ಜೋರ್ಡಾನ್ ನೆಲೆಯಲ್ಲಿನ ಯುದ್ಧವಿಮಾನ ಧ್ವಂಸ ಅಮೆರಿಕಕ್ಕೆ ದೊಡ್ಡ ಹೊಡೆತ : ಐಆರ್‌ಜಿಸಿ ಪ್ರತಿಪಾದನೆ

Update: 2026-07-17 20:02 IST

Photo Credit : AP 

ಟೆಹರಾನ್, ಜು.17: ಜೋರ್ಡಾನ್‍ನಲ್ಲಿರುವ ಅಮೆರಿಕದ ಸೇನಾನೆಲೆಯ ಮೇಲೆ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ಹಲವು ಯುದ್ಧವಿಮಾನಗಳು ಧ್ವಂಸಗೊಂಡಿವೆ ಎಂದು ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಕಾಪ್ರ್ಸ್ ಗಾರ್ಡ್(ಐಆರ್‌ಜಿಸಿ) ಶುಕ್ರವಾರ ಪ್ರತಿಪಾದಿಸಿದೆ.

ತನ್ನ ದೇಶದೊಳಗೆ ಗುರುವಾರ ರಾತ್ರಿ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ. ಅಮೆರಿಕದ ಹಲವು ಇಂಧನ (ಮರುಪೂರಣ) ತುಂಬುವ ವಿಮಾನಗಳು ಮತ್ತು ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿದ್ದೇವೆ ಮತ್ತು ಇನ್ನೂ ಹಲವು ವಿಮಾನಗಳಿಗೆ ತೀವ್ರ ಹಾನಿ ಉಂಟು ಮಾಡಿದ್ದೇವೆ ಎಂದು ಐಆರ್‌ಜಿಸಿ ವಿವರಿಸಿದೆ. ಇದಕ್ಕೂ ಮುನ್ನ, ಜೋರ್ಡಾನ್ ಮಿಲಿಟರಿಯು ತಾನು ಮೂರು ಇರಾನಿನ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಮತ್ತು ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ತಿಳಿಸಿತ್ತು.

ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:

ಕುವೈತ್‍ನ ವಿದ್ಯುತ್ ಮತ್ತು ನೀರು ನಿರ್ಲವಣೀಕರಣ (ಡಿಸಲಿನೇಷನ್) ಘಟಕದ ಮೇಲೆ ಇರಾನ್ ದಾಳಿ ನಡೆಸಿದ್ದು, ಭಾರಿ ಹಾನಿ ಉಂಟಾಗಿದೆ ಎಂದು ಕುವೈತ್ ಶುಕ್ರವಾರ ತಿಳಿಸಿದೆ.

ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಹಾನಿಯಾಗಿದೆ. ಸದ್ಯ ಬೆಂಕಿಯನ್ನು ನಂದಿಸಲಾಗಿದ್ದು, ಸ್ಟೇಷನ್ ಅನ್ನು ಮತ್ತೆ ಕಾರ್ಯರೂಪಕ್ಕೆ ತರಲು ಕೆಲಸ ಮಾಡಲಾಗುತ್ತಿದೆ ಎಂದು ಕುವೈತ್ ಸರಕಾರ ತಿಳಿಸಿದೆ. ಕುವೈತ್‍ನಲ್ಲಿ ಸುಮಾರು 90% ಕುಡಿಯುವ ನೀರು ನಿರ್ಲವಣೀಕರಣದಿಂದಲೇ (ಸಮುದ್ರದ ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆ) ಬರುತ್ತದೆ.

ಸಿರಿಯಾ, ಜೋರ್ಡಾನ್, ಇರಾಕ್ ಮತ್ತು ಒಮಾನ್‍ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಸಿರಿಯಾದ ಅಲ್-ತನ್ಫ್‍ನಲ್ಲಿರುವ ಅಮೆರಿಕ ವಿಶೇಷ ಕಾರ್ಯಾಚರಣೆಗಳ ಕಮಾಂಡ್ ಸೆಂಟರ್ ಮೇಲೆ ದಾಳಿ ನಡೆಸಿರುವುದಾಗಿ ಐಆರ್‍ಜಿಸಿ ತಿಳಿಸಿದೆ.

ಸಿರಿಯಾ, ಜೋರ್ಡಾನ್ ಮತ್ತು ಇರಾಕ್ ದೇಶಗಳು ಸಂಧಿಸುವ ತ್ರಿ-ಗಡಿ ಭಾಗದಲ್ಲಿರುವ ಅಲ್-ತನ್ಫ್ ನೆಲೆಯಿಂದ ಅಮೆರಿಕ ಸೇನೆಯು ತನ್ನ ಹಿಂತೆಗೆತವನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿತ್ತು.

ಖತರ್‌ ನಲ್ಲಿರುವ ಅಮೆರಿಕದ ರಾಡಾರ್ ವ್ಯವಸ್ಥೆಗಳು ಮತ್ತು ಯುದ್ಧ ವಿಮಾನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಮಿಲಿಟರಿ ತಿಳಿಸಿದೆ.

ಒಮಾನ್‍ನಲ್ಲಿರುವ ಅಮೆರಿಕಕ್ಕೆ ಸೇರಿದ ಎರಡು ರಾಡಾರ್ ಕೇಂದ್ರಗಳ ಮೇಲೆಯೂ ದಾಳಿ ನಡೆದಿದೆ. ಸಲಾಮಾ ರಾಕ್ಸ್‍ನಲ್ಲಿರುವ ಕಡಲ ಕಣ್ಗಾವಲು ರಾಡಾರ್ ಮತ್ತು ಘನಮ್ ಪ್ರದೇಶದಲ್ಲಿರುವ ಅಮೆರಿಕದ ವಾಯು ಕಣ್ಗಾವಲು ರಾಡಾರ್ ಅನ್ನು ಧ್ವಂಸಗೊಳಿಸಲಾಗಿದೆ ಎಂದು ಐಆರ್‍ಜಿಸಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News