×
Ad

ಫೆ. 1ರಂದು ಮಾತುಕತೆ ಮುಂದುವರಿಸಲು ಉಕ್ರೇನ್, ರಶ್ಯ, ಅಮೆರಿಕ ಒಪ್ಪಿಗೆ

Update: 2026-01-25 23:12 IST

ಡೊನಾಲ್ಡ್ ಟ್ರಂಪ್ | Photo Credit : PTI

ಅಬುಧಾಬಿ, ಜ.25: ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆಯುವ ನೇರ ಮಾತುಕತೆಯ ಎರಡನೇ ಸುತ್ತನ್ನು ಫೆಬ್ರವರಿ 1ರಂದು ಮುಂದುವರಿಸಲು ಉಕ್ರೇನ್ ಮತ್ತು ರಶ್ಯ ಒಪ್ಪಿಕೊಂಡಿವೆ.

‘ಯುಎಇಯಲ್ಲಿ ತ್ರಿಪಕ್ಷೀಯ ಮಾತುಕತೆ ಫೆಬ್ರವರಿ 1ರಂದು ಮುಂದುವರಿಯಲಿದೆ. ಎಲ್ಲರನ್ನೂ ಒಟ್ಟುಗೂಡಿಸುವುದು ದೊಡ್ಡ ಹೆಜ್ಜೆಯೆಂದು ಭಾವಿಸುತ್ತೇನೆ. ಇದು ಒಂದು ತೀರ್ಮಾನಕ್ಕೆ ಬರಲು ಅಗತ್ಯವಿರುವ ವಿವರಗಳನ್ನು ನಿರೂಪಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದಕ್ಕೆ ದೃಢೀಕರಣವಾಗಿದೆ’ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಮಾರು ನಾಲ್ಕು ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಿರಿಸಿರುವ ಯೋಜನೆಯ ಬಗ್ಗೆ ರಶ್ಯ ಮತ್ತು ಉಕ್ರೇನ್ ಪ್ರತಿನಿಧಿಗಳು ಅಬುಧಾಬಿಯಲ್ಲಿ ಎರಡು ದಿನಗಳ ಕಾಲ ಮಾತುಕತೆ ನಡೆಸಿದ್ದಾರೆ.

ಬಹಳಷ್ಟು ವಿಷಯಗಳನ್ನು ಚರ್ಚಿಸಲಾಗಿದೆ ಮತ್ತು ಮಾತುಕತೆ ರಚನಾತ್ಮಕವಾಗಿತ್ತು ಎಂಬುದೇ ಮುಖ್ಯವಾಗಿದೆ. ಯುದ್ಧವನ್ನು ಕೊನೆಗೊಳಿಸುವ ಸಂಭವನೀಯ ಮಾನದಂಡಗಳ ಕುರಿತು ಚರ್ಚೆ ಕೇಂದ್ರೀಕೃತವಾಗಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಎರಡೂ ಕಡೆಯ ಉನ್ನತ ಮಿಲಿಟರಿ ಅಧಿಕಾರಿಗಳನ್ನು ಒಳಗೊಂಡಿದ್ದ ಸಭೆ ರಚನಾತ್ಮಕ ಮತ್ತು ಸಕಾರಾತ್ಮಕ ವಾತಾವರಣದಲ್ಲಿ ನಡೆಯಿತು. ಮಾತುಕತೆಗಳು ಅಮೆರಿಕಾ ಪ್ರಸ್ತಾವಿತ ಶಾಂತಿ ಚೌಕಟ್ಟಿನ ಮಹತ್ವದ ಅಂಶಗಳು ಮತ್ತು ವಿಶ್ವಾಸ ನಿರ್ಮಾಣ ಕ್ರಮಗಳ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ಯುಎಇ ಸರ್ಕಾರದ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ರಶ್ಯದ ಪಡೆಗಳು ಮುನ್ನಡೆ ಸಾಧಿಸಿರುವ ಉಕ್ರೇನ್ ನ ಪೂರ್ವ ಡೊನ್ಬಾಸ್ ಪ್ರಾಂತದ ಭವಿಷ್ಯದ ವಿಷಯವು ವಿವಾದ ಬಗೆಹರಿಸುವಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಉಕ್ರೇನ್ ಪಡೆ ಈ ಪ್ರದೇಶದಿಂದ ಹಿಂದೆ ಸರಿಯಬೇಕು ಎಂದು ರಶ್ಯ ಪಟ್ಟುಹಿಡಿದಿದ್ದರೆ, ತನ್ನ ಭೂಪ್ರದೇಶವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News