಕಗಳಿಗೆ ಪ್ರತಿಕ್ರಿಯಿಸಿರುವ ಭಾರತ, ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅನ್ಯಾಯ ಮತ್ತು ಅಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಭಾರತವನ್ನು ಹಿಂದೂಡುವುದರಿಂದ, ಭಾರತವು ಚೀನಾಗೆ ನಿಕಟವಾಗುವ ಅಪಾಯವಿದೆ. ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿರುವ ನೇರ ವೈಮಾನಿಕ ಸೇವೆಯನ್ನು ಎರಡೂ ದೇಶಗಳು ಸೆಪ್ಟೆಂಬರ್ ನಿಂದ ಪುನಾರಂಭಿಸುವ ಸಾಧ್ಯತೆ ಇದೆ ಎಂದೂ ಜೆಫ್ಫರೀಸ್ ವರದಿಯಲ್ಲಿ ಎಚ್ಚರಿಸಲಾಗಿದೆ.