ರಫಾ ಗಡಿದಾಟು ತೆರೆಯಲು ಇಸ್ರೇಲ್ ಗೆ ಅಮೆರಿಕ ಆಗ್ರಹ
ಕದನ ವಿರಾಮದ ಮುಂದಿನ ಹಂತಕ್ಕೆ ಪ್ರವೇಶಿಸಲು ಆಗ್ರಹ
Photo : PTI
ಟೆಲ್ ಅವೀವ್, ಜ.25: ಗಾಝಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದಾಟು (ಬಾರ್ಡರ್ ಕ್ರಾಸಿಂಗ್) ತಕ್ಷಣ ತೆರೆಯಬೇಕು ಮತ್ತು ಗಾಝಾ ಕದನ ವಿರಾಮದ ಎರಡನೇ ಹಂತಕ್ಕೆ ಮುಂದುವರಿಯಲು ಸಿದ್ಧರಾಗಬೇಕು ಎಂದು ಅಮೆರಿಕಾ ಇಸ್ರೇಲ್ ಅನ್ನು ಆಗ್ರಹಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜಾರೆಡ್ ಕುಷ್ನರ್ ಶನಿವಾರ ಇಸ್ರೇಲ್‌ಗೆ ಆಗಮಿಸಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸಭೆ ನಡೆಸಿದರು. ಗಾಝಾ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಮುಂದಿರಿಸಿರುವ 20 ಅಂಶಗಳ ಯೋಜನೆಯನ್ನು ಮುನ್ನಡೆಸುವ ಪ್ರಯತ್ನಗಳ ಮೇಲೆ ಮಾತುಕತೆ ಕೇಂದ್ರೀಕೃತವಾಗಿತ್ತು ಎಂದು ಶ್ವೇತಭವನ ತಿಳಿಸಿದೆ.
ಗಾಝಾದಲ್ಲಿ ಇನ್ನೂ ಉಳಿದಿರುವ ಒತ್ತೆಯಾಳು ರ‍್ಯಾನ್ ಗ್ವಿಲಿಯ ಮೃತದೇಹವನ್ನು ಮರುಪಡೆಯಲು ಅಮೆರಿಕಾ ಇಸ್ರೇಲ್ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಜೊತೆಗೆ, ಗಾಝಾವನ್ನು ಮಿಲಿಟರಿ ರಹಿತ ವಲಯವನ್ನಾಗಿಸುವ ಪ್ರಯತ್ನಗಳ ಬಗ್ಗೆ ಅಮೆರಿಕಾ ನಿಯೋಗ ನೆತನ್ಯಾಹುಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ಟ್ರಂಪ್ ಮಧ್ಯಸ್ಥಿಕೆಯ ಒಪ್ಪಂದವನ್ನು ಎರಡನೇ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ಅಮೆರಿಕಾ ಉತ್ಸುಕವಾಗಿದೆ. ಆದರೆ ಹಮಾಸ್ ಒತ್ತೆಯಾಳುವಿನ ಅವಶೇಷಗಳನ್ನು ಹಿಂದಿರುಗಿಸುವವರೆಗೆ ಕಾಯಬೇಕು ಎಂಬ ಒತ್ತಡವನ್ನು ನೆತನ್ಯಾಹು ಎದುರಿಸುತ್ತಿದ್ದಾರೆ.
ಹಮಾಸ್ ಅಂತರಾಷ್ಟ್ರೀಯ ಸಮುದಾಯವನ್ನು ವಂಚಿಸುತ್ತಿದೆ. ರ‍್ಯಾನ್ ಗ್ವಿಲಿಯ ಮೃತದೇಹವನ್ನು ಹಿಂದಿರುಗಿಸಲು ನಿರಾಕರಿಸಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಶೋಧ ಕಾರ್ಯಾಚರಣೆಗೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಹಮಾಸ್ ಆರೋಪಿಸಿದೆ.
ಎರಡನೇ ಹಂತದ ದೊಡ್ಡ ಸಂಕೇತವೆಂದರೆ ಗಾಝಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದಾಟನ್ನು ಮತ್ತೆ ತೆರೆಯುವುದು. ಮುಂದಿನ ವಾರದಲ್ಲಿ ಗಡಿ ದಾಟು ಎರಡೂ ದಿಕ್ಕಿನಿಂದ ತೆರೆಯುವ ನಿರೀಕ್ಷೆಯಿದೆ ಎಂದು ಗಾಝಾದ ಭವಿಷ್ಯದ ತಾಂತ್ರಿಕ ಸರ್ಕಾರದ ಮುಖ್ಯಸ್ಥ ಆಲಿ ಶಾತ್ ಹೇಳಿದ್ದಾರೆ. ಆದರೆ ಈ ವಿಷಯದ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
ಗಡಿ ದಾಟುವಿನ ಗಾಝಾ ಬದಿ 2024ರಿಂದ ಇಸ್ರೇಲ್ ಮಿಲಿಟರಿಯ ನಿಯಂತ್ರಣದಲ್ಲಿದೆ.
ಈ ನಡುವೆ, ಈಜಿಪ್ಟ್ ವಿದೇಶಾಂಗ ಸಚಿವ ಬದೆರ್ ಅಬ್ದೆಲಾಟ್ಟಿ ಅವರು ಗಾಝಾ ಶಾಂತಿ ಮಂಡಳಿಯ ನಿರ್ದೇಶಕ ನಿಕೋಲಾಯ್ ಮಡೆನೋವ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕದನ ವಿರಾಮದ ಎರಡನೇ ಹಂತದ ಅನುಷ್ಠಾನ ಕುರಿತು ಚರ್ಚಿಸಿರುವುದಾಗಿ ವರದಿಯಾಗಿದೆ.
► ಟರ್ಕಿ ಸೇರ್ಪಡೆಗೆ ವಿರೋಧ
ಕದನ ವಿರಾಮ ಒಪ್ಪಂದದ ಪ್ರಕಾರ ಎಲ್ಲಾ ಒತ್ತೆಯಾಳುಗಳನ್ನು (ಜೀವಂತ ಅಥವಾ ಮೃತದೇಹ) ಹಮಾಸ್ ಹಿಂದಿರುಗಿಸಿದ ಬಳಿಕ ಕದನ ವಿರಾಮದ ಎರಡನೇ ಹಂತಕ್ಕೆ ಪ್ರವೇಶಿಸಲಾಗುತ್ತದೆ. ಈ ವಾರ ಗ್ವಿಲ್ ಮೃತದೇಹವನ್ನು ನಮಗೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಅದರ ಬಳಿಕ ಎರಡನೇ ಹಂತಕ್ಕೆ ಮುಂದುವರಿಯಬಹುದು ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ನಮ್ಮ ದೊಡ್ಡ ಪ್ರತಿಸ್ಪರ್ಧಿ ಟರ್ಕಿಯನ್ನು ನಮ್ಮ ಗಡಿಯಲ್ಲಿ ಇರಿಸಲು ವಿಟ್ಕಾಫ್ ಒತ್ತಾಯಿಸುತ್ತಿದ್ದಾರೆ. ಗಡಿಯಾರವು ಟರ್ಕಿಯೊಂದಿಗಿನ ಘರ್ಷಣೆಯತ್ತ ಹಿಂದಕ್ಕೆ ಚಲಿಸುತ್ತಿದೆ. ಇದು ನಮ್ಮ ಭದ್ರತೆಗೆ ಸ್ಪಷ್ಟ ಅಪಾಯವಾಗಿದೆ. ವಿಟ್ಕಾಫ್ ಖತರ್ ನ ಹಿತಾಸಕ್ತಿಗೆ ಲಾಬಿ ನಡೆಸುವ ಅಧಿಕಾರಿಯಾಗಿ ಮಾರ್ಪಟ್ಟಿದ್ದಾರೆ’ ಎಂದು ಆರೋಪಿಸಿರುವುದಾಗಿ ವರದಿಯಾಗಿದೆ.