Screengrab: X.com/@airlinevideos

ಲಾಸ್ ಏಂಜಲೀಸ್: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ 5.0 ತೀವ್ರತೆಯ ಭೂಕಂಪದ ಪರಿಣಾಮ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (LAX) ಇಳಿಯಲು ಮುಂದಾಗಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನದ ಇಳಿಯುವಿಕೆಯನ್ನು ಸ್ಥಗಿತಗೊಳಿಸಲಾಯಿತು. ಭೂಕಂಪದ ಮಾಹಿತಿ ಪಡೆದ ವಾಯು ಸಂಚಾರ ನಿಯಂತ್ರಕರು ವಿಮಾನವನ್ನು ಆಕಾಶದಲ್ಲೇ ಸುತ್ತುಹಾಕುವಂತೆ ಪೈಲಟ್‌ ಗಳಿಗೆ ಸೂಚಿಸಿದರು.

ವಿಮಾನ ನಿಲ್ದಾಣದ ಲೈವ್‌ಸ್ಟ್ರೀಮ್ ವೀಡಿಯೊದಲ್ಲಿ ಡೆಲ್ಟಾ ವಿಮಾನವೊಂದು ರನ್‌ವೇ ಸಮೀಪಿಸುತ್ತಿದ್ದಾಗ ಇಳಿಯುವಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿರುವುದು ಸೆರೆಯಾಗಿದೆ.

"ಡೆಲ್ಟಾ 1972, ಸುತ್ತುಹಾಕಿ. ಇಲ್ಲಿ ದೊಡ್ಡ ಭೂಕಂಪ ಸಂಭವಿಸುತ್ತಿದೆ" ಎಂದು ವಾಯು ಸಂಚಾರ ನಿಯಂತ್ರಕರು ಪೈಲಟ್‌ಗಳಿಗೆ ಸೂಚನೆ ನೀಡಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ.

ಲಾಸ್ ಏಂಜಲೀಸ್ ಡೌನ್‌ಟೌನ್‌ ನ ನೈಋತ್ಯದಲ್ಲಿರುವ ಕರಾವಳಿ ನಗರ ಮ್ಯಾನ್‌ಹ್ಯಾಟನ್ ಬೀಚ್‌ ನ ನೈಋತ್ಯಕ್ಕೆ ಸುಮಾರು 5 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗಳು ಅಥವಾ ಪ್ರಮುಖ ಕಟ್ಟಡಗಳಿಗೆ ಹಾನಿಯಾಗಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ ಎಂದು ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, 5.0 ತೀವ್ರತೆಯ ಭೂಕಂಪವು ದಕ್ಷಿಣ ಕ್ಯಾಲಿಫೋರ್ನಿಯಾದ ಬಹುತೇಕ ಭಾಗಗಳನ್ನು ನಡುಗಿಸಿದೆ.

ಆರಂಭಿಕ ಕಂಪನದ ಬಳಿಕ ಡಝನ್ಗಟ್ಟಲೆ ನಂತರದ ಕಂಪನಗಳು ಸಂಭವಿಸಿವೆ. ಇವುಗಳಲ್ಲಿ ಒಂದು ಕಂಪನವು ಪಸಾಡೆನಾದ ಐತಿಹಾಸಿಕ ರೋಸ್ ಬೌಲ್ ಕ್ರೀಡಾಂಗಣದಲ್ಲೂ ಅನುಭವಕ್ಕೆ ಬಂದಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (USC) ಮತ್ತು ಲಾಸ್ ಏಂಜಲೀಸ್‌ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (UCLA) ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಸಂಭವಿಸಿದ ಭೂಕಂಪದಿಂದ ಕ್ರೀಡಾಂಗಣದಲ್ಲಿ ಪತ್ರಕರ್ತರು ಕುಳಿತುಕೊಳ್ಳುವ ಕೊಠಡಿಯೂ ಕಂಪಿಸಿದೆ ಎಂದು ವರದಿಯಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಹಲವಾರು ಭೂವೈಜ್ಞಾನಿಕ ದೋಷ ರೇಖೆಗಳಿರುವುದರಿಂದ ಭೂಕಂಪಗಳು ಸಂಭವಿಸುವುದು ಸಾಮಾನ್ಯ. ಆದರೆ, ಬಹುತೇಕ ಕಂಪನಗಳು ಜನರಿಗೆ ಅನುಭವಕ್ಕೆ ಬರುವಷ್ಟು ತೀವ್ರವಾಗಿರುವುದಿಲ್ಲ. ಶನಿವಾರದ ಭೂಕಂಪವು ರಜಾ ವಾರಾಂತ್ಯದ ಸಂದರ್ಭದಲ್ಲಿ ಜನನಿಬಿಡ ದಕ್ಷಿಣ ಕ್ಯಾಲಿಫೋರ್ನಿಯಾದ ನಿವಾಸಿಗಳಲ್ಲಿ ಆತಂಕ ಮೂಡಿಸಿತು. 2014ರ ಬಳಿಕ ಈ ಪ್ರದೇಶದಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.