Australia | ಗುಂಡಿನ ದಾಳಿಯ ವೇಳೆ ಸಾಹಸ ಮೆರೆದ ಅಹ್ಮದ್ ಗೆ 1 ಲಕ್ಷ ಡಾಲರ್ ಬಹುಮಾನ
photo: ndtv
ವಾಷಿಂಗ್ಟನ್, ಡಿ.15: ಬೋಂಡಿ ಬೀಚ್ ನಲ್ಲಿ ಜನರ ಮೇಲೆ ಗುಂಡು ಹಾರಿಸುತ್ತಿದ್ದ ಶೂಟರ್ ನನ್ನು ಪ್ರಾಣದ ಹಂಗು ತೊರೆದು ಮಣಿಸಿದ ಹಣ್ಣಿನ ವ್ಯಾಪಾರಿ ಅಹ್ಮದ್ ಅಲ್ ಅಹ್ಮದ್‍ಗೆ ಅಮೆರಿಕಾದ ಕೋಟ್ಯಾಧಿಪತಿ, ಖಾಸಗಿ ಹೂಡಿಕೆ ಸಂಸ್ಥೆಯ ಮ್ಯಾನೇಜರ್ ಬಿಲ್ ಆಕ್ಮನ್ 1 ಲಕ್ಷ ಡಾಲರ್ ಬಹುಮಾನ ಘೋಷಿಸಿದ್ದಾರೆ.
ಬೋಂಡಿ ಬೀಚ್‍ನಲ್ಲಿ ಹಣ್ಣಿನ ಅಂಗಡಿಯ ವ್ಯಾಪಾರಿ 43 ವರ್ಷ ವಯಸ್ಸಿನ ಅಹ್ಮದ್ ಅಲ್ ಅಹ್ಮದ್ ಅವರು ಪಾರ್ಕ್ ಮಾಡಲಾಗಿದ್ದ ಕಾರಿನ ಹಿಂಬದಿಯಿಂದ ನುಗ್ಗಿಬಂದು ಶೂಟರ್ ನ ಮೇಲೆ ಮುಗಿಬಿದ್ದು ಆತನ ಬಂದೂಕು ಕಸಿದುಕೊಳ್ಳುವ ಮೂಲಕ ಹಲವರ ಜೀವ ಉಳಿಸಿದ್ದಾರೆ. ಈ ಸಾಹಸಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು ಅಹ್ಮದ್ ಹೆಸರಿನಲ್ಲಿ ಆನ್‍ಲೈನ್ ನಿಧಿ ಸಂಗ್ರಹಿಸುವ ಅಭಿಯಾನವೂ ಆರಂಭವಾಗಿದೆ.
`ಗೋ ಫಂಡ್ ಮಿ' ಆನ್‍ಲೈನ್ ಅಭಿಯಾನದಡಿ ಸೋಮವಾರ ಮಧ್ಯಾಹ್ನದ ವರೆಗೆ 3,06,000 ಡಾಲರ್ ನಿಧಿ ಸಂಗ್ರಹಿಸಲಾಗಿದೆ.
ಈ ಮಧ್ಯೆ, ತೋಳು ಮತ್ತು ಕೈಗೆ ಗುಂಡೇಟಿನ ಗಾಯಗಳಾಗಿರುವ ಅಹ್ಮದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.