ಅಫ್ಘಾನ್ನಲ್ಲಿನ ಭಯೋತ್ಪಾದಕರ ಅಡಗುತಾಣಗಳ ಮೇಲೆ ಪಾಕಿಸ್ತಾನದಿಂದ ವಾಯುದಾಳಿ: 28 ಜನರು ಮೃತ್ಯು
Photo Credit : AP , PTI
ಇಸ್ಲಾಮಾಬಾದ್: ಪೂರ್ವ ಅಫ್ಘಾನಿಸ್ತಾನದಲ್ಲಿ ಶಂಕಿತ ಭಯೋತ್ಪಾದಕರ ಅಡಗುತಾಣಗಳ ಮೇಲೆ ಪಾಕಿಸ್ತಾನದ ಯುದ್ಧ ವಿಮಾನಗಳು ಸೋಮವಾರ ವಾಯುದಾಳಿ ನಡೆಸಿದ್ದು, 28 ಭಯೋತ್ಪಾದಕರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಎರಡೂ ದೇಶಗಳ ಗಡಿ ಬಳಿ ನಡೆದ ಈ ವಾಯುದಾಳಿಯು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತೆ ಹೆಚ್ಚಿಸಿದೆ.
ಸೋಮವಾರ ನಡೆದ ವಾಯುದಾಳಿಯಲ್ಲಿ 28 ಶಂಕಿತ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸರಕಾರ ಹೇಳಿದೆ. ಅಫ್ಘಾನಿಸ್ತಾನದ ಸರಕಾರದ ವಕ್ತಾರ ಝಬಿವುಲ್ಲಾ ಮುಜಾಹಿದ್ ವಾಯುದಾಳಿಯನ್ನು ಖಂಡಿಸಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ.
ಕುನಾರ್ ಪ್ರಾಂತದ ನೂರ್ಗಲ್ ಜಿಲ್ಲೆ ಮತ್ತು ಪಕ್ತಿಕಾ ಪ್ರಾಂತದ ಬರ್ಮಲ್ ಜಿಲ್ಲೆಯಲ್ಲಿ ಬೆಳಗ್ಗೆ ಸುಮಾರು 3 ಗಂಟೆಗೆ ಈ ದಾಳಿಗಳು ನಡೆದಿವೆ. ನೂರ್ಗಲ್‍ನ ಪಠಾನ್ ಗ್ರಾಮದಲ್ಲಿ ಮನೆಯೊಂದು ಧ್ವಂಸಗೊಂಡಿದ್ದು, ಮೂವರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಝಬಿವುಲ್ಲಾ ತಿಳಿಸಿದ್ದಾರೆ.