ಪಾಕಿಸ್ತಾನ| ಮದುವೆ ಮನೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಜನರು ಮೃತ್ಯು
PC : timesofindia
ಪೇಷಾವರ, ಜ.24: ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಶುಕ್ರವಾರ ತಡರಾತ್ರಿ ವಿವಾಹ ಸಮಾರಂಭದ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು ಇತರ 25 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಖುರೇಷಿ ಮೊರ್ ಪ್ರದೇಶದ ಶಾಂತಿ ಸಮಿತಿಯ ನಾಯಕ ನೂರ್ ಅಹ್ಮದ್ ಮೆಷುದ್ ಅವರ ನಿವಾಸದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿರುವುದಾಗಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮನೆಯಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು ಮತ್ತು ಅತಿಥಿಗಳು ನೃತ್ಯ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದ್ದು ಸಭಾಂಗಣದ ಛಾವಣಿ ಕುಸಿದು ಬಿದ್ದಿದ್ದು ಸ್ಫೋಟದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕುಸಿದು ಬಿದ್ದ ಛಾವಣಿಯಡಿ ಹಲವರು ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ವರದಿಯು ಹೇಳಿದೆ.