ಸಾಂದರ್ಭಿಕ ಚಿತ್ರ | Photo Credit : NDTV 

ನೈರೋಬಿ: ಅಮೆರಿಕವು ತಮಗೆ ಯಾವುದೇ ಸಂಬಂಧವಿಲ್ಲದ ದೇಶಗಳಿಂದ ಬಂದ ವಲಸಿಗರನ್ನು ಸ್ವೀಕರಿಸಲು 35 ರಾಷ್ಟ್ರಗಳೊಂದಿಗೆ ಮಾಡಿಕೊಂಡ ಗೌಪ್ಯ ಒಪ್ಪಂದಗಳ ಅಡಿಯಲ್ಲಿ 25,000ಕ್ಕೂ ಹೆಚ್ಚು ಜನರನ್ನು ಗಡಿಪಾರು ಮಾಡಿದೆ ಎಂದು ಸೋಮವಾರ ಪ್ರಕಟವಾದ ತನಿಖಾ ವರದಿಯೊಂದು ತಿಳಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 2025ರಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ, ಕಾನೂನುಬದ್ಧವಾಗಿ ಸ್ವದೇಶಕ್ಕೆ ವಾಪಾಸು ಕಳುಹಿಸಲು ಸಾಧ್ಯವಾಗದ ವಲಸಿಗರನ್ನು ಸ್ವೀಕರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಅಮೆರಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ.

ಅಂತರ್‍ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದೊಂದಿಗೆ `ಫಾರ್ಬಿಡನ್ ಸ್ಟೋರೀಸ್' ನಡೆಸಿದ ತನಿಖೆಯ ಪ್ರಕಾರ, ವಲಸಿಗರನ್ನು ಸ್ವೀಕರಿಸುವ ದೇಶಗಳಿಗೆ ನೇರವಾಗಿ ನೀಡಲು ಅಥವಾ ಅವರ ಮರುಕಳುಹಿಸುವಿಕೆಯನ್ನು ಸುಗಮಗೊಳಿಸಲು ವಿಶ್ವಸಂಸ್ಥೆಯ ಸಹಸಂಸ್ಥೆಗಳಿಗೆ ನೀಡಲು ಅಮೆರಿಕ ಆಡಳಿತವು ಸುಮಾರು 41 ಕೋಟಿ ಡಾಲರ್ ಹಣವನ್ನು ಕಾಯ್ದಿರಿಸಿದೆ. ಅಲ್ಲದೆ, ಆಗಸ್ಟ್ 31, 2026ರ ವೇಳೆಗೆ ಕನಿಷ್ಠ 25,447 ಜನರನ್ನು ಮೂರನೇ ದೇಶಗಳಿಗೆ ಗಡಿಪಾರು ಮಾಡಲಾಗಿದೆ.

ಇವರಲ್ಲಿ ಸುಮಾರು 20,000 ಜನರನ್ನು ಮೆಕ್ಸಿಕೋಗೆ ಕಳುಹಿಸಲಾಗಿದೆ. ಉಳಿದವರನ್ನು ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಪೆಸಿಫಿಕ್ ಪ್ರದೇಶದ 27 ಇತರ ದೇಶಗಳಿಗೆ ಹಂಚಿ ಕಳುಹಿಸಲಾಗಿದೆ ಹಾಗೂ ಇನ್ನೂ ಏಳು ದೇಶಗಳೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ.

ಮೇ 2025ರಲ್ಲಿ ರಚಿಸಲಾದ `ಆಫೀಸ್ ಆಫ್ ರಿಮೈಗ್ರೇಷನ್' ಎಂಬ ವಿದೇಶಾಂಗ ಇಲಾಖೆಯ ವಿಭಾಗವು ಹೆಚ್ಚಿನ ಮಾತುಕತೆ ಮತ್ತು ಪಾವತಿಗಳನ್ನು ನಿರ್ವಹಿಸಿದೆ. ಗಡಿಪಾರು ಮಾಡಿದವರನ್ನು ಸ್ವೀಕರಿಸುವ ಸಂಬಂಧ ಕ್ಯಾಮರೂನ್ 2025ರ ಡಿಸೆಂಬರ್‌ನಲ್ಲಿ ಅಮೆರಿಕದೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತ್ತು. ಒಂದು ವಾರದ ನಂತರ, ಅದು ಸುಮಾರು 400 ದಶಲಕ್ಷ ಡಾಲರ್ ಮೌಲ್ಯದ ಐದು ವರ್ಷಗಳ ಆರೋಗ್ಯ ನೆರವು ಕಾರ್ಯಕ್ರಮಕ್ಕೂ ಸಹಿ ಹಾಕಿತು. ಅಲ್ಲದೆ, ಕ್ಯಾಮರೂನ್‍ನಲ್ಲಿರುವ ವಿಶ್ವಸಂಸ್ಥೆ ನಿರಾಶ್ರಿತರ ಸಂಸ್ಥೆಗೆ ಹೆಚ್ಚುವರಿಯಾಗಿ 30 ದಶಲಕ್ಷ ಡಾಲರ್ ನೀಡುವುದಾಗಿ ಅಮೆರಿಕ ತಿಳಿಸಿತು. ಜನವರಿ 14 ರಂದು ಗಡಿಪಾರಾದವರನ್ನು ಹೊತ್ತ ಮೊದಲ ವಿಮಾನ ಕ್ಯಾಮರೂನ್‍ಗೆ ತಲುಪಿತು.

18,000ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರವಾದ ಪಲಾವ್, ಮೂರನೇ ದೇಶದ 75 ಪ್ರಜೆಗಳನ್ನು ಸ್ವೀಕರಿಸುವುದಕ್ಕೆ ಪ್ರತಿಯಾಗಿ 7.5 ದಶಲಕ್ಷ ಡಾಲರ್ ಪಡೆಯುವ ಒಪ್ಪಂದಕ್ಕೆ ಡಿಸೆಂಬರ್ 2025ರಲ್ಲಿ ಸಹಿ ಹಾಕಿತು.

ವೀಸಾ ನಿಷೇಧ, ನಿರ್ಬಂಧಗಳ ಮೂಲಕ ಒತ್ತಡ ತಂತ್ರ

ಗಡಿಪಾರು ಮಾಡಿದವರನ್ನು ಸ್ವೀಕರಿಸುವಂತೆ ಆಫ್ರಿಕನ್ ದೇಶಗಳ ಮೇಲೆ ಒತ್ತಡ ಹೇರಲು ಅಮೆರಿಕ ವೀಸಾ ನಿಷೇಧ ಮತ್ತು ನಿರ್ಬಂಧಗಳನ್ನು ಬಳಸುತ್ತಿದೆ.

ಗಡಿಪಾರಾದ ಜನರನ್ನು ಯಾವುದೇ ಆರೋಪವಿಲ್ಲದೆ, ತಮಗೆ ಸಂಬಂಧವಿಲ್ಲದ ಮತ್ತು ಯಾವುದೇ ಹಕ್ಕುಗಳಿಲ್ಲದ ದೇಶಗಳಲ್ಲಿ ಬಂಧಿಸಿಡುವ ಮೂಲಕ `ಕಾನೂನುಬಾಹಿರ ಕತ್ತಲಿಗೆ' ತಳ್ಳಲಾಗುತ್ತಿದೆ. ಆಫ್ರಿಕಾದ 54 ದೇಶಗಳ ಪೈಕಿ 49 ದೇಶಗಳನ್ನು ಗಡಿಪಾರು ಆದವರನ್ನು ಸ್ವೀಕರಿಸುವ ಕುರಿತು ಸಂಪರ್ಕಿಸಲಾಗಿದೆ ಎಂದು `ಫಾರ್ಬಿಡನ್ ಸ್ಟೋರೀಸ್' ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor