Photo Credit : X 

ಟೆಲ್ ಅವೀವ್: ಟೆಲ್ ಅವೀವ್‌ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ (FZ1073)ದಲ್ಲಿ ಕ್ಯಾಪ್ಟನ್ ಮತ್ತು ಸಹಪೈಲಟ್ ನಡುವೆ ನಡೆದ ಹಿಂಸಾತ್ಮಕ ಜಗಳವು ವಿಮಾನ ಅಪಹರಣದ ಭೀತಿ ಹುಟ್ಟುಹಾಕಿತು. ಘಟನೆಯ ನಿಖರ ವಿವರಗಳು ಇನ್ನೂ ತನಿಖೆಯಲ್ಲಿದ್ದು, ಒಬ್ಬ ಪೈಲಟ್ ವಿಮಾನವನ್ನು ಪತನಗೊಳಿಸಲು ಯತ್ನಿಸಿದಾಗ ಮತ್ತೊಬ್ಬ ಪೈಲಟ್ ಪ್ರಯಾಣಿಕರ ನೆರವಿನಿಂದ ಅವರನ್ನು ತಡೆದಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಸುಮಾರು 180 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಬಳಿಕ ಉತ್ತರ ಸೌದಿ ಅರೇಬಿಯದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಘಟನೆ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಸೌದಿ ಅರೇಬಿಯ ತಮ್ಮ ಯುದ್ಧ ವಿಮಾನಗಳನ್ನು ಸನ್ನದ್ಧಗೊಳಿಸಿದ್ದವು.

ದುಬೈ–ಟೆಲ್ ಅವೀವ್ ವಿಮಾನವು ಆರಂಭದಲ್ಲಿ ‘7700’ ತುರ್ತು ಸಂಕೇತ ರವಾನಿಸಿತು. ಇದು ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಸೂಚಿಸುವ ಸಂಕೇತ. ಕೆಲವೇ ಸೆಕೆಂಡುಗಳ ಬಳಿಕ ‘7500’ ಸಂಕೇತ ರವಾನಿಸಿದ್ದು, ಇದು ವಿಮಾನ ಅಪಹರಣದ ಸಾಧ್ಯತೆಯನ್ನು ಸೂಚಿಸುತ್ತದೆ.

ವಿಮಾನ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ವಿಮಾನವು ಎರಡು ನಿಮಿಷಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 34,000 ಅಡಿ ಎತ್ತರದಿಂದ ಸುಮಾರು 16,600 ಅಡಿಗೆ ಇಳಿದಿದೆ. ಅಂದರೆ, ಸುಮಾರು 17,400 ಅಡಿಗಳಷ್ಟು ಎತ್ತರವನ್ನು ಅತಿ ಕಡಿಮೆ ಅವಧಿಯಲ್ಲಿ ಕಳೆದುಕೊಂಡಿದೆ.

ಕಾಕ್‌ಪಿಟ್‌ನಲ್ಲಿ ಜಗಳ

ಕ್ಯಾಪ್ಟನ್ ಮತ್ತು ಸಹಪೈಲಟ್ ನಡುವೆ ಕಾಕ್‌ಪಿಟ್‌ನಲ್ಲಿ ನಡೆದ ಜಗಳವೇ ತುರ್ತು ಸಂಕೇತ ಸಕ್ರಿಯಗೊಳ್ಳಲು ಕಾರಣವಾಯಿತು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಚಾಕುವಿನಿಂದ ಇರಿದ ಪೈಲಟ್ ಗಲ್ಫ್ ರಾಷ್ಟ್ರವೊಂದರ ಪ್ರಜೆ ಎಂದು ಶಂಕಿಸಲಾಗಿದೆ.

ಸ್ಥಳೀಯ ಇಸ್ರೇಲಿ ಮಾಧ್ಯಮವೊಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ, ಪೈಲಟ್‌ ಗಳಲ್ಲಿ ಒಬ್ಬರು ಅಸಹಜವಾಗಿ ವರ್ತಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿ ಮಾಡಿದೆ. ಇಸ್ರೇಲಿ ಪ್ರಯಾಣಿಕರೊಬ್ಬರು ಕಾಕ್‌ಪಿಟ್‌ ಗೆ ಪ್ರವೇಶಿಸಿ, ಅಸಹಜವಾಗಿ ವರ್ತಿಸುತ್ತಿದ್ದ ಪೈಲಟ್‌ನ್ನು ನಿಯಂತ್ರಿಸಲು ಸಹಪೈಲಟ್‌ಗೆ ನೆರವಾದರು ಎಂದು ವರದಿ ತಿಳಿಸಿದೆ.

ಮತ್ತೊಂದು ವರದಿ ಪ್ರಕಾರ, ಪೈಲಟ್‌ ಗಳಲ್ಲಿ ಒಬ್ಬರು ವಿಮಾನವನ್ನು ನೆಲದತ್ತ ತಿರುಗಿಸಿ ಪತನಗೊಳಿಸಲು ಯತ್ನಿಸಿದ ಬಳಿಕ ಜಗಳ ಆರಂಭವಾಯಿತು. ಪ್ರಯಾಣಿಕರ ನೆರವಿನಿಂದ ಮತ್ತೊಬ್ಬ ಪೈಲಟ್ ಅವರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಮಿರಿಯಮ್ ಎಂಬ ಪ್ರಯಾಣಿಕರು ಕಾಕ್‌ಪಿಟ್‌ ನಿಂದ ಕಿರುಚಾಟದ ಶಬ್ದ ಕೇಳಿದ್ದಾಗಿ ತಿಳಿಸಿದ್ದಾರೆ. ಕ್ಯಾಬಿನ್ ಬಾಗಿಲು ತೆರೆದಾಗ, ಪೈಲಟ್‌ ಗಳಲ್ಲಿ ಒಬ್ಬರು ಗಾಯಗೊಂಡು ಕೈಯಲ್ಲಿ ಮಡಿಸುವ ಚಾಕು ಹಿಡಿದ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ. ಕಾಕ್‌ಪಿಟ್‌ ನಲ್ಲಿ ‘ಎಲ್ಲೆಡೆ ರಕ್ತ’ ಇತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್ ಈ ಘಟನೆಯನ್ನು ಪೂರ್ಣ ಪ್ರಮಾಣದ ‘ಭಯೋತ್ಪಾದಕ ದಾಳಿ’ ಎಂದು ಪರಿಗಣಿಸುತ್ತಿದೆ. ಇಸ್ರೇಲಿ ವಿಶ್ಲೇಷಕ ಮತ್ತು ಪತ್ರಕರ್ತ ಅಮಿತ್ ಸೇಗಲ್, ಸಹಪೈಲಟ್ ಕ್ಯಾಪ್ಟನ್‌ಗೆ ಪದೇ ಪದೇ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಿದ್ದಾರೆ. ಗದ್ದಲದ ನಡುವೆ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ಸಹಪೈಲಟ್‌ನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವೊಂದು ಸೌದಿ ಅರೇಬಿಯಾದಲ್ಲಿ ಇಳಿದಿರುವುದು ಅಪರೂಪದ ಬೆಳವಣಿಗೆಯಾಗಿದೆ. ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲ. ಹೀಗಾಗಿ, ಇಸ್ರೇಲ್‌ ಗೆ ತೆರಳುತ್ತಿದ್ದ ವಿಮಾನ ಸೌದಿ ನೆಲದಲ್ಲಿ ಇಳಿದಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor