ಅಫ್ಘಾನ್ ಮೂಲದ ಮಗುವನ್ನು ವಿಮಾನ ನಿಲ್ದಾಣದಲ್ಲಿ ನೆಲಕ್ಕೆ ಬಡಿದು ಕ್ರೂರವಾಗಿ ಹಲ್ಲೆ ನಡೆಸಿದ ಬೆಲರೂಸಿಯನ್ ಪ್ರಜೆ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
Screengrab: X
ಮಾಸ್ಕೋ: ರಷ್ಯಾದ ಮಾಸ್ಕೋ ಶೆರೆಮೆಟಿಯೆವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ತಿಂಗಳ ಅಫ್ಘಾನಿಸ್ತಾನ ಮೂಲದ ಮಗುವನ್ನು ನೆಲಕ್ಕೆ ಬಡಿದು ಭೀಕರವಾಗಿ ಹಲ್ಲೆ ನಡೆಸಿದ ಬೆಲರೂಸಿಯನ್ ಪ್ರಜೆಯ ಮೇಲೆ ಕೊಲೆ ಯತ್ನಕ್ಕೆ ಸಂಬಂಧಿಸಿ ರಷ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇರಾನ್‌ನಲ್ಲಿ ಸಂಘರ್ಷದಿಂದ ತನ್ನ ಗರ್ಭಿಣಿ ತಾಯಿ ಸಹರ್ ಹಜಿಝಾದಾ ಜೊತೆ ಪಲಾಯನ ಮಾಡಿದ್ದ ಯಾಝ್ದಾನ್ ಎಂಬ ಮಗುವನ್ನು ಆರೋಪಿ ಹಿಂಸಾತ್ಮಕವಾಗಿ ನೆಲಕ್ಕೆ ಹೊಡೆದುರುಳಿಸಿದ್ದಾನೆ. ಆಘಾತಕಾರಿ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾಳಿಕೋರನನ್ನು ಬೆಲಾರಸ್‌ನ ವ್ಲಾಡಿಮಿರ್ ವಿಟ್ಕೋವ್(31) ಎಂದು ಗುರುತಿಸಲಾಗಿದೆ. ವಿಟ್ಕೋವ್ ಶೆರೆಮೆಟಿಯೆವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಟ್ಕೇಸ್‌ವೊಂದರ ಪಕ್ಕದಲ್ಲಿ ನಿಂತಿದ್ದ ಮಗುವನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿಯುತ್ತಿರುವುದು ನಂತರ ಅಲ್ಲಿದ್ದವರು ಮಗುವನ್ನು ಎತ್ತಿಕೊಳ್ಳುವುದು ವೀಡಿಯೊದಲ್ಲಿ ಕಂಡು ಬಂದಿದೆ. ಘಟನೆಯಲ್ಲಿ ಯಾಝ್ದಾನ್ ತಲೆಬುರುಡೆ ಮತ್ತು ಬೆನ್ನು ಮೂಳೆ ಮುರಿತಕ್ಕೊಳಗಾಗಿದೆ. ಆಂತರಿಕ ರಸ್ತಸ್ರಾವದಿಂದ ಮಗುವಿನ ಸ್ಥಿತಿ ಗಂಭೀರವಾಗಿದೆ.
ಆರೋಪಿಯ ವಿರುದ್ಧ ಕೊಲೆಯತ್ನ ಪ್ರಕರಣವನ್ನು ದಾಖಲಿಸಿಕೊಂಡಿರುವ ರಷ್ಯಾದ ಅಧಿಕಾರಿಗಳು, ಜನಾಂಗೀಯ ದ್ವೇಷ ಮತ್ತು ಆರೋಪಿ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ರಷ್ಯಾದಲ್ಲಿನ ಇರಾನಿನ ರಾಯಭಾರಿ ಕಝೆಮ್ ಜಲಾಲಿ ಈ ಘಟನೆ ಖಂಡಿಸಿದ್ದಾರೆ. ಇದೊಂದು ಅಮಾನವೀಯ ಘಟನೆ. ಈ ಕುರಿತು ತನಿಖೆಗೆ ರಷ್ಯಾದ ಅಧಿಕಾರಿಗಳನ್ನು ಸಂಪರ್ಕಿಸಿರುವುದಾಗಿ ಅವರು ಹೇಳಿದ್ದಾರೆ.