ಅಕ್ರಮ ವಲಸಿಗರಿಗೆ ಕೈಕೋಳ ತೊಡಿಸಿ, ಅಮೆರಿಕದಿಂದ ಗಡಿಪಾರು ಮಾಡುತ್ತಿರುವ ವೀಡಿಯೊ ಹಂಚಿಕೊಂಡ ಶ್ವೇತ ಭವನ
ವಾಶಿಂಗ್ಟನ್: ಇಲ್ಲಿನ ಸಿಯಾಟಲ್ ವಿಮಾನ ನಿಲ್ದಾಣದಿಂದ ಅಕ್ರಮ ಹಾಗೂ ದಾಖಲೆರಹಿತ ವಲಸಿಗರಿಗೆ ಕೈಕೋಳ ತೊಡಿಸಿ ಗಡಿಪಾರು ಮಾಡುತ್ತಿರುವ ವೀಡಿಯೊ ಹಂಚಿಕೊಂಡಿರುವ ಶ್ವೇತ ಭವನ, ಅದಕ್ಕೆ “ಅನ್ಯಗ್ರಹದ ಜೀವಿಗಳ ಗಡಿಪಾರು ವಿಮಾನ” ಎಂಬ ವ್ಯಂಗ್ಯಭರಿತ ಶೀರ್ಷಿಕೆ ನೀಡಿದೆ.
ಈ ವೀಡಿಯೊವನ್ನು ಮರು ಟ್ವೀಟ್ ಮಾಡಿರುವ ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್, “ಹ್ಹ..ಹ್ಹ.. ವಾವ್” ಎಂದು ಉದ್ಗರಿಸಿದ್ದಾರೆ.
ಹೊಸದಾಗಿ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಅಮೆರಿಕ ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರವು ಅಕ್ರಮ ಹಾಗೂ ದಾಖಲೆರಹಿತ ವಲಸಿಗರನ್ನು ಅವರ ಸ್ವದೇಶಗಳಿಗೆ ವಾಪಸು ಕಳಿಸಲು ಸಿದ್ಧಗೊಳಿಸುತ್ತಿರುವ ದೃಶ್ಯ ದಾಖಲಾಗಿದೆ. ಪ್ರಾಧಿಕಾರದ ವಿಮಾನ ಕಾರ್ಯಾಚರಣೆ ಘಟಕವು ಅಕ್ರಮ ವಲಸಿಗರನ್ನು ವಾಣಿಜ್ಯ ವಿಮಾನಗಳು ಹಾಗೂ ಚಾರ್ಟರ್ಡ್ ವಿಮಾನಗಳಲ್ಲಿ ಸ್ಥಳಾಂತರಿಸುವ ಹಾಗೂ ಹೊರದೂಡುವ ಕೆಲಸಕ್ಕೆ ನೆರವು ನೀಡುತ್ತಿದೆ.
ಇತ್ತೀಚೆಗೆ ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರದ ವಿಮಾನ ಕಾರ್ಯಾಚರಣೆ ಘಟಕವು ಸಿಯಾಟಲ್ ವಿಮಾನ ನಿಲ್ದಾಣದಿಂದ ದಾಖಲೆರಹಿತ ವಲಸಿಗರ ಗುಂಪೊಂದನ್ನು ಅವರ ಸ್ವದೇಶಗಳಿಗೆ ವಾಪಸು ಕಳಿಸಿತ್ತು. ಈ ಕಾರ್ಯಾಚರಣೆಯ ವೀಡಿಯೊವನ್ನು ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರ ಹಂಚಿಕೊಂಡಿದೆ.
ಈ ವೀಡಿಯೊ ವಲಸೆ ಮತ್ತು ಸುಂಕ ಜಾರಿ ಪ್ರಾಧಿಕಾರ ಹಾಗೂ ಹೊರದೂಡುವ ಕಾರ್ಯಾಚರಣೆ ಏಜೆಂಟ್ ಗಳು ವಿಮಾನ ನಿಲ್ದಾಣದ ಟಾರ್ಮ್ಯಾಕ್ ಮೇಲೆ ನಿಂತಿರುವುದು ಹಾಗೂ ಉಳಿದ ಏಜೆಂಟ್ ಗಳು ಕೋಳಗಳಿಗೆ ಹೊಂದಿಕೊಂಡಿರುವ ಸರಪಣಿಗಳನ್ನು ಪ್ಲಾಸ್ಟಿಕ್ ಪೆಟ್ಟಿಗೆಯಿಂದ ಹೊರತೆಗೆಯುತ್ತಿರುವ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಹಲವು ಅಕ್ರಮ ವಲಸಿಗರನ್ನು ವಿಮಾನಕ್ಕೆ ಏರಿಸುವುದಕ್ಕೂ ಮುನ್ನ, ಅವರ ಕೈಗಳನ್ನು ಸರಪಣಿ ಹಾಗೂ ಕೋಳಗಳೊಂದಿಗೆ ಬಿಗಿದಿರುವುದನ್ನೂ ಈ ವೀಡಿಯೊ ತೋರಿಸುತ್ತದೆ.
ಅಮೆರಿಕದ ಈ ನಡೆಯ ವಿರುದ್ಧ ಜಾಗತಿಕ ಖಂಡನೆ ವ್ಯಕ್ತವಾಗಿದ್ದು, ಶ್ವೇತ ಭವನ ಹಂಚಿಕೊಂಡಿರುವ ವೀಡಿಯೊವನ್ನು ಕೀಳು ಅಭಿರುಚಿಯದ್ದು ಎಂದು ಹಲವಾರು ಸಾಮಾಜಿಕ ಬಳಕೆದಾರರು ಟೀಕಿಸಿದ್ದಾರೆ.
ಎಲಾನ್ ಮಸ್ಕ್ ಅವರು ವಾವ್ ಎಂದಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೆಕ್ ದೈತ್ಯ ಮಸ್ಕ್ ಕೂಡ ವಿದೇಶಿಯರಾಗಿದ್ದು ದಕ್ಷಿಣ ಆಫ್ರಿಕಾದಿಂದ ಬಂದವರು. ಅವರ ವಿಮಾನ ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು 1990ರಲ್ಲಿ ಎಲಾನ್ ಮಸ್ಕ್ ವಿದ್ಯಾರ್ಥಿಯಾಗಿದ್ದ ವೀಸಾ ಅವಧಿ ಮುಗಿದು ಅಮೆರಿಕದಲ್ಲಿ ನೆಲೆಸಿದ್ದರು ಎಂದು ನೆನಪಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, ಅಮೆರಿಕಕ್ಕೆ ಅಗತ್ಯವಿದ್ದಾಗ ಸಂಕೋಲೆ ಹಾಕಿ ಆಫ್ರಿಕಾದಿಂದ ಜನರನ್ನು ಕರೆತರಲಾಗಿತ್ತು. ಈಗ ಅವರು ಬೇಡವೆನಿಸಿದಾಗ ಅದೇ ರೀತಿ ಕೋಳ ತೊಡಿಸಿ ವಾಪಾಸ್ ಕಳುಹಿಸಲಾಗುತ್ತಿದೆ ಎಂದು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಹಲವು ಬಳಕೆದಾರರು ಶ್ವೇತಭವನದ ಅಧಿಕೃತ ಖಾತೆಯಿಂದ ಈ ರೀತಿಯ ವೀಡಿಯೊ ಹಂಚಿಕೊಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಕಲಿ ಖಾತೆ ಆಗಿರಬಹುದೇ ಎಂದು ಕಮೆಂಟ್ ಮಾಡಿದ್ದಾರೆ. ಅಕ್ರಮ ವಲಸಿಗರನ್ನು ಕಳುಹಿಸುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅಮಾನವೀಯ ನಡೆ ಸರಿಯಲ್ಲ ಎಂದು ಹಲವರು ಆಕ್ಷೇಪಿಸಿದ್ದಾರೆ.