ಚಿಕಾಗೋದಲ್ಲಿ ನ್ಯಾಷನಲ್ ಗಾರ್ಡ್ ನಿಯೋಜನೆ: ಟ್ರಂಪ್ ಕೋರಿಕೆ ತಿರಸ್ಕರಿಸಿದ ಅಮೆರಿಕದ ಉನ್ನತ ನ್ಯಾಯಾಲಯ
ಡೊನಾಲ್ಡ್ ಟ್ರಂಪ್ | Photo Credit ;PTI
ವಾಷಿಂಗ್ಟನ್, ಡಿ.24: ಇಲಿನಾಯ್ಸ್ ರಾಜ್ಯದ ಚಿಕಾಗೋ ನಗರದಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ ಸೇವೆ(ಐಸಿಇ)ಯ ಏಜೆಂಟರ ಭದ್ರತೆಗೆ ನ್ಯಾಷನಲ್ ಗಾರ್ಡ್ ತುಕಡಿಯನ್ನು ನಿಯೋಜಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದ್ದು, ವಲಸೆ ವಿಚಾರದಲ್ಲಿ ಶ್ವೇತಭವನಕ್ಕೆ ಭಾರೀ ಹಿನ್ನಡೆಯಾಗಿದೆ.
ಈ ಪ್ರಾಥಮಿಕ ಹಂತದಲ್ಲಿ, ಇಲಿನಾಯ್ಸ್ನಲ್ಲಿ ಕಾನೂನುಗಳನ್ನು ಕಾರ್ಯಗತಗೊಳಿಸಲು ಮಿಲಿಟರಿಯನ್ನು ಅನುಮತಿಸುವ ಅಧಿಕಾರದ ಮೂಲವನ್ನು ಗುರುತಿಸಲು ಸರಕಾರ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು ಚಿಕಾಗೋ ನಗರದಲ್ಲಿ ನ್ಯಾಷನಲ್ ಗಾರ್ಡ್ ತುಕಡಿಯನ್ನು ನಿಯೋಜಿಸುವುದನ್ನು ನಿಷೇಧಿಸಿ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ನಿಯಮಿತ ಪಡೆಗಳೊಂದಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಕಾನೂನುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದಾಗ ಅಧ್ಯಕ್ಷರು ನ್ಯಾಷನಲ್ ಗಾರ್ಡ್ ಅನ್ನು ನಿಯೋಜಿಸಬಹುದು ಎಂಬ ಅಮೆರಿಕದ ಫೆಡರಲ್ ಕಾನೂನನ್ನು ಸುಪ್ರೀಂಕೋರ್ಟ್ ನ 9 ಸದಸ್ಯರ ನ್ಯಾಯಪೀಠ 6-3 ಬಹುಮತದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಅವರ ವಲಸೆ ಕಾನೂನುಗಳನ್ನು ಜಾರಿಗೊಳಿಸಲು, ಫೆಡರಲ್ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಅಮೆರಿಕದ ಸಾರ್ವಜನಿಕರನ್ನು ರಕ್ಷಿಸಲು ಟ್ರಂಪ್ ನಡೆಸುತ್ತಿರುವ ಪ್ರಯತ್ನಗಳನ್ನು ಈ ತೀರ್ಪು ತಡೆಯುವುದಿಲ್ಲ ಎಂದು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಹೇಳಿದ್ದಾರೆ.