ಬ್ರಿಟನ್ ಪ್ರಧಾನಿಯಾಗಿ ಆ್ಯಂಡಿ ಬರ್ನ್ಹ್ಯಾಮ್ ಅವಿರೋಧ ಆಯ್ಕೆ

ಸೋಮವಾರ ಪ್ರಮಾಣವಚನ ಸ್ವೀಕಾರ

Update: 2026-07-17 19:42 IST

ಆ್ಯಂಡಿ ಬರ್ನ್ಹ್ಯಾಮ್ | Photo Credit : AP 

ಲಂಡನ್, ಜು. 17 : ಲೇಬರ್ ಪಕ್ಷದ ನೂತನ ನಾಯಕರಾಗಿ ಆ್ಯಂಡಿ ಬರ್ನ್ಹ್ಯಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷವು ಶುಕ್ರವಾರ ಪ್ರಕಟಿಸಿದೆ. ಕೀರ್ ಸ್ಟಾರ್ಮರ್ ಅವರ ಬದಲಿಗೆ ಸೋಮವಾರ ಅವರು ಬ್ರಿಟನ್ ನ ಪ್ರಧಾನಿಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹೌಸ್ ಆಫ್ ಕಾಮನ್ಸ್ ನಲ್ಲಿರುವ ಲೇಬರ್ ಪಕ್ಷದ 403 ಸಂಸದರ ಪೈಕಿ 379 ಸಂಸದರು ಆ್ಯಂಡಿ ಬರ್ನ್ಹ್ಯಾಮ್ ಅವರಿಗೆ ಬೆಂಬಲ ಸೂಚಿಸಿದ್ದು, ಇದರೊಂದಿಗೆ ಅವರು ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

"ಲೇಬರ್ ಪಕ್ಷದ ನಾಯಕ ಸ್ಥಾನಕ್ಕೆ ಕೇವಲ ಒಬ್ಬ ಸಂಸದ ಮಾತ್ರ ನಾಮಪತ್ರ ಸಲ್ಲಿಸಿದ್ದರು" ಎಂದು ಲಂಡನ್ ನಲ್ಲಿ ನಡೆದ ಪಕ್ಷದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಬ್ರಿಟನ್ ನ ಗೃಹ ಕಾರ್ಯದರ್ಶಿ ಹಾಗೂ ಲೇಬರ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮುಖ್ಯಸ್ಥೆ ಶಬಾನಾ ಮಹ್ಮೂದ್ ತಿಳಿಸಿದರು.

ಕಳೆದ ಕೆಲವು ವಾರಗಳಿಂದಲೇ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದ ಗ್ರೇಟರ್ ಮ್ಯಾಂಚೆಸ್ಟರ್ ನ ಮಾಜಿ ಮೇಯರ್ ಆ್ಯಂಡಿ ಬರ್ನ್ಹ್ಯಾಮ್, ತಮ್ಮ ಸರ್ಕಾರದ ನೀತಿ ಆದ್ಯತೆಗಳ ಕುರಿತು ಇದುವರೆಗೆ ಅಲ್ಪ ಮಾಹಿತಿಯನ್ನಷ್ಟೇ ಬಹಿರಂಗಪಡಿಸಿದ್ದಾರೆ.

ನಿರ್ಗಮಿತ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಬ್ರಿಟನ್ನ ರಾಜ ಮೂರನೇ ಚಾರ್ಲ್ಸ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿದ ಬಳಿಕ, ಸೋಮವಾರ ಆ್ಯಂಡಿ ಬರ್ನ್ಹ್ಯಾಮ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ನಿರೀಕ್ಷೆಯಿದೆ. ಬಳಿಕ ಅವರು ಬ್ರಿಟನ್ ನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News