ರಾಡೋಮಿರ್ ಸೈಸಿಕ್ | Photo credit: X 

ಬೆಲ್‌ಗ್ರೇಡ್: ಸರ್ಬಿಯಾದಲ್ಲಿ ಡಿ.27ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ರಸಾಯನಶಾಸ್ತ್ರ ಪ್ರಾಧ್ಯಾಪಕ ರಾಡೋಮಿರ್ ಸೈಸಿಕ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ವಿದ್ಯಾರ್ಥಿ ಚಳುವಳಿ ಘೋಷಿಸಿದೆ.

ಅ. 25ರಂದು ನಡೆದ ಅವಧಿಗೂ ಮುನ್ನದ ಸಂಸತ್ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರ ಬಲಪಂಥೀಯ ಸೆರ್ಬಿಯನ್ ಪ್ರೋಗ್ರೆಸ್ಸಿವ್ ಪಾರ್ಟಿ (SNS)ಯನ್ನು ಸೋಲಿಸಿದ್ದ ವಿದ್ಯಾರ್ಥಿ ಚಳುವಳಿ, ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಪ್ರಧಾನಿಯಾಗುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ವುಸಿಕ್ ಸೆಪ್ಟೆಂಬರ್‌ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಪಕ್ಷವು 14 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ವುಸಿಕ್ ಅಧ್ಯಕ್ಷರಾಗಿ ಸುಮಾರು ಎರಡು ಐದು ವರ್ಷಗಳ ಅವಧಿಗಳನ್ನು ಪೂರ್ಣಗೊಳಿಸಿದ್ದರು. ಕಾನೂನಿನ ಪ್ರಕಾರ ಮೂರನೇ ಅವಧಿಗೆ ಸ್ಪರ್ಧಿಸಲು ಅವರಿಗೆ ಅವಕಾಶವಿರಲಿಲ್ಲ.

ವಿದ್ಯಾರ್ಥಿ ಚಳುವಳಿಯ ಅಭ್ಯರ್ಥಿಯ ವಿರುದ್ಧ SNS ಸೋಲುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯನ್ನು ತಮ್ಮ ಪಕ್ಷ ಬಹಿಷ್ಕರಿಸಬಹುದು ಎಂದು ವುಸಿಕ್ ಸೂಚಿಸಿದ್ದಾರೆ. ಇತರ ಯಾವ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಸರ್ಬಿಯಾದಲ್ಲಿ ಅಧ್ಯಕ್ಷ ಸ್ಥಾನವು ಮುಖ್ಯವಾಗಿ ಸಾಂವಿಧಾನಿಕ ಮತ್ತು ಔಪಚಾರಿಕ ಜವಾಬ್ದಾರಿಗಳನ್ನು ಹೊಂದಿದೆ. ಸಂವಿಧಾನದ ಪ್ರಕಾರ ಅಧ್ಯಕ್ಷರು ಸೇನಾಪಡೆಯ ಕಮಾಂಡರ್ ಆಗಿರುತ್ತಾರೆ ಮತ್ತು ವಿದೇಶಾಂಗ ನೀತಿಯ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ, ಸರಕಾರದ ದೈನಂದಿನ ಆಡಳಿತ ನಡೆಸುವ ಕಾರ್ಯಾಂಗದ ಅಧಿಕಾರ ಅವರಿಗಿರುವುದಿಲ್ಲ.

ಆದರೆ, ಅಧಿಕಾರದಲ್ಲಿದ್ದಾಗ ವುಸಿಕ್ ಅವರು ಅಧ್ಯಕ್ಷ ಹುದ್ದೆಯಲ್ಲೇ ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದ್ದರು. ಇದರಿಂದಾಗಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ ಎಂಬ ಆರೋಪಗಳನ್ನು ಎದುರಿಸಿದ್ದರು. ಪ್ರಮುಖ ಸರಕಾರಿ ನಿರ್ಧಾರಗಳು ಮತ್ತು ನೀತಿಗಳನ್ನು ನಿಯಮಿತವಾಗಿ ಪ್ರಕಟಿಸುತ್ತಿದ್ದ ಅವರು, ಸರಕಾರಿ ಸಭೆಗಳ ಅಧ್ಯಕ್ಷತೆಯನ್ನೂ ವಹಿಸಿಕೊಳ್ಳುತ್ತಿದ್ದರು.

65 ವರ್ಷದ ಸೈಸಿಕ್, "ಅಧ್ಯಕ್ಷ ಹುದ್ದೆಯ ಘನತೆಯನ್ನು ಮರುಸ್ಥಾಪಿಸುವ ಸಮಯ ಬಂದಿದೆ" ಎಂದು ಹೇಳಿದ್ದಾರೆ. ವುಸಿಕ್ ಅಧಿಕಾರದಲ್ಲಿದ್ದಾಗ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರು ಎಂದು ಆರೋಪಿಸಿದ ಅವರು, "ನಾನು ಜನಾದೇಶಕ್ಕೆ ಬದ್ಧನಾಗಿರುತ್ತೇನೆ ಮತ್ತು ನನ್ನ ನಿರ್ಧಾರಗಳನ್ನು ಸಾರ್ವಜನಿಕವಾಗಿ ವಿವರಿಸುತ್ತೇನೆ" ಎಂದು ಭರವಸೆ ನೀಡಿದ್ದಾರೆ.

ಉತ್ತರ ಸರ್ಬಿಯಾದ ನೋವಿ ಸಾದ್ (Novi Sad) ನಗರದಲ್ಲಿ ರೈಲು ನಿಲ್ದಾಣದ ಮೇಲ್ಛಾವಣಿ ಕುಸಿದು 16 ಮಂದಿ ಮೃತಪಟ್ಟ ದುರಂತದ ಬಳಿಕ ವಿದ್ಯಾರ್ಥಿ ಚಳುವಳಿ ಎರಡು ವರ್ಷಗಳ ಕಾಲ ದೇಶದಾದ್ಯಂತ ಪ್ರತಿಭಟನೆಗಳನ್ನು ಮುನ್ನಡೆಸಿತ್ತು. ರೈಲು ನಿಲ್ದಾಣದ ಕಟ್ಟಡ ನವೀಕರಣದ ವೇಳೆ ನಡೆದ ವ್ಯಾಪಕ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಅನೇಕರು ಆರೋಪಿಸಿದ್ದರು. ಯುವಜನರ ನೇತೃತ್ವದ ಈ ಚಳುವಳಿ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು.

ಬೆಲ್‌ಗ್ರೇಡ್ ವಿಶ್ವವಿದ್ಯಾಲಯದಲ್ಲಿ ಸಾವಯವ ರಸಾಯನಶಾಸ್ತ್ರ ಬೋಧಿಸುವ ಸೈಸಿಕ್, ವಿದ್ಯಾರ್ಥಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

"ಕಳೆದ ಹತ್ತು ವರ್ಷಗಳಲ್ಲಿ ಕಾನೂನು ವ್ಯವಸ್ಥೆ ದುರ್ಬಲಗೊಂಡಿದೆ. ಭ್ರಷ್ಟಾಚಾರ ಮತ್ತು ದ್ವೇಷ ಹರಡುವ ಮಾತುಗಳು ಹೆಚ್ಚಾಗಿವೆ" ಎಂದು ಅವರು ಹೇಳಿದ್ದಾರೆ.

"ಅಧಿಕಾರದಿಂದ ನಿರ್ಗಮಿಸುತ್ತಿರುವ ಆಡಳಿತವು ಇನ್ನೂ ನಮ್ಮ ರಾಜ್ಯವನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿದೆ. ಇದನ್ನು ತಡೆಯಲು ನಾವು ಸರಕಾರಿ ಸಂಸ್ಥೆಗಳನ್ನು ಮರುಸ್ಥಾಪಿಸಬೇಕಾಗಿದೆ" ಎಂದು ಅವರು ತಿಳಿಸಿದ್ದಾರೆ.

ಸಂಸತ್ ಚುನಾವಣೆಯಲ್ಲಿ ಸೋತ ಬಳಿಕ ವುಸಿಕ್ ಅವರು, ಚುನಾವಣೆಯಲ್ಲಿ ಗೆದ್ದಿರುವ ವಿದ್ಯಾರ್ಥಿ ಚಳುವಳಿ 'ಕ್ರಾಂತಿಕಾರಿ ಭಯೋತ್ಪಾದನೆ'ಯನ್ನು ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಹೊಸ ಸರಕಾರ ರಚನೆಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೆ ವುಸಿಕ್ ನೇತೃತ್ವದ ಹಾಲಿ ಸರಕಾರವೇ ಆಡಳಿತ ಮುಂದುವರಿಸಲಿದೆ.

ಈ ನಡುವೆ, ವುಸಿಕ್ ಆಡಳಿತದ ಅವಧಿಯಲ್ಲಿ ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶಂಕಿಸಲಾದ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಬಂಧನ ಪ್ರಕರಣಗಳು ಹೆಚ್ಚಾಗಿವೆ.

ತಮ್ಮ ಆಡಳಿತದ ಅವಧಿಯಲ್ಲಿ ವುಸಿಕ್ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ಅಧಿಕಾರದ ಎಲ್ಲ ಹಂತಗಳ ಮೇಲೂ ನಿಯಂತ್ರಣ ಸಾಧಿಸಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಘೋಷವಾಕ್ಯವು 'ವಿದ್ಯಾರ್ಥಿಗಳು ಮತ್ತೆ ಗೆಲ್ಲುತ್ತಾರೆ' (Students win again) ಎಂಬುದಾಗಿರಲಿದೆ ಎಂದು ವಿದ್ಯಾರ್ಥಿ ಚಳುವಳಿ ತಿಳಿಸಿದೆ.

ಸೈಸಿಕ್ ಅವರು ಸರ್ಬಿಯಾದ ಕಲೆ ಮತ್ತು ವಿಜ್ಞಾನ ಅಕಾಡೆಮಿಯ ಸದಸ್ಯರಾಗಿದ್ದಾರೆ. ಅಕ್ಟೋಬರ್‌ ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ 'ವಿದ್ಯಾರ್ಥಿಗಳ ಪಟ್ಟಿ'ಯ (Students List) ಭಾಗವಾಗಿದ್ದ 250 ಅಭ್ಯರ್ಥಿಗಳಲ್ಲಿ ಅವರೂ ಒಬ್ಬರಾಗಿದ್ದರು. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳಿಗೆ ಸೈಸಿಕ್ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ರ‍್ಯಾಲಿಗಳಲ್ಲಿ ಹಲವು ಬಾರಿ ಮಾತನಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.