×
Ad

ಭೂಮಿಯಿಂದ 400 ಕಿ.ಮೀ ದೂರದ ಕಕ್ಷೆಯಿಂದ ಮಕ್ಕಾದ ಪ್ರಕಾಶಮಾನ ದೃಶ್ಯ ಸೆರೆಹಿಡಿದ ಗಗನಯಾತ್ರಿ; ಫೋಟೋ ವೈರಲ್

Update: 2025-12-04 16:53 IST

Photo: X/@astro_Pettit

ರಿಯಾದ್: ಸೌದಿ ಅರೇಬಿಯಾದ ಮಕ್ಕಾದ ಕಅಬಾ ಬಾಹ್ಯಾಕಾಶದಿಂದಲೂ ಪ್ರಕಾಶಮಾನ ಕೇಂದ್ರಬಿಂದುವಾಗಿ ಗೋಚರಿಸಿರುತ್ತಿರುವುದು ಅಚ್ಚರಿ ಮೂಡಿಸಿದೆ. ನಾಸಾ ಗಗನಯಾತ್ರಿ ಡಾನ್ ಪೆಟ್ಟಿಟ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಹಿಂತಿರುಗಿದ ನಂತರ ಹಂಚಿಕೊಂಡಿರುವ ಕಕ್ಷೀಯ ಛಾಯಾಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಎಂದು Times of India ವರದಿ ಮಾಡಿದೆ.

ಎಕ್ಸ್‌ನಲ್ಲಿ ಡಾನ್‌ ಪೆಟ್ಟಿಟ್ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ, “ಸೌದಿ ಅರೇಬಿಯಾದ ಮಕ್ಕಾದ ಕಕ್ಷೀಯ ನೋಟ. ಮಧ್ಯದಲ್ಲಿರುವ ಪ್ರಕಾಶಮಾನ ಪ್ರದೇಶ, ಕಅಬಾವು ಬಾಹ್ಯಾಕಾಶದಿಂದಲೂ ಸ್ಪಷ್ಟವಾಗಿ ಗೋಚರಿಸುತ್ತದೆ,” ಎಂದು ತಿಳಿಸಿದ್ದಾರೆ.

ಪೆಟ್ಟಿಟ್ ಅವರು 2024 ಸೆಪ್ಟೆಂಬರ್‌ ರಿಂದ 2025 ಏಪ್ರಿಲ್‌ವರೆಗೆ ನಡೆದ ತಮ್ಮ ನಾಲ್ಕನೇ ISS ಮಿಷನ್ ಸಂದರ್ಭದಲ್ಲಿ, ನಿಲ್ದಾಣದ ಕುಪೋಲಾ ವಿಭಾಗದಿಂದ ಹೆಚ್ಚಿನ ರೆಸಲ್ಯೂಶನ್ ನಿಕಾನ್ ಕ್ಯಾಮೆರಾ ಬಳಸಿ ದೃಶ್ಯವನ್ನು ಸೆರೆಹಿಡಿದರು.

ಚಿತ್ರವು ಬೆಟ್ಟಗಳ ನಡುವೆ ವಿಸ್ತರಿಸಿರುವ ಮೆಕ್ಕಾದ ನಗರವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅದರ ಮಧ್ಯದಲ್ಲಿ ಮಸ್ಜಿದ್ ಉಲ್ ಹರಮ್ ಮತ್ತು ಕಪ್ಪು ಕಿಸ್ವಾ ಹೊದಿಸಿದ ಕಅಬಾ, ಮಸೀದಿಯ ನಿರಂತರ ಬೆಳಕು ಹಾಗೂ ಸೂರ್ಯಕಿರಣಗಳ ಪ್ರತಿಫಲನದಿಂದ ಗೋಚರಿಸುವ ಪ್ರಕಾಶದ ಬಿಂದಿಯಾಗಿ ಕಾಣಿಸುತ್ತದೆ.

ಬಾಹ್ಯಾಕಾಶದಿಂದ ನೋಡಿದಾಗ, ಮಕ್ಕಾದಂತಹ ಮಹಾನಗರಗಳು ಲಕ್ಷಾಂತರ LED ಮತ್ತು ಸೋಡಿಯಂ ದೀಪಗಳಿಂದ ಉಂಟಾಗುವ ಬೆಳಕಿನಿಂದ ಹೊಳೆಯುವ ಬೆಳಕಿನ ಗುಚ್ಛಗಳಂತೆ ಕಾಣುತ್ತವೆ. ಕಅಬಾ ಇರುವ ಪ್ರಾಂತ್ಯದಲ್ಲಿ ಮಸೀದಿಯ 24x7 ಬೆಳಕು ವ್ಯವಸ್ಥೆ ತೀವ್ರವಾಗಿರುವುದರಿಂದ ಅದು ವಿಶೇಷವಾಗಿ ಪ್ರಾಮುಖ್ಯತೆಯಿಂದ ಗೋಚರಿಸುತ್ತದೆ.

ಪ್ರತಿಗಂಟೆಗೆ 28,000 ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸುತ್ತುವ ISS, ಅತ್ಯಲ್ಪ ಸಮಯದಲ್ಲೇ ನಗರಗಳ ಬೆಳಕು ವಿನ್ಯಾಸಗಳನ್ನು ಸೆರೆಹಿಡಿಯುತ್ತದೆ. ಛಾಯಾಗ್ರಹಣದಲ್ಲಿ ಪರಿಣಿತಿ ಹೊಂದಿರುವ ಪೆಟ್ಟಿಟ್, ಪರ್ವತ ಮಾರ್ಗಗಳು, ನಗರ ವಿನ್ಯಾಸ ಮತ್ತು ಬೆಳಕು ಹರಡುವಿಕೆಗಳವರೆಗೆ ಅತ್ಯಂತ ತೀಕ್ಷ್ಣವಾದ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ.

ಅರೋರಾಗಳು, ನಗರಗಳ ಬೆಳಕು ವಿನ್ಯಾಸಗಳು, ಮತ್ತು ಕಾಸ್ಮಿಕ್ ಘಟನೆಗಳನ್ನು ಸೆರೆಹಿಡಿಯುವಲ್ಲಿ ಖ್ಯಾತಿ ಹೊಂದಿರುವ ಪೆಟ್ಟಿಟ್ ಅವರ ಇತ್ತೀಚಿನ ಮಕ್ಕಾದ ಚಿತ್ರವು, ಭೂಮಿಯ ಆಧ್ಯಾತ್ಮಿಕ ತಾಣಗಳು ಬಾಹ್ಯಾಕಾಶಕ್ಕೂ ಸ್ಪಷ್ಟವಾಗಿ ಗುರುತಿಸಿಕೊಳ್ಳುವ ಸಾಮರ್ಥ್ಯವಿರುವುದನ್ನು ಮತ್ತೊಮ್ಮೆ ದೃಢಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News