×
Ad

2026-27ನೇ ಸಾಲಿಗೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೆ ಆಯ್ಕೆಯಾದ ಬಹರೇನ್‌

Update: 2025-06-04 20:52 IST

PC : United Nations

ನ್ಯೂಯಾರ್ಕ್: ಮಂಗಳವಾರ ನಡೆದ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ 2026-27ನೇ ಸಾಲಿಗೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಬಹರೇನ್‌ ಆಯ್ಕೆಯಾಗಿದೆ.

ಕೊಲೊಂಬಿಯಾ, ಕಾಂಗೊ, ಲಾಟ್ವಿಯಾ ಹಾಗೂ ಲೈಬೀರಿಯಾದೊಂದಿಗೆ ಬಹರೇನ್‌ ಕೂಡಾ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ. ಈ ಎಲ್ಲ ರಾಷ್ಟ್ರಗಳೂ ಜನವರಿ 1, 2026ರಿಂದ ಎರಡು ವರ್ಷಗಳ ಕಾಲ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿ ಸೇವೆ ಸಲ್ಲಿಸಲಿವೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ನಿರ್ವಹಿಸುವ ಹೊಣೆಗಾರಿಕೆ ಹೊಂದಿರುವ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ, ಫ್ರಾನ್ಸ್, ರಶ್ಯ, ಬ್ರಿಟನ್ ಹಾಗೂ ಅಮೆರಿಕ ಮಾತ್ರ ಖಾಯಂ ಸದಸ್ಯತ್ವ ಹೊಂದಿವೆ. ಉಳಿದ 10 ರಾಷ್ಟ್ರಗಳು ಖಾಯಂ ಅಲ್ಲದ ಸದಸ್ಯತ್ವವನ್ನು ಹೊಂದಿದ್ದು, ಎರಡು ವರ್ಷಗಳ ಈ ಸದಸ್ಯತ್ವ ಅವಧಿಗೆ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಚುನಾವಣೆಯ ಮೂಲಕ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ, ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್, ಗ್ರೀಸ್, ಪಾಕಿಸ್ತಾನ, ಪನಾಮಾ ಹಾಗೂ ಸೊಮಾಲಿಯಾದ ಸದಸ್ಯತ್ವದ ಅವಧಿ 2026ರಲ್ಲಿ ಅಂತ್ಯಗೊಳ್ಳಲಿರುವುದರಿಂದ, ಈ ಐದು ರಾಷ್ಟ್ರಗಳನ್ನು ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನಾಗಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೆ ಆಯ್ಕೆ ಮಾಡಲಾಗಿದೆ.

ಈ ಪ್ರಕಟಣೆ ಹೊರ ಬೀಳುತ್ತಿದ್ದಂತೆಯೇ, ಈ ಕುರಿತು ಸಂತಸ ವ್ಯಕ್ತಪಡಿಸಿದ ಬಹರೇನ್‌ ವಿದೇಶಾಂಗ ಸಚಿವ ಅಬ್ದುಲ್ಲಾತೀಫ್ ಬಿನ್ ರಶೀದ್ ಅಲ್ಝಯಾನಿ, ಇದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದು, ವಿಶ್ವ ಸಂಸ್ಥೆಯ ಗುರಿಗಳಿಗೆ ತಮ್ಮ ದೇಶ ಬದ್ಧವಾಗಿರಲಿದೆ ಎಂದು ಘೋಷಿಸಿದ್ದಾರೆ.

“ಇಂದಿನ ಚುನಾವಣಾ ಫಲಿತಾಂಶವು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಬಹರೇನ್‌ ನ ರಾಜತಾಂತ್ರಿಕ ಪ್ರಯತ್ನಗಳ ಮೇಲಿರಿಸಿರುವ ಅಚಲ ನಂಬಿಕೆ ಮತ್ತು ವಿಶ್ವಾಸದ ಪ್ರತೀಕವಾಗಿದೆ. ಈ ಫಲಿತಾಂಶವು ಜಾಗತಿಕ ಮಟ್ಟದಲ್ಲಿ ಶಾಂತಿ, ಸ್ಥಿರತೆ ಹಾಗೂ ಸಹಭಾಗಿತ್ವವನ್ನು ಪೋಷಿಸುವ ನಮ್ಮ ದೃಢ ಬದ್ಧತೆಯನ್ನು ಒತ್ತಿ ಹೇಳಿದೆ” ಎಂದು ಅವರು ನ್ಯೂಯಾರ್ಕ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News