South Africa| ಪಬ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ 9 ಮಂದಿ ಮೃತ್ಯು
Photo| NDTV
ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಸಮೀಪದ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ರವಿವಾರ ಬೆಳಗಿನ ಜಾವ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಸಮಯ ಮಧ್ಯರಾತ್ರಿ 1 ಗಂಟೆಗೆ ಸ್ವಲ್ಪ ಮೊದಲು ಪಬ್ ಬಳಿ ಈ ಘಟನೆ ನಡೆದಿದೆ. ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿ ಬಂದಿದ್ದ ಸುಮಾರು 12 ಮಂದಿ ಶಸ್ತ್ರಸಜ್ಜಿತ ಅಪರಿಚಿತರು ಮೊದಲು ಪಬ್ ಮಾಲೀಕರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗುವಾಗ ಸುತ್ತಮುತ್ತಲಿನ ಬೀದಿಗಳಲ್ಲಿ ಇದ್ದ ಜನರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ದಾಳಿಗೊಳಗಾದ ಪಬ್‌ಗೆ ಕಾನೂನುಬದ್ಧ ಪರವಾನಗಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸರಕಾರಿ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ದಾಳಿಯಲ್ಲಿ ಪಬ್‌ನೊಳಗಿದ್ದವರು ಮಾತ್ರವಲ್ಲದೆ ಹೊರಗಿದ್ದ ನಾಗರಿಕರೂ ಗುರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಷ್ಟ್ರೀಯ ಹಾಗೂ ಪ್ರಾಂತೀಯ ಅಪರಾಧ ದೃಶ್ಯ ನಿರ್ವಹಣಾ ತಂಡಗಳು, ಗಂಭೀರ ಅಪರಾಧ ತನಿಖಾ ದಳ, ಅಪರಾಧ ಗುಪ್ತಚರ ಮತ್ತು ಅಪರಾಧ ಪತ್ತೆ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿವೆ ಎಂದು ಗೌಟೆಂಗ್ ಪ್ರಾಂತ್ಯದ ಹಂಗಾಮಿ ಪೊಲೀಸ್ ಆಯುಕ್ತ ಫ್ರೆಡ್ ಕೆಕಾನಾ ತಿಳಿಸಿದ್ದಾರೆ.
ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಮಾಧ್ಯಮ ವರದಿಗಳು ಸಾವಿನ ಸಂಖ್ಯೆ ಹತ್ತು ಎಂದು ತಿಳಿಸಿವೆ. ಈ ಕುರಿತು ಗೌಟೆಂಗ್ ಪ್ರಾಂತ್ಯದ ಪೊಲೀಸ್ ವಕ್ತಾರ ಬ್ರೆಂಡಾ ಮುರಿಡಿಲಿ, ಹತ್ತು ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ. ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.