×
Ad

Gaza ಶಾಂತಿ ಮಂಡಳಿ ಈ ವರ್ಷಾಂತ್ಯಕ್ಕೆ ರಚನೆ: ಅರಬ್, ಪಾಶ್ಚಿಮಾತ್ಯ ರಾಜತಾಂತ್ರಿಕರ ಹೇಳಿಕೆ

ತಂತ್ರಜ್ಞರ ಸಮಿತಿಯ ಬಗ್ಗೆಯೂ ನಿರ್ಧಾರ

Update: 2025-12-06 21:53 IST

Photo:thehindu

ದೋಹ, ಡಿ.6: ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿರುವ ಕದನ ವಿರಾಮದ ಮುಂದಿನ ಹಂತವಾಗಿ Gaza ಪಟ್ಟಿಯಲ್ಲಿ ಆಡಳಿತ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಅಂತಾರಾಷ್ಟ್ರೀಯ ಮಂಡಳಿಯನ್ನು ಈ ವರ್ಷಾಂತ್ಯದಲ್ಲಿ ಘೋಷಿಸಲಾಗುವುದು ಎಂದು ಅರಬ್ ಮತ್ತು ಪಾಶ್ಚಿಮಾತ್ಯ ರಾಜತಾಂತ್ರಿಕರು ಹೇಳಿದ್ದಾರೆ.

ಕದನ ವಿರಾಮ ಒಪ್ಪಂದದ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯ `ಶಾಂತಿ ಮಂಡಳಿ'ಯು ಎರಡು ವರ್ಷಗಳ ಕಾರ್ಯಾವಧಿಯಲ್ಲಿ Gazaದ ಪುನರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲಿದ್ದು ವಿಶ್ವಸಂಸ್ಥೆಯ ಆದೇಶದಡಿ ಇದರ ಕಾರ್ಯಾವಧಿಯನ್ನು ನವೀಕರಿಸಬಹುದಾಗಿದೆ. ಮಧ್ಯಪ್ರಾಚ್ಯ ಮತ್ತು ಪಾಶ್ಚಿಮಾತ್ಯ ದೇಶಗಳ ಹಲವು ನಾಯಕರನ್ನು ಇದು ಒಳಗೊಂಡಿರುತ್ತದೆ ಎಂದು `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಯುದ್ದೋತ್ತರ Gazaದ ದೈನಂದಿನ ಆಡಳಿತ ನಿರ್ವಹಿಸುವ ಫೆಲೆಸ್ತೀನಿಯನ್ ತಂತ್ರಜ್ಞರ ಸಮಿತಿಯನ್ನೂ ಇದೇ ಸಂದರ್ಭ ಘೋಷಿಸಲಾಗುವುದು. ಈ ವರ್ಷಾಂತ್ಯದಲ್ಲಿ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ನಡೆಯಲಿರುವ ಸಭೆಯ ಬಳಿಕ ಶಾಂತಿ ಮಂಡಳಿ ಮತ್ತು ತಂತ್ರಜ್ಞರ ಸಮಿತಿಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು. Gaza ಪಟ್ಟಿಯಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಹಮಾಸ್ ಗುಂಪು ಶಸ್ತ್ರಾಸ್ತ್ರ ತ್ಯಜಿಸಿರುವುದನ್ನು ಖಚಿತಪಡಿಸಿಕೊಳ್ಳಲು ಸಶಸ್ತ್ರ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆಯ ಸ್ಥಾಪನೆಯೂ ಕದನ ವಿರಾಮ ಒಪ್ಪಂದದಲ್ಲಿ ಸೇರಿದೆ. ಈ ಪಡೆಯಲ್ಲಿ ಯಾವ ದೇಶಗಳು ಪಾಲ್ಗೊಳ್ಳಬೇಕು ಎಂಬ ಬಗ್ಗೆ ಮಾತುಕತೆ ಮುಂದುವರಿದಿದೆ. ಆದರೆ 2026ರ ಪ್ರಥಮ ತ್ರೈಮಾಸಿಕದಲ್ಲಿ ನಿಯೋಜನೆಗೆ ಚಾಲನೆ ದೊರಕುವ ನಿರೀಕ್ಷೆಯಿದೆ. ಯುದ್ಧದಿಂದ ಜರ್ಝರಿತಗೊಂಡಿರುವ Gaza ಪ್ರದೇಶದಲ್ಲಿ ಟ್ರಂಪ್ ಅವರ 20 ಅಂಶದ ಶಾಂತಿ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಈ ಘೋಷಣೆ ಮಹತ್ವದ ಹೆಜ್ಜೆಯಾಗಲಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News