ದಕ್ಷಿಣ ಇರಾನ್ ಮೇಲೆ ಅಮೆರಿಕ ತೀವ್ರ ದಾಳಿ : 8 ಮಂದಿ ಮೃತ್ಯು; ಸೇತುವೆ, ವಿಮಾನ ನಿಲ್ದಾಣಕ್ಕೆ ಹಾನಿ
Photo Credit : aljazeera.com
ವಾಶಿಂಗ್ಟನ್, ಜು.17: ಸತತ ಆರನೇ ರಾತ್ರಿಯೂ ಇರಾನ್ ಮೇಲೆ ಭಾರಿ ದಾಳಿಗಳನ್ನು ನಡೆಸಿದ್ದು, ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ ಎಂದು ಅಮೆರಿಕದ ಮಿಲಿಟರಿ ಶುಕ್ರವಾರ ಹೇಳಿದೆ.
ಶುಕ್ರವಾರ ಬೆಳಗ್ಗೆ ಮುಕ್ತಾಯಗೊಂಡ ತನ್ನ ಇತ್ತೀಚಿನ ಕಾರ್ಯಾಚರಣೆಯು ಕರಾವಳಿ ಕಣ್ಗಾವಲು ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳು ಮತ್ತು ನೌಕಾ ಸಾಮರ್ಥ್ಯಗಳು ಸೇರಿದಂತೆ ಇರಾನ್‍ನ ಸುಮಾರು 20 ಮಿಲಿಟರಿ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‍ಕಾಮ್) ತಿಳಿಸಿದೆ. ಹೆದ್ದಾರಿ ಮತ್ತು ರೈಲ್ವೆ ಸೇತುವೆಗಳ ಮೇಲಿನ ದಾಳಿಗಳು ಇರಾನ್‍ನ ಪ್ರಮುಖ ಬಂದರಾದ ಬಂದರ್ ಅಬ್ಬಾಸ್ ಅನ್ನು ಮಧ್ಯ ಇರಾನ್ ಹಾಗೂ ರಾಜಧಾನಿ ಟೆಹ್ರಾನ್‍ಗೆ ಸಂಪರ್ಕಿಸುವ ರಸ್ತೆಗಳಿಂದ ಕಡಿತಗೊಳಿಸುವ ಗುರಿಯನ್ನು ಹೊಂದಿದ್ದವು.
ಅಮೆರಿಕವು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದು ಸೇತುವೆಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿರುವುದಾಗಿ ದಕ್ಷಿಣ ಇರಾನ್‍ನ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ರಾತ್ರಿ ಆಗ್ನೇಯ ಇರಾನ್‍ನ ಇರಾನ್‍ಶಹರ್ ವಿಮಾನ ನಿಲ್ದಾಣ, ಒಂದು ರೈಲ್ವೆ ನಿಲ್ದಾಣ ಮತ್ತು ಹೋರ್ಮೋಜ್ಗನ್ ಪ್ರಾಂತ್ಯದ ಆರು ಸೇತುವೆಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. ಬಂದರ್-ಎ-ಖಮೀರ್ ನಗರದ ಸಮೀಪವಿರುವ ಮೂರು ಸೇತುವೆಗಳು ಸೇರಿದಂತೆ ಅಹ್ವಾಜ್, ಕೆಶ್ಮ್, ಬುಶೆಹರ್, ದಷ್ಟಿ, ಬೋಸ್ತಾನ್, ಸಿರಿಕ್ ಮತ್ತು ಬಂದರ್-ಎ-ಲೆಂಗೆಹ್ ಪ್ರದೇಶಗಳ ಮೇಲೆ ದಾಳಿ ನಡೆದಿದೆ. ಇದರಿಂದಾಗಿ ಭಾರಿ ಹಾನಿ ಸಂಭವಿಸಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಿಶ್ ದ್ವೀಪದ ಮೇಲೂ ವೈಮಾನಿಕ ದಾಳಿಗಳು ವರದಿಯಾಗಿದ್ದು, ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸ್ಥಗಿತಗೊಂಡಿದೆ ಎಂದು ಇರಾನ್‍ನ `ಇರ್ನಾ' ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.